ಸಭೆಗೆ ನಿರಂತರವಾಗಿ ಗೈರು ಹಾಜರಾಗುತ್ತಿರುವ ಪಂಚಾಯತ್ ರಾಜ್ ಇಂಜಿನಿಯರ್ ವಿರುದ್ದ, ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ದೂರು ನೀಡಲು ನಿರ್ಧಾರ
ಪಂಚಾಯತಿರಾಜ್ ಇಂಜಿನಿಯರ್ ಅವರ ಬದಲು ಸಭೆಗೆ ಮಾಹಿತಿ ನೀಡಲು ಬಂದಿದ್ದ ಅಧಿಕಾರಿಯನ್ನು ವೇದಿಕೆಗೆ ಬರಲು ಬಿಡದ ಗ್ರಾಮಸ್ಥರು ಪಂಚಾಯತ್ ರಾಜ್ ಇಂಜಿನಿಯರ್ ಅವರು
ಅವರು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಗ್ರಾಮಸಭೆಗೆ ಗೈರು ಹಾಜರಾಗುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಈ ಬಾರಿ ಬರದಿದ್ದರೆ, ಗ್ರಾಮಸಭೆ ಮುಂದುವರೆಯಲು ಬಿಡುವುದಿಲ್ಲ ಎಂದಾಗ ನೋಡೆಲ್ ಅಧಿಕಾರಿಯವರು ಇಂಜಿನಿಯರ್ ಅವರಿಗೆ ದೂರವಾಣಿ ಕರೆ ಮಾಡಿ, ಸಭೆಗೆ ಬರುವಂತೆ ಸೂಚಿಸದರೂ, ಅವರು ಸಭೆಗೆ ಬರದೇ ಇದ್ದುದರಿಂದ ಕಳೆದ ಬಾರಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ದೂರು ನೀಡಲು ನಿರ್ಣಯಿಸಲಾಗಿತ್ತು.
ಆದರೆ ಈ ಬಾರಿ ಅವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ದೂರು ನೀಡುವುದಾಗಿ ನಿರ್ಣಯ ಕೈಗೊಂಡ ಘಟನೆ ಚೆಂಬು ಗ್ರಾಮಸಭೆಯಿಂದ ವರದಿಯಾಗಿದೆ.
ಚೆಂಬು ಗ್ರಾಮ ಪಂಚಾಯತಿಯ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷ ತೀರ್ಥರಾಮ ಪಿ.ಜಿ. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ಡಿ.2ರಂದು ಜರುಗಿತು.
ಕೊಡಗು ಜಿಲ್ಲಾ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಸ್ನೇಹ ಅವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು.
ಗತಸಭೆಯ ವರದಿಯನ್ನು ಗ್ರಾ.ಪಂ. ಸಿಬ್ಬಂದಿ ವಿಜಯ ಹೆಚ್.ಕೆ. ಅವರು ವಾಚಿಸಿದರು. ಆಗ ಗ್ರಾ.ಪಂ. ಮಾಜಿ ಸದಸ್ಯ ಜಿ.ವಿ. ಗಣಪಯ್ಯ ಅವರು ಅರಣ್ಯ ಇಲಾಖೆಯ ಮಧ್ಯೆ ವಿದ್ಯುತ್ ಕಂಬ ಹಾಕಲು ಅರಣ್ಯ ಇಲಾಖೆಯವರು ಅನುಮತಿ ನೀಡದ ಬಗ್ಗೆ ಪ್ರಸ್ತಾಪಿಸಿದರು. ಆಗ ಸುಬ್ರಹ್ಮಣ್ಯ ಉಪಾದ್ಯಾಯ ಹಾಗೂ ಸೂರಜ್ ಹೊಸೂರು ಇದಕ್ಕೆ ಧ್ವನಿಗೂಡಿಸಿದರು.
ಉಪ ವಲಯಾರಣ್ಯಾಧಿಕಾರಿಯಾದ ನಿಸಾರ್ ಅಹ್ಮದ್ ಮತ್ತು ಮೆಸ್ಕಾಂ ಸಿಬ್ಬಂದಿ ಈ ಬಗ್ಗೆ ನಾವು ಪರಿಶೀಲಿಸಿ, ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರುಗಂಟಿ ಅವರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಾಗ, ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ಮಾಡಿದ್ದೇನೆ ಎಂದು ಹೇಳಿದಾಗ , ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ , ಅವರ ವಿರುದ್ದ ಕ್ರಮಕೈಗೊಳ್ಳಿ ಎಂದು ದಿನೇಶ್ ಸಣ್ಣಮನೆ ಹೇಳಿದರೆನ್ನಲಾಗಿದೆ.
ಆಗ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೇಣುಗೋಪಾಲರು ಮಾತನಾಡಿ ಪಂಚಾಯತ್ ರಾಜ್ ಕಾಯ್ದೆಯ ಬಗ್ಗೆ ಗ್ರಾ.ಪಂ. ಸಿಬ್ಬಂದಿಗಳಿಗೂ ಸರಿಯಾದ ಮಾಹಿತಿ ಇಲ್ಲ. ಮಾಹಿತಿ ಕೊರತೆ ಇದೆ ಎಂದು ಹೇಳಿ, ಸಭೆಯಲ್ಲಿ ಗ್ರಾಮಸ್ಥರಿಗೆ ಪಂಚಾಯತ್ ರಾಜ್ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಪಿ.ಡಿ.ಒ. ಅವರು ಮಾಹಿತಿ ನೀಡುತ್ತಿದ್ದು, ಸಮಯ ವಿಸ್ತರಣೆಯಾದಾಗ ಸುಬ್ರಹ್ಮಣ್ಯ ಉಪಾದ್ಯಾಯರು ಮಾಹಿತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಇನ್ನೊಂದು ತಂಡದವರು ಮಾಹಿತಿ ಗ್ರಾಮಸ್ಥರಿಗೆ ಬೇಕು ಎಂದು ಹೇಳಿದರೆನ್ನಲಾಗಿದೆ. ಈ ಬಗ್ಗೆ ಇತ್ತಂಡಗಳ ಮಧ್ಯೆ ಚರ್ಚೆಯಾದಾಗ ಗ್ರಾಮಸ್ಥರ ಒತ್ತಾಯದ ಮೇಲೆ ಮುಖ್ಯ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
ಚೆಂಬು ಗ್ರಾ.ಪಂ. ಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಅನುದಾನ ಸಮರ್ಪಕವಾಗಿ ಹಂಚಿಕೆಯಾಗಲಿಲ್ಲ ಎಂದು ಜಿ.ವಿ. ಗಣಪಯ್ಯ ಅವರು ಹೇಳಿದಾಗ ಅಧ್ಯಕ್ಷ ತೀರ್ಥರಾಮ ಅವರು ಮಾತನಾಡಿ ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಿ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡುವುದಾಗಿ ಹೇಳಿದರು.
ಕೂಡಡ್ಕದಲ್ಲಿ ಹೊಸ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸುವ ಬಗ್ಗೆ ಗ್ರಾಮಸ್ಥರು ಕೇಳಿದಾಗ ಗ್ರಾಮಕರಣಿಕರು ಮಾತನಾಡಿ ಹತ್ತು ವರ್ಷದ ಹಿಂದೆ ಆರೋಗ್ಯ ಕೇಂದ್ರಕ್ಕೆ ಜಾಗ ಕಾಯ್ದಿರಿಸಲಾಗಿದ್ದು,ಆರ್.ಟಿ.ಸಿ. ಆಗಿದೆ ಎಂದರು. ಆರೋಗ್ಯ ಕೇಂದ್ರದ ಮಲ್ಲಿಕಾರ್ಜುನ ಅವರು ಮಾತನಾಡಿ ಕೂಡಲೇ ಸ್ಪಂದಿಸಿ ಕೆಲಸ ಮಾಡಿಸುತ್ತೇವೆ ಎಂದು ಹೇಳಿದರು.
ಆನೆಹಳ್ಳ ಸಮುದಾಯ ಆರೋಗ್ಯ ಉಪಕೇಂದ್ರದ ಬಗ್ಗೆ ದಿನೇಶ್ ಸಣ್ಣಮನೆ ಮಾತನಾಡಿ, ಸ್ವಚ್ಛತೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆರೋಗ್ಯ ಕೇಂದ್ರದ ಮಲ್ಲಿಕಾರ್ಜುನ್ ಅವರು ಮಾತನಾಡಿ ಇದನ್ನು ಸರಿಪಡಿಸುತ್ತೇವೆ ಎಂದು ಉತ್ತರಿಸಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಭೆಗೆ ಬಾರದ ಬಗ್ಗೆ ಜಿ.ವಿ. ಗಣಪಯ್ಯ ಅವರು ಆಕ್ಷೇಪಿಸಿದಾಗ , ಮುಂದಿನ ಸಭೆಗೆ ಬರುವಂತೆ ಮಾಡುತ್ತೇವೆ ಎಂದು ನೋಡೆಲ್ ಅಧಿಕಾರಿಯವರು ಹೇಳಿದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಶಾರದಾ ಸೂರ್ಯ, ಸದಸ್ಯರುಗಳು ಕುಸುಮ ಎ., ಆದಂಕುಂಞಿ ಸಂಟ್ಯಾರ್, ರಾಧಾ ಚಂದಪ್ಪ, ಶಶಿಕಲಾ, ಗಿರೀಶ್ ಹೊಸೂರು, ಹಂಸಲೇಖ, ರಮೇಶ್ ಹುಲ್ಲುಬೆಂಕಿ, ವಸಂತ ಎನ್.ಟಿ. ಹಾಗೂ ಇಲಾಖೆ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.