ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ

0

ಗುರುಕುಲಮಟ್ಟದ ಶಿಕ್ಷಣ ಪದ್ಧತಿಯಿಂದ ಮಕ್ಕಳಲ್ಲಿ ಸಂಸ್ಕಾರಯುತ ಬದುಕು: ಶಾಸಕಿ ಭಾಗೀರಥಿ ಮುರುಳ್ಯ

ಜಾಲ್ಸೂರು ಗ್ರಾಮದ ವಿನೋಬನಗರದ ರಾಷ್ಟ್ರೋತ್ಥಾನ ಶಿಶುಮಂದಿರ, ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಡಿ.2ರಂದು ಜರುಗಿತು.

ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು.

ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾರ್ಯಕ್ರಮವನ್ನು ಉಧ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ‘ಸ್ವಾಮಿ ವಿವೇಕಾನಂದರ ಹೆಸರಿನಡಿಯಲ್ಲಿ ಕಾರ್ಯಾಚರಿಸುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆಯ ಮಕ್ಕಳು ಅವರ ಪೋಷಕರು ಹಾಗೂ ಶಿಕ್ಷಣ ನೀಡುತ್ತಿರುವ ಶಿಕ್ಷಕರು ನಿಜವಾಗಿ ಶ್ರೇಷ್ಠರು. ಯಾಕೆಂದರೆ ಇಲ್ಲಿ ಶಿಶು ಮಂದಿರದಿಂದ ಪ್ರಾರಂಭಗೊಂಡು, ಪ್ರಸ್ತುತ ಪ್ರೌಢಶಾಲಾ ಮಟ್ಟದವರೆಗೆ ಗುರುಕುಲಮಟ್ಟದ ಶಿಕ್ಷಣ ಪದ್ಧತಿಯಂತೆ ಶಿಕ್ಷಣ ನೀಡಲಾಗುತ್ತಿದೆ. ಈ ವಿದ್ಯಾಸಂಸ್ಥೆಯು ಸಮಾಜಕ್ಕೆ ಮಾದರಿಯಾಗಿದ್ದು, ಇಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಶ್ರೇಷ್ಠ ಸಂಸ್ಕಾರಯುತ ಗುಣಗಳನ್ನು ಬೋಧಿಸಲಾಗುತ್ತಿದ್ದು, ಇಲ್ಲಿಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸುವಂತಾಗಲಿ ಎಂದು ಹೇಳಿದರಲ್ಲದೇ, ಈ ವಿದ್ಯಾಸಂಸ್ಥೆಯ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವುದಾಗಿ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ. ಅವರು ಮಾತನಾಡಿ ಈ ವಿದ್ಯಾಸಂಸ್ಥೆಯಲ್ಲಿ ಸುಮಾರು ಆರುನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂದರೆ ಇಲ್ಲಿ ನೀಡುವ ಸಂಸ್ಕಾರಯುತ, ಶಿಕ್ಷಣವೇ ಕಾರಣ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆಚಾರ – ವಿಚಾರ, ಮೌಲ್ಯಯುತ ಜೀವನ ಶಿಕ್ಷಣ ನೀಡುವುದರಿಂದ ಮಕ್ಕಳ ಬದುಕು ಉತ್ತಮಗೊಳ್ಳುತ್ತದೆ ಎಂದು ಹೇಳಿದರು.


ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ್ ಅವರು ಮಾತನಾಡಿ ಈ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಈ ವಿದ್ಯಾಸಂಸ್ಥೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡುತ್ತೇವೆ ಎಂದು ಶುಭಹಾರೈಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ಮಾತನಾಡಿ ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡುವ ಸಲುವಾಗಿ, ಹಿಂದೂ ಧರ್ಮದ ಉನ್ನತಿಗಾಗಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಪ್ರಾರಂಭಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಪ್ರಸ್ತುತ ಸಾವಿರಾರು ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಆಚಾರ – ವಿಚಾರಗಳನ್ನು ಕಲಿಸಲಾಗುತ್ತಿದೆ ಎಂದು ಹೇಳಿದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ಅವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ವೇಳೆ ಶಾಲಾ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ , ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.


2022-23ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಶ್ಯಾಂಪ್ರಸಾದ್ ಅಡ್ಡಂತಡ್ಕ, ಜಾಲ್ಸೂರು ಗ್ರಾ. ಪಂ.‌ ಸದಸ್ಯೆ ಶ್ರೀಮತಿ ಲೀಲಾವತಿ, ವಿದ್ಯಾಸಂಸ್ಥೆಯ ಸಂಚಾಲಕರಾದ ಸುಧಾಕರ ಕಾಮತ್ ಗೌರವ ಉಪಸ್ಥಿತರಿದ್ದರು.

ಶಾಲಾ ಆಡಳಿತಾಧಿಕಾರಿ ಗೋಪಾಲರಾವ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ಸೌಮ್ಯ ಕದಿಕಡ್ಕ, ಶಿಕ್ಷಣ ಸಂಯೋಜಕಿ ಸಂಧ್ಯಾಕುಮಾರಿ, ಶಿಶುಮಂದಿರದ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಕ್ರೀಡಾ ಸಂಚಾಲಕ ಅಶೋಕ ಅಡ್ಕಾರು, ಆಡಳಿತ ಮಂಡಳಿಯ ಸದಸ್ಯರುಗಳಾದ ಈಶ್ವರ ಕೊಂರ್ಬಂಡ್ಕ, ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಚಂದ್ರಶೇಖರ ನೆಕ್ರಾಜೆ, ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ, ವಾರ್ಷಿಕೋತ್ಸವ ಸಮಿತಿ ಸಂಚಾಲಕ ಗಂಗಾಧರ ಕಾಳಮನೆ, ಶಾಲಾ ನಾಯಕ ಧನುಷ್ ವೇದಿಕೆಯಲ್ಲಿ
ಉಪಸ್ಥಿತರಿದ್ದರು.

ವಿದ್ಯಾಸಂಸ್ಥೆಯ ಸಂಚಾಲಕ ಸುಧಾಕರ ಕಾಮತ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ವಂದಿಸಿದರು. ಸಹಶಿಕ್ಷಕರುಗಳಾದ ಶಶಿಧರ ಮಹಾಬಲಡ್ಕ ಹಾಗೂ ಶ್ರೀಮತಿ ದಿವ್ಯ ಬಿ. ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಪದ್ಮಾವತಿ ಉಪೇಂದ್ರ ಕಾಮತ್ , ವಿದ್ಯಾರ್ಥಿಗಳ ಪೋಷಕರು, ಸಹಶಿಕ್ಷಕವೃಂದದವರು ಹಾಗೂ ವಿದ್ಯಾಭಿಮಾನಿಗಳು ಹೆಚ್ವಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದೆ.

ವಿದ್ಯಾಸಂಸ್ಥೆಯಲ್ಲಿ ಸುಳ್ಯದ ಗಣೇಶ್ ಮ್ಯೂಸಿಕಲ್ ವತಿಯಿಂದ ಪ್ರತೀ ಶುಕ್ರವಾರ ಅಪರಾಹ್ನ ದೇಶಭಕ್ತಿ ಗೀತೆ ಗಾಯನ ನಡೆಸಲಾಗುತ್ತಿದೆ.