ರಸ್ತೆ ಅಭಿವೃದ್ಧಿಗಾಗಿ ಪ್ರತಿಭಟನೆ- ಭಿಕ್ಷಾಟನೆ; ಸಂಗ್ರಹವಾದ ಹಣದಿಂದ ರಸ್ತೆ ಬದಿಯ ಕಾಡು-ಪೊದೆ ತೆರವು

0

ಸುಳ್ಯ- ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ನಡೆದ ಪ್ರತಿಭಟನೆ, ಬಿಕ್ಷಾಟನೆಯಲ್ಲಿ ಸಂಗ್ರಹವಾದ ಹಣವನ್ನು ಅದೇ ರಸ್ತೆ ಬದಿಯ ಕಾಡು-ಪೊದೆ ತೆರೆಯಲು ಬಳಸಿದ್ದಾರೆ.
ಸುಮಾರು 8 ತಿಂಗಳ ಹಿಂದೆ ಸುಳ್ಯ-ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆಯ ಫಲಾನುಭವಿ ನಾಗರಿಕರು ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಜಟ್ಟಿಪಳ್ಳದಿಂದ ಮೆರವಣಿಗೆ ನಡೆಸಿ ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಅದರೊಂದಿಗೆ ಅಭಿವೃದ್ಧಿಗೆ ಅನುದಾನವಿಲ್ಲದಿದ್ದರೆ ಬಿಕ್ಷಾಟನೆ ಮಾಡಿಯಾದರೂ ರಸ್ತೆಗೆ ಹಣ ಸಂಗ್ರಹಿಸುತ್ತೇವೆ ಎಂದು ಬಿಕ್ಷಾ ಪಾತ್ರೆಗಳನ್ನು ಹಿಡಿದು ಮೆರವಣಿಗೆಯಲ್ಲಿ ನಾಗರಿಕರು ಸಾಗಿದರು. ಸಾಂಕೇತಿಕವಾಗಿ ನಡೆದ ಬಿಕ್ಷಾಟನೆಯಲ್ಲಿ ರೂ.4375 ಸಂಗ್ರಹವಾಗಿತ್ತು.
ಈ ಹಣವನ್ನು ಏನು ಮಾಡುವುದು ಎಂಬ ಜಿಜ್ಞಾಸೆ ಮೂಡಿತು. ನ.19ರಂದು ನಡೆದ ರಸ್ತೆ ಹೋರಾಟ ಸಮಿತಿಯ ಸದಸ್ಯರ ಸಭೆಯಲ್ಲಿ ಈ ಹಣವನ್ನು ರಸ್ತೆ ಬದಿಯ ಕಾಡು ಪೊದೆಗಳನ್ನು ತೆಗೆಯಲು ಉಪಯೋಗ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಇದೀಗ ಆ ಹಣದಿಂದ ಮೆಷಿನ್ ಮೂಲಕ ಕಾಡು ಪೊದೆಗಳನ್ನು ತೆಗೆಯಲಾಗಿರುವುದಾಗಿ ತಿಳಿದುಬಂದಿದೆ.