ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಾಲಯ ನಿರ್ಮಾಣಕ್ಕೆ ಶಿಲಾ ಮೆರವಣಿಗೆ

0

ಜೀವನದಲ್ಲಿ ನಮ್ಮ ಶ್ರೇಯಸ್ಸಿಗಾಗಿ ದೇವರ ಅನುಗ್ರಹ ಅಗತ್ಯ : ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಮನುಷ್ಯ ಜೀವನದಲ್ಲಿ ಶ್ರೇಯಸ್ಸನ್ನು ಪಡೆಯಬೇಕಾದರೆ ದೇವರ ಅನುಗ್ರಹ ಅಗತ್ಯ. ಅಗೋಚರ ಶಕ್ತಿಯಾಗಿದ್ದ ರಾಜರಾಜೇಶ್ವರಿ ದೇವಿ ಈ ಕಾಲದಲ್ಲಿ ಈ ಭಾಗದಲ್ಲಿ ಗೋಚರಿಸುವ ಮೂಲಕ ಈ ಭಾಗದ ಜನರಿಗೆ ದೇವಿಯ ಅನುಗ್ರಹ ಪ್ರಾಪ್ತಿಯಾಗು ಕಾಲ ಕೂಡಿಬಂದಿದೆ. ಆದಷ್ಟು ಶೀಘ್ರದಲ್ಲಿ ದೇವಿಯು ಗರ್ಭಗುಡಿಯಲ್ಲಿ ರಾರಾಜಿಸಲಿ ಎಂದು ಸುಬ್ರಹ್ಮಣ್ಯ ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ಹೇಳಿದರು.


ಅವರು ನ. 24 ರಂದು ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಾಲಯ ನಿರ್ಮಾಣಕ್ಕೆ ಶಿಲಾ ಆಗಮನ ಮೆರವಣಿಗೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪುರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಕಾಸರಗೋಡಿನ ಉದ್ಯಮಿ ಬಿ. ವಸಂತ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಹೊಸವಳಿಗೆ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ಭಟ್ ಕುರುಂಬುಡೇಲು ವಂದಿಸಿದರು. ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಸುಮಾ ವಿ. ಆಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ಕು. ಶಿವಾನಿ ಮತ್ತು ಕು. ಕೃತಿಕಾ ಪ್ರಾರ್ಥಿಸಿದರು. ಎರಡೂ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಪೂರ್ವಜನ್ಮದ ಪುಣ್ಯದ ಫಲವೇ ದೈವೀ ಸಾನಿಧ್ಯದ ನಿರ್ಮಾಣ ಕಾರ್ಯ. ದೇವರನ್ನು ನಿರಂತರ ಪ್ರಾರ್ಥಿಸುವುದೇ ಧರ್ಮ. ದೇವರನ್ನು ಮರೆಯುವುದೇ ಅಧರ್ಮ. ಮನುಷ್ಯ ಜನ್ಮದಲ್ಲಿ ಚಿಕ್ಕವರಲ್ಲಿ ವಾತ್ಸಲ್ಯ, ಸಮಾಂತರದವರಲ್ಲಿ ಪ್ರೀತಿ, ಹಿರಿಯರಲ್ಲಿ ಗೌರವ ಮತ್ತು ದೇವರಲ್ಲಿ ಭಕ್ತಿ ಇದ್ದರೆ ದೇವರೂ ನಮ್ಮನ್ನು ಮೆಚ್ಚಿ ಅನುಗ್ರಹಿಸುತ್ತಾರೆ – ವಸಂತ ಪೈ ಬದಿಯಡ್ಕ

ಕಾರ್ಕಳದಿಂದ ಬಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ತಂಗಿದ್ದ ಶಿಲೆಗಳನ್ನು ಹೊತ್ತ ವಾಹನಕ್ಕೆ ನ. 24ರಂದು ಬೆಳಿಗ್ಗೆ ಪೂಜೆ ಸಲ್ಲಿಸಿ, ಅಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಾಗತ ಕಾರ್ಯಕ್ರಮ ನಡೆದು ಬಳಿಕ ದರ್ಬೆಯ ತನಕ ವಾಹನ ಮೆರವಣಿಗೆ ಮೂಲಕ ಬಂದು ಕುಂಬ್ರ ಮಾರ್ಗವಾಗಿ ಬೆಳ್ಳಾರೆಯ ಮಾಸ್ತಿಕಪ್ರಾಪ್ತಿಯಾಗುವ ಅಲ್ಲಿಂದ ಮೆರವಣಿಗೆ ಹೊರಟು ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ತನಕ ವಾಹನ ಮೆರವಣಿಗೆಯಲ್ಲಿ ಬಂತು. ಅಲ್ಲಿ ಲಕ್ಷ್ಮೀ ವೆಂಕಟ್ರಮಣ ದೇವಾಲಯದ ವತಿಯಿಂದ ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಎಸ್. ಅಂಗಾರ, ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್, ಸುರೇಶ್ ಶೆಣೈ, ಮಿಥುನ್ ಶೆಣೈ, ಅರ್ಚಕರಾದ ಅಣ್ಣುಭಟ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಪೂರ್ಣಕುಂಭ ಸ್ವಾಗತದ ಮೂಲಕ ಗೌರಿಪುರಂಗೆ ಮೆರವಣಿಗೆ ನಡೆಯಿತು. ಮಾಸ್ತಿಕಟ್ಟೆಯ ಬಳಿ ಕೊಳಂಬಳ ರಕ್ತೇಶ್ವರಿ ದೇವಿಯ ಭಕ್ತವೃಂದ ಮಜ್ಜಿಗೆ ನೀರಿನ ವ್ಯವಸ್ಥೆ ಮಾಡಿದರು.