ಡಿ.22 : ಮುಕ್ಕೂರು ಶಾಲಾ ವಾರ್ಷಿಕೋತ್ಸವ

0

ಡಿ.3 : ವಾರ್ಷಿಕೋತ್ಸವ ಪ್ರಯುಕ್ತ ಊರವರಿಗೆ, ಹಳೆ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ

ನ್ಯಾಯವಾದಿ ಜಯಪ್ರಕಾಶ್ ರೈ ಕನ್ನೆಜಾಲು ಅವರಿಂದ 25 ಸಾವಿರ ರೂ. ಘೋಷಣೆ

ಮುಕ್ಕೂರು : ಶತಮಾನದ ಹೊಸ್ತಿಲಿನಲ್ಲಿರುವ ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹದಿನೇಳು ವರ್ಷಗಳ ಬಳಿಕ ವಾರ್ಷಿಕೋತ್ಸವ ನಡೆಯಲಿದ್ದು ಡಿ.22 ರಂದು ಶಾಲಾ ವಾರ್ಷಿಕೋತ್ಸವ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ.

ಶಾಲಾ ವಾರ್ಷಿಕೋತ್ಸವ ಆಚರಿಸುವ ನಿಟ್ಟಿನಲ್ಲಿ ಎರಡನೇ ಹಂತದ ಪೂರ್ವಭಾವಿ ಸಭೆಯು ಮುಕ್ಕೂರು ಶಾಲಾ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಡಿ.3 : ಕ್ರೀಡಾಕೂಟ
ಡಿಸೆಂಬರ್ 3 ರಂದು ಹಳೆ ವಿದ್ಯಾರ್ಥಿಗಳಿಗೆ, ಊರವರಿಗೆ ಮುಕ್ಕೂರು ಶಾಲಾ ವಠಾರದಲ್ಲಿ ಕ್ರೀಡಾಕೂಟ ನಡೆಯಲಿದೆ. 8 ರಿಂದ 12 ನೇ ತರಗತಿ ತನಕ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದ್ದು ಮುಕ್ಕೂರು ವಾರ್ಡ್ ನವರು ಮಾತ್ರ ಭಾಗವಹಿಸಲು ಅವಕಾಶ ನೀಡಲು ನಿರ್ಧರಿಸಲಾಯಿತು. ಕ್ರೀಡಾಕೂಟದ ಉದ್ಘಾಟನೆಗೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.

ಡಿ.22 : ವಾರ್ಷಿಕೋತ್ಸವ
ಡಿ.22 ರಂದು ಮಧ್ಯಾಹ್ನದಿಂದ ಸಂಜೆ ತನಕ ಮುಕ್ಕೂರು ಅಂಗನವಾಡಿ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಸಭಾ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳು, ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಹ್ವಾನಿತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮ ಮುಗಿಸಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ತಾಲೂಕು ಮಟ್ಟದಲ್ಲಿ ಪ್ರೋಟೋಕಾಲ್ ಪ್ರಕಾರ ಅತಿಥಿಗಳನ್ನು ಆಹ್ವಾನಿಸಿ ಸಭೆ ಏರ್ಪಡಿಸಲು ನಿರ್ಧರಿಸಲಾಯಿತು. ಊರವರ ತನು, ಮನ, ಧನದ ಸಹಕಾರ ಪಡೆದು ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.

25 ಸಾವಿರ ರೂ. ಘೋಷಣೆ
ಇದೇ ಸಂದರ್ಭದಲ್ಲಿ ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ, ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಜಯಪ್ರಕಾಶ್ ರೈ ಕನ್ನೆಜಾಲು ಅವರು ಶಾಲಾ ವಾರ್ಷಿಕೋತ್ಸವಕ್ಕೆ 25 ಸಾವಿರ ರೂ. ಧನ ಸಹಾಯ ಘೋಷಿಸಿದರು.

ಶಾಲಾ ಪ್ರಭಾರ ಮುಖ್ಯಗುರು ಅರವಿಂದ ಕೆ ಅವರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಯ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ನ್ಯಾಯವಾದಿ ಜಯಪ್ರಕಾಶ್ ರೈ ಕನ್ನೆಜಾಲು,ಗ್ರಾ.ಪಂ.ಸದಸ್ಯರಾದ ಗುಲಾಬಿ ಬೊಮ್ಮೆಮಾರು, ಚಂದ್ರಾವತಿ ಇಟ್ರಾಡಿ, ಎಸ್ಡಿಎಂಸಿ ಉಪಾಧ್ಯಕ್ಷೆ ಸುಮತಿ ರೈ , ಪೋಷಕರು, ಊರವರು ಉಪಸ್ಥಿತರಿದ್ದರು.