ಕರ್ನಾಟಕ ಸರಕಾರಿ ಶಾಲೆಗಳ ಶಿಕ್ಷಕರಿಗೆ ಇಂಡಿಯಾ ಫೌಂಡೇಶನ್ ಫಾರ್ ದ ಆರ್ಟ್ಸ್ ವತಿಯಿಂದ ಕಲಾಸಂಯೋಜಿತ ಕಲಿಕಲಿಸು ಯೋಜನೆಯ ಅನುಷ್ಠಾನಕ್ಕಾಗಿ ಕೊಡಮಾಡುವ 1 ಲಕ್ಷ ರೂ ಅನುದಾನಕ್ಕೆ ಕೋಲ್ಚಾರು ಸ.ಉ.ಹಿ.ಪ್ರಾಥಮಿಕ ಶಾಲಾ ಸಹಶಿಕ್ಷಕಿ ಜಲಜಾಕ್ಷಿ ಆಯ್ಕೆ ಆಗಿರುತ್ತಾರೆ. ರಾಜ್ಯದಿಂದ ಆಯ್ಕೆ ಆದ 6 ಶಿಕ್ಷಕರಲ್ಲಿ ಇವರೂ ಒಬ್ಬರಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂಬಂಧಿ ಅರಿವುಮೂಡಿಸುವ ನಿಟ್ಟಿನಲ್ಲಿ ಚಂದದ ಬದುಕಿಗೆ ಪುಟ್ಟ ಉಡುಗೊರೆ ‘ಬಟ್ಟೆಯಿಂದ ಬಟ್ಟಲಿಗೆ’ ಎಂಬ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿದ್ದರು. ಈಗಾಗಲೇ ಮುಟ್ಟು ಗುಟ್ಟಲ್ಲ ಯೋಜನೆಯಡಿ ದಾನಿಗಳ ಸಹಕಾರದಿಂದ ಮಹಿಳೆಯರಿಗೆ ಮುಟ್ಟಿನ ಬಟ್ಟಲು ವಿದ್ಯಾರ್ಥಿಗಳಿಗೆ ಮರು ಬಳಕೆ ಪ್ಯಾಡ್ ವಿತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳಿಗೆ, ಸಮುದಾಯಕ್ಕೆ ಋತುಚಕ್ರದ ಬಗ್ಗೆ ಮಾಹಿತಿ, ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮದ ಮಾಹಿತಿ ನೀಡಲು ಸಹಕಾರಿಯಾಗಲಿದೆ ಎಂದು ಶಿಕ್ಷಕಿ ತಿಳಿಸಿದ್ದಾರೆ.