ಎಚ್ಚೆತ್ತುಕೊಳ್ಳಬೇಕಾಗಿದೆ ಉಭಯ ಸರ್ಕಾರಗಳು
ಜಾಲ್ಸೂರು – ಕಾಸರಗೋಡು ಅಂತರಾಜ್ಯ ರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರಿಗೆ, ವಾಹನ ಪ್ರಯಾಣಿಕರಿಗೆ ಭಯ ಹುಟ್ಟಿಸಿದ್ದ ಕಾಡಾನೆ ಬಳಿಕ ಅಲ್ಲೇ ಸಮೀಪದ ಕಾಡಿಗೆ ತೆರಳಿದ್ದು, ನ.11ರಂದು ಬೆಳಿಗ್ಗೆ ಸುಮಾರು ಏಳು ಕಾಡಾನೆಗಳ ಹಿಂಡು ಪಂಜಿಕಲ್ಲಿನ ಕಾಡಿನಲ್ಲಿ ಕಂಡುಬಂದಿದೆ.
ಘಟನೆಯ ಬಳಿಕ ‘ಸುದ್ದಿ’ ತಂಡ ಸಾಕ್ಷಾತ್ ವರದಿಗಾಗಿ ಅಲ್ಲಿಗೆ ತೆರಳಿದ್ದ ವೇಳೆ ಕಾಡಿನಲ್ಲಿ ಒಂದು ಮರಿಯಾನೆ ಸಹಿತ ಸುಮಾರು ಏಳು ಕಾಡಾನೆಗಳು ಕಂಡು ಬಂದಿದೆ.
ಹಗಲು ಹೊತ್ತಿನಲ್ಲಿ ಕಾಡಿನ ನಡುವಲ್ಲಿ ಇರುವ ಕಾಡಾನೆಗಳ ಹಿಂಡು ರಾತ್ರಿಯಾಗುತ್ತಿದ್ದಂತೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ, ಮಂಡೆಕೋಲು ಗ್ರಾಮದ ದೇವರಗುಂಡ, ಮುರೂರು, ಪಂಜಿಕಲ್ಲು ಗಡಿ ಭಾಗದಲ್ಲಿ ಸಂಚರಿಸಿ, ಕೃಷಿಕರ ತೋಟದಲ್ಲಿ ಹಾನಿ ಮಾಡುತ್ತಿದ್ದು, ಈಗಾಗಲೇ ಈ ಭಾಗದ ಹಲವಾರು ಕೃಷಿಕರ ತೋಟಗಳನ್ನು ಹಾನಿ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾಡಾನೆಗಳು ಹಗಲು ಹೊತ್ತಿನಲ್ಲೇ ರಸ್ತೆಯಲ್ಲಿ ಕಂಡು ಬಂದಿದ್ದು, ದ್ವಿಚಕ್ರ ಸೇರಿದಂತೆ ವಾಹನ ಸವಾರರು ಭಯದಿಂದ ಅತ್ತಿಂದತ್ತ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೀಗ ಕಾಡಾನೆಗಳ ಹಿಂಡು ಕರ್ನಾಟಕ – ಕೇರಳ ಗಡಿ ಪ್ರದೇಶದಲ್ಲಿದ್ದು, ಎರಡೂ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಇದರತ್ತ ಗಮನಹರಿಸಿ, ಸೂಕ್ತ ಕಾರ್ಯಾಚರಣೆ ಮಾಡಬೇಕಾಗಿದೆ.
ಕಾಡಾನೆಗಳು ಮನುಷ್ಯರಿಗೆ ಹಾನಿ ಮಾಡಿದ ಬಳಿಕವಷ್ಟೇ ಸರ್ಕಾರಗಳು ಎಚ್ಚೆತ್ತುಕೊಳ್ಳಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.