ಹಣತೆ‌ ಬೆಳಗಲಿ ದುಗುಡ ಕಳೆಯಲಿ…

0

✍️..ಮಮತಾ ರವೀಶ್ ಪಡ್ಡಂಬೈಲು

ಬೆಳಗಿದೆ ಹಣತೆ ಸರಿದಿದೆ ಕತ್ತಲು
ಬೆಳಕಿನ ಮೆರವಣಿಗೆ ಸಾಗಿದೆ ಎತ್ತಲು
ದುಗುಡವ ಕಳೆಯಲು ಹಬ್ಬದ ಸಡಗರ
ಹೃದಯವು ಬೆಳಗಲು ಬೆಳಕಿನ ಹಂದರ

ಗಾಳಿಯ ಜೊತೆಗೆ‌ ಬಂಧನ ಬೆಸೆದು
ತೈಲವ ಹೀರಿ ಬತ್ತಿಯು ಉರಿದು
ಭೇಧವನರಿಯದೆ ಜಗವೆಲ್ಲ ಬೆಳಗಿ
ಪ್ರೀತಿಯಿಂದಲೇ ಹರುಷದಿ ಸಾಗಿ

ಚುಕ್ಕಿ ರಂಗೋಲಿಯ ವರ್ಣವು ಮೂಡಿ
ಗುಡಿ ಗೋಪುರದಿ ಲಕ್ಷ್ಮಿ ಪೂಜೆಯ ಮಾಡಿ ಮಧುರತೆಯಲಿ ಬೆಳಗಿತು ಹೊನ್ನ ಹಣತೆಯು
ಮುಂದೆ ಸಾಗಲಿ ವಿವೇಕದ ಪಥವು

ಭುವಿಯಲ್ಲಿ ಸಿಂಗಾರ ಹಣತೆಯ ಪಾಳಿ
ಆಗಸದಲಿ ಬೆಳಕಿನ ಚಿತ್ತಾರದ ದೃಶ್ಯಾವಳಿ
ಅಂಧಕಾರವು ಸರಿಸಿ ಸಂಭ್ರಮವ ಬೆರೆಸಿ
ಜಗದ ಹಿರಿಮೆಯು ಎಲ್ಲೆಡೆ ಪಸರಿಸಿ

ಪ್ರೀತಿಯ ಹಣತೆಯನು ಒಂದಾಗಿ ಬೆಳಗುತಲಿ
ದೀಪಗಳ ಸಾಲು ಬೆಳಗುತಲೇ ಇರಲಿ
ರಾಗ ದ್ವೇಷಗಳು ಮೇಣದಂತೆ ಕರಗಲಿ
ಈ ಧರೆಯು ನಿತ್ಯ ಭ್ರಾತೃತ್ವದಿ ಕೂಡಲಿ

-ಮಮತಾ ರವೀಶ್ ಪಡ್ಡಂಬೈಲು
ಸಮೂಹ ಸಂಪನ್ಮೂಲ ವ್ಯಕ್ತಿ ಸುಳ್ಯ.