ಸೌಜನ್ಯ ಅತ್ಯಾಚಾರಿಗಳ ಅಂತ್ಯ ಕಾಣದೇ ಹೋರಾಟ ನಿಲ್ಲದು

0

ಉಬರಡ್ಕದಲ್ಲಿ ಸೌಜನ್ಯ ನ್ಯಾಯಕ್ಕಾಗಿ ಪ್ರತಿಭಟನಾ ಸಭೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಂಕಲ್ಪ

ಸೌಜನ್ಯ ಪರ ಹೋರಾಟ ಸಮಿತಿ ಉಬರಡ್ಕ ಮಿತ್ತೂರು ಇದರ ನೇತೃತ್ವದಲ್ಲಿ ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆಯು ನ.20 ರಂದು ಉಬರಡ್ಕದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸೌಜನ್ಯ ಹೋರಾಟ ಸಮಿತಿಯ ನೇತೃತ್ವ ವಹಿಸಿದ ಬೆಳ್ತಂಗಡಿಯ ಮಹೇಶ್ ಶೆಟ್ಟಿ ‌ತಿಮರೋಡಿಯವರು, ನಮ್ಮದು ಧರ್ಮ ಮತ್ತು ಅಧರ್ಮಗಳ‌ ನಡುವಿನ‌ ಹೋರಾಟ. ನಮ್ಮ ಜತೆ ದೇವರಿದ್ದಾರೆ. ಸೌಜನ್ಯ ಅತ್ಯಾಚಾರಿಗಳ ಅಂತ್ಯ ಕಾಣುವ ತನಕ‌ ನಮ್ಮ ಹೊರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ನಾವು 12 ವರ್ಷದಿಂದ ಸೌಜನ್ಯ ‌ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಧರ್ಮದ ದಾರಿಯ ಶಾಂತಿಯ ಹೋರಾಟ ನಮ್ಮದು. ಅಣ್ಣಪ್ಪ‌ ಸ್ವಾಮಿ, ಮಂಜುನಾಥ್ ಸ್ವಾಮಿ ನಮ್ಮ ಜತೆಗಿದ್ದಾರೆ ಎಂದು‌ಅವರು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮಾತನಾಡಿ, ಸೌಜನ್ಯ ಅತ್ಯಾಚಾರಿಗಳು ಯಾರೆಂದು ಎಲ್ಲರಿಗೂ ಗೊತ್ತಿದೆ. ರಕ್ಷಣೆ ಮಾಡುವವರೂ ಕೂಡಾ ಎಲ್ಲರಿಗೂ ಗೊತ್ತಿದೆ. ಅವರಿಗೆ ಶಿಕ್ಷೆಯಾಗಬೇಕೆಂದು ನಮ್ಮ ಹೋರಾಟ. ಸಂತೋಷ್ ರಾವ್ ನಿರ್ದೋಷಿ ಎಂದು ಗೊತ್ತಾಗಲು 11 ವರ್ಷ ಬೇಕಾಯಿತು. ಆರೋಪಿಗಳಿಗೆ ಶಿಕ್ಷೆ ಆಗಲು ಇನ್ನಷ್ಟು ದಿನ ಬೇಕಾದಿತು. ಅದಕ್ಕಾಗಿ ನಿರಂತರ ಹೋರಾಟ ಇರುತ್ತದೆ ಎಂದು ಹೇಳಿದರು. ಸೌಜನ್ಯ ಪ್ರಕರಣ ಮರು ತನಿಖೆ ಆಗಬೇನ್ನುವುದು ನಮ್ಮ ಬೇಡಿಕೆ. ಅದಕ್ಕಾಗಿ ನಾವು ಆಗ್ರಹಿಸುತ್ತೇವೆ ಎಂದ ಪ್ರಸನ್ನ ರವಿಯವರು ಇನ್ನು ಲೋಕಸಭಾ ಚುನಾವಣೆ ಬರುತ್ತದೆ. ಪಕ್ಷ ಯಾವುದೇ ಇರಲಿ. ಸೌಜನ್ಯ ನ್ಯಾಯ ಪರ ಯಾರು ನಿಂತಿದ್ದಾರೋ ಅವರಿಗೆ ಮತ ಹಾಕಿ. ಇಲ್ಲವಾದಲ್ಲಿ ಮತ ಬಹಿಷ್ಕಾರ ಮಾಡಿ ಎಂದು ಅವರು ಕೇಳಿಕೊಂಡರು.

ನ್ಯಾಯವಾದಿ ಮೋಹಿತ್ ಮಾತನಾಡಿ, ತನಿಖೆ ನಡೆಸಿರುವ ಕುರಿತು ನಮ್ಮಲ್ಲಿರುವ ಪ್ರಶ್ನೆ ಕೇಳಿದರೆ ಕಾನೂನಿನ ಮೇಲೆ ನಂಬಿಕೆ ಇಲ್ಲ ಎಂದು ಹೇಳುತ್ತಾರೆ. ಎಲ್ಲರೂ ನ್ಯಾಯಾಲಯ ನೀಡಿದ ತೀರ್ಪಿನ ಪ್ರತಿಯನ್ನು ಓದಬೇಕು. ಅದನ್ನು ಓದಿದರೆ ಸತ್ಯ ಗೊತ್ತಾಗುತ್ತದೆ. ನಿಮಗೂ ಪ್ರಶ್ನೆ ಮೂಡುತ್ತದೆ.‌ ಈ ನಿಟ್ಟಿನಲ್ಲಿ ಹೋರಾಟ ಮಾಡಿ ನ್ಯಾಯ ಸಿಗುವ ತನಕ ನಾವು ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ, ನನ್ನ ಮಗಳ ಸಾವಿಗೆ ಎಲ್ಲರೂ ಸೇರಿ ನ್ಯಾಯ ಕೊಡಿಸಬೇಕು ಎಂದು‌ ಕಣ್ಣೀರಿಟ್ಟರಲ್ಲದೆ , ನನ್ನ ಮಗಳಿಗಾದ ಸ್ಥಿತಿ ಇನ್ಯಾವ ಮಕ್ಕಳಿಗೆ ಆಗದಿರಲಿ ಎಂದು ಕೇಳಿಕೊಂಡರು.

ನಿವೃತ್ತ ಪೋಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಸುದೀರ್ಘವಾಗಿ ಮಾತನಾಡಿ ಸೌಜನ್ಯ ಪ್ರಕರಣದ ವಿವರವನ್ನು ವಿವರಿಸಿದರಲ್ಲದೆ, ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ರಾಜ್ಯಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಮಾತನಾಡಿ ಸೌಜನ್ಯ ನ್ಯಾಯಕ್ಕಾಗಿ ಸುಳ್ಯದ ಜನರು ಯಾವತ್ತೂ ತಮ್ಮ‌ ಜತೆಗಿರುತ್ತಾರೆ ಎಂದು‌ ಹೇಳಿದರು.

ಸೌಜನ್ಯ ಹೋರಾಟ ಸಮಿತಿ ಉಬರಡ್ಕದ ಗೌರವಾಧ್ಯಕ್ಷ ಕೆದಂಬಾಡಿ ವೆಂಕಟ್ರಮಣ ಗೌಡರು ಮಾತನಾಡಿ ಸೌಜನ್ಯ ಅತ್ಯಾಚಾರದ ಆರೋಪಿಗಳು ಯಾರೆ ಇರಲಿ. ಅವರು ರಕ್ತ ಕಾರಿ ಸಾಯುವಂತಾಗಲಿ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ತಮ್ಮಣ್ಣ ಶೆಟ್ಟಿ‌ ಮಾತನಾಡಿ, “ನಮ್ಮ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಕೆಲವು ಕಡೆ ಆಗುತ್ತಿದೆ. ಆದರೆ ಹೋರಾಟ ನಿಲ್ಲುವುದಿಲ್ಲ. ಸೌಜನ್ಯ‌ ನ್ಯಾಯಕ್ಕಾಗಿ ಜನರು ಜತೆಗಿದ್ದಾರೆ. ನಾವು ನಂಬುವ ದೈವ ದೇವರ ಆಶೀರ್ವಾದದಿಂದ ಹೋರಾಟಕ್ಕೆ ನ್ಯಾಯ ಸಿಕ್ಕೆ ಸಿಗುತ್ತದೆ ಎಂದ ಅವರು, ಸೌಜನ್ಯ ಪ್ರಕರಣದಿಂದ ಸಮಾಜದಲ್ಲಿ ಕೆಟ್ಟದ್ದು ಯಾವುದು ಒಳ್ಳೆಯದು ಯಾವುದು ಎಂಬುದು ಗೊತ್ತಾಗಿದೆ ಎಂದು‌ ಹೇಳಿದರು.

ಹಿರಿಯರಾದ ಶೇಷಪ್ಪ ಗೌಡ ಪಟ್ರಕೋಡಿಯವರು ಅಧ್ಯಕ್ಷತೆ ವಹಿಸಿದ್ದರು. ಸುರೇಶ್ ಯೆಯ್ಯಾಡಿ ಮುಂಬಯಿ ವೇದಿಕೆಯಲ್ಲಿ ಇದ್ದರು.

ಸುಶೀಲ ಮೂರ್ಜೆ ಪ್ರಾರ್ಥಿಸಿದರು.
ಭುವನೇಂದ್ರ ದಾಸ್ ಶಂಕನಾದ ಊದಿದರು. ಪ್ರೇಮಾ, ಪುಷ್ಪಾ, ಗಾಯತ್ರಿ ಸೌಜನ್ಯ ಗೀತೆ ಹಾಡಿದರು.

ಹೋರಾಟ ಸಮಿತಿಯ ಪ್ರಮುಖರಾದ ಪಿ.ಎಸ್.ಗಂಗಾಧರ್ ಸ್ವಾಗತಿಸಿದರು. ಹರಿಪ್ರಸಾದ್ ಪಾನತ್ತಿಲ ವಂದಿಸಿದರು.

ಉಬರಡ್ಕ ಪೇಟೆಯ ಪಕ್ಕದಲ್ಲಿ‌ ರವಿರಾಜ್ ಭಟ್ ರ ಜಾಗದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಸಭೆಯಲ್ಲಿ ಜನರು ಕುಳಿತಲ್ಲಿಗೆ ನೀರು ಮತ್ತು ಪಲಾವು ತುಂಬಿದ ಪೊಟ್ಟಣವನ್ನು ವಿತರಣೆ ನಡೆಯಿತು.
ಮಧ್ಯಾಹ್ನ ಸುಮಾರು‌3 ಗಂಟೆಗೆ ಆರಂಭವಾದ ಪ್ರತಿಭಟನಾ ಸಭೆ ಸಂಜೆ 7 ಗಂಟೆಗೆ ಮುಕ್ತಾಯವಾಯಿತು.