ಕೆವಿಜಿ ವಿದ್ಯಾಸಂಸ್ಥೆಗಳಲ್ಲಿನ ಗೊಂದಲ ನಿವಾರಣೆಗೆ ಆಗ್ರಹ

0

ಪ್ರತೀಕಾರದ ಮನೋಭಾವ ಬಿಡಿ : ಕೆವಿಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿ ಮನವಿ

ಮನವಿ ತಿರಸ್ಕರಿಸಿದರೆ ಹೋರಾಟದ ಎಚ್ಚರಿಕೆ

ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಗಳಲ್ಲಿ ಉಂಟಾಗಿರುವ ಗೊಂದಲಗಳಿಂದಾಗಿ ಡಾ.ಕುರುಂಜಿ ವೆಂಕಟ್ರಮಣ ಗೌಡರ ಆಶಯಗಳಿಗೆ ಧಕ್ಕೆ ಬರುತ್ತಿದೆ. ವಿದ್ಯಾಸಂಸ್ಥೆಗಳ ಸಿಬ್ಬಂದಿ ವರ್ಗದಲ್ಲಿ ಅನಿಶ್ಚಿತತೆ ಉಂಟಾಗಿ ಸೇವಾ ಭದ್ರತೆಗೆ ಧಕ್ಕೆಯಗುವ ಭಯ ಕಾಡಬಹುದು. ಇದು ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಬಹುದು. ಆದ್ದರಿಂದ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಪ್ರತೀಕಾರದ ಕ್ರಮ ಕೈಬಿಟ್ಟು ಅವರ ತಂದೆ ತಾಯಿ ಮಾಡಿಕೊಟ್ಟಿರುವ ಒಪ್ಪಂದದಂತೆ ಸೌಹಾರ್ದತೆಯಿಂದ ನಡೆಯುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು. ಒಂದು ವೇಳೆ ನಮ್ಮ ಮನವಿಯನ್ನು ತಿರಸ್ಕರಿಸಿದ್ದೇ ಆದಲ್ಲಿ ನಾವು ಮುಂದಿನ ಹೋರಾಟದ ದಾರಿಗೆ ಇಳಿಯುವ ಅನಿವಾರ್ಯತೆ ಉಂಟಾಗಬಹುದು ಎಂದು ಕೆ.ವಿ.ಜಿ. ಕ್ಯಾಂಪಸ್ ಹಿತರಕ್ಷಣಾ ಸಮಿತಿ‌‌ ಹೇಳಿದೆ.

ಇಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿಯವರು, ಕೆವಿಜಿ ವಿದ್ಯಾಸಂಸ್ಥೆಗಳಲ್ಲಿ ಉಂಟಾಗಿರುವ ಗೊಂದಲಗಳಿಂದಾಗಿ ಕಾಲೇಜಿನ ಶೈಕ್ಷಣಿಕ ಅಭಿವೃದ್ದಿ ಕುಂಟಿತಗೊಳ್ಳಬಹುದು. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕಾಲೇಜಿನ ಸಿಬ್ಬಂದಿ ವರ್ಗದವರಲ್ಲೂ ಒಂದು ಬಗೆಯ ಅನಿಶ್ಚಿತತೆ ಉಂಟಾಗಬಹುದು. ತಮ್ಮ ಸೇವಾ ಭದ್ರತೆಗೆ ಧಕ್ಕೆಯಾಗುತ್ತದೆ ಎಂಬ ಭಯ ನಿರ್ಮಾಣವಾಗಬಹುದು. ಪಾಠ ಪ್ರವಚನಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗದ ವಾತಾವರಣ ಸೃಷ್ಟಿಯಾಗಬಹುದು. ಇದು ಕೆ.ವಿ.ಜಿ.ಯವರ ಆಶಯಕ್ಕೆ ವಿರುದ್ಧವಾದ ನಡೆ” ಎಂದು ಹೇಳಿದರು.

೦2.೦3.1967ರಲ್ಲಿ ಕುರುಂಜಿ ವೆಂಕಟ್ರಮಣ ಗೌಡರ ಸ್ಥಾಪಕಾಧ್ಯಕ್ಷತೆಯಲ್ಲಿ ಸುಳ್ಯ ತಾಲೂಕಿನ ವಿವಿಧ ಜಾತಿ ಮತಗಳಿಗೆ ಸೇರಿದ ೧೬ ಜನ ಪ್ರಭಾವಿ ವ್ಯಕ್ತಿಗಳಿಂದ ಕೂಡಿದ ಸಂಸ್ಥೆಯನ್ನು ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್ 1960ರ ಪ್ರಕಾರ ನೋಂದಾವಣೆ ಮಾಡಲಾಯಿತು. ಕುರುಂಜಿ ವೆಂಕಟರಮಣ ಗೌಡರ ದೂರದೃಷ್ಟಿತ್ವದ ಪ್ರಕಾರ ಈ ಸೊಸೈಟಿ ಸ್ಥಾಪನೆ ಮಾಡಿ ಅತ್ಯಂತ ಹಿಂದುಳಿದ ಪ್ರದೇಶವಾದಂತಹ ಸುಳ್ಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ಅನುಕೂಲ ಮಾಡುವುದರ ಜೊತೆಗೆ ಸುಳ್ಯ ಪರಿಸರದ ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿ ಅವರ ಕುಟುಂಬದ ಸಬಲತೆಗೆ ಕಾರಣರಾಗುವುದರೊಂದಿಗೆ ಸುಳ್ಯ ಪೇಟೆಯು ಕೂಡ ವಿಸ್ತಾರವಾಗಿ ಬೆಳೆದು ಸುಳ್ಯ ಎಂಬ ಹೆಸರು ರಾಜ್ಯ ಮತ್ತು ರಾಷ್ಟ್ರದಲ್ಲಿ ಗುರುತಿಸುವಂತೆ ಆಗಿದೆ.


ಕುರುಂಜಿ ವೆಂಕಟ್ರಮಣ ಗೌಡರವರು ತಾಲೂಕಿನ ಎಲ್ಲಾ ಹಿರಿಯ ಕಿರಿಯ ವ್ಯಕ್ತಿಗಳನ್ನು ಕೂಡ ಪ್ರೀತಿ ಗೌರವದಿಂದ ಕಂಡು ಅವರ ಸಲಹೆಗಳನ್ನು ಪಡೆದು ತನ್ನ ಸ್ವಂತ ಕೃಷಿ ಭೂಮಿಯ ಆದಾಯದಿಂದ ತನಗೆ ಸಿಗದ ವಿದ್ಯೆ ಊರಿಗೆ ಸಿಕ್ಕಲಿ ಎಂಬ ಮಹಾದ್ದೋದ್ದೇಶದಿಂದ ಮಾಡಿರುವ ಈ ಅಕ್ಷರ ಕ್ರಾಂತಿಯು ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿರುವ ವಿಚಾರ. ಕುರುಂಜಿ ವೆಂಕಟ್ರಮಣ ಗೌಡರು ಅನಾರೋಗ್ಯಕ್ಕೊಳಗಾದಾಗ ತಾನು ಕಟ್ಟಿ ಬೆಳೆಸಿದ ಈ ವಿದ್ಯಾಸಂಸ್ಥೆಗಳನ್ನು ಸಮರ್ಪಕವಾಗಿ ಮುಂದೆ ನಿರ್ವಹಣೆ ಮಾಡಿಕೊಂಡು ಹೋಗಬೇಕೆಂಬ ಸದುದ್ದೇಶದಿಂದ ತನ್ನ ಮೂವರು ಮಕ್ಕಳ ಪೈಕಿ ಹೆಣ್ಣು ಮಗಳಾದ ಗೋವರ್ದಿನಿ ವಿದೇಶದಲ್ಲಿ ನೆಲೆಸಿರುವುದರಿಂದ ತನ್ನ ಇಬ್ಬರು ಗಂಡು ಮಕ್ಕಳಾದ ಡಾ. ಚಿದಾನಂದ ಮತ್ತು ಡಾ. ರೇಣುಕಾ ಪ್ರಸಾದ್‌ರವರಿಗೆ 2009ರ ಮೇ ತಿಂಗಳ 12ನೇ ತಾರೀಕಿನಂದು ಒಂದು ಒಪ್ಪಂದ ಪತ್ರವನ್ನು ತಯಾರು ಮಾಡಿ ಅಕಾಡೆಮಿ ಅಡಿಯಲ್ಲಿರುವ ವಿದ್ಯಾ ಸಂಸ್ಥೆಗಳನ್ನು ’ಎ’ ಮತ್ತು ’ಬಿ’ ಎಂದು ವರ್ಗೀಕರಿಸಿ ಗ್ರೂಪ್ ’ಎ’ ಗೆ ಬರುವ ಮೆಡಿಕಲ್ ಕಾಲೇಜು, ನರ್ಸಿಂಗ್ ಆಯುರ್ವೇದಿಕ್, ಕಾನೂನು, ನೆಹರು ಮೆಮೊರಿಯಲ್ ಕಾಲೇಜುಗಳನ್ನು ಡಾ. ಚಿದಾನಂದರವರು ನಿರ್ವಹಣೆ ಮಾಡಿಕೊಂಡು ಬರಬೇಕೆಂದೂ, ಗ್ರೂಪ್ ’ಬಿ’ ಗೆ ಬರುವ ಇಂಜಿನಿಯರಿಂಗ್, ಡೆಂಟಲ್, ಪಾಲಿಟೆಕ್ನಿಕ್, ಐ.ಟಿ.ಐ ಕಾಲೇಜುಗಳು ಹಾಗೂ ಕೆ.ವಿ.ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕೊಲ್ಲಮೊಗ್ರ ಪ್ರೌಢಶಾಲೆ ಮತ್ತು ಭಾಗಮಂಡಲ ಐ.ಟಿ.ಐ ಇವುಗಳ ಸಂಪೂರ್ಣ ನಿರ್ವಹಣೆಯನ್ನು ಡಾ. ರೇಣುಕಾ ಪ್ರಸಾದ್‌ರವರು ನಿರ್ವಹಿಸಿಕೊಂಡು ಬರಬೇಕೆಂದೂ ತಿರ್ಮಾನಿಸಿ ಬರೆದ ಒಪ್ಪಂದ ಪತ್ರಕ್ಕೆ ತಂದೆಯವರಾದ ಡಾ. ವೆಂಕಟ್ರಮಣ ಗೌಡರು, ತಾಯಿ ಜಾನಕಿ ವೆಂಕಟ್ರಮಣ ಗೌಡರು ಅಲ್ಲದೇ ಮಕ್ಕಳಾದ ಡಾ. ಚಿದಾನಂದ ಮತ್ತು ಡಾ. ರೇಣುಕಾ ಪ್ರಸಾದ್ ಹಾಗೂ ಸೊಸೆಯಂದಿರಾದ ಶೋಭಾ ಚಿದಾನಂದ ಮತ್ತು ಡಾ. ಜ್ಯೋತಿ ಆರ್ ಪ್ರಸಾದ್ ಅವರು ತಮ್ಮ ಸಹಿಯನ್ನು ಹಾಕಿದ್ದಾರೆ. ಅಲ್ಲದೇ ಈ ಬಗ್ಗೆ ಕೆ.ವಿ.ಜಿಯವರ ಅಧ್ಯಕ್ಷತೆಯಲ್ಲಿ ೦2.೦9.2008ರಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲೂ ಮಂಜೂರಾತಿ ಪಡೆಯಲಾಗಿದೆ ಎಂದು ಭರತ್ ಮುಂಡೋಡಿ ಹೇಳಿದರು.

ಈ ಒಪ್ಪಂದದ ಪ್ರಕಾರ 2009ರಿಂದ 2023ರ ಅಕ್ಟೋಬರ್ ತಿಂಗಳಿನವರೆಗೂ ಈ ಎರಡು ವಿಭಾಗದ ಆಡಳಿತವು ಬೇರೆ ಬೇರೆಯಾಗಿಯೇ ನಡೆಯುತ್ತಿತ್ತು. ದುರದೃಷ್ಟವಶಾತ್ ಡಾ. ರೇಣುಕಾ ಪ್ರಸಾದ್‌ರವರಿಗೆ ಪ್ರಕರಣವೊಂದರಲ್ಲಿ ಶಿಕ್ಷೆ ಪ್ರಕಟವಾದ ಮರುದಿನವೇ ಡಾ. ಚಿದಾನಂದ ಮತ್ತು ಅವರ ತಂಡದವರು ಡಾ. ರೇಣುಕಾ ಪ್ರಸಾದ್ ರ ಆಡಳಿತ ವ್ಯಾಪ್ತಿಯಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಮಾಡಿ ಆಡಳಿತದ ಹಿಡಿತ ಪಡೆಯಲು ಪ್ರಯತ್ನಿಸಿದ್ದು, ಈ ಬಗ್ಗೆ ಡಾ. ಜ್ಯೋತಿ ಆರ್ ಪ್ರಸಾದ್ ರವರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಮತ್ತು ಈ ಪ್ರಕರಣದಲ್ಲಿ ಎಫ್.ಐ.ಆರ್ ಆಗಿ ಡಾ. ಚಿದಾನಂದ ಮತ್ತು ಇತರರು ಕೋರ್ಟಿನಲ್ಲಿ ಜಾಮೀನು ಪಡೆದು ಬಂದಿರುವ ವಿಚಾರ ಪತ್ರಿಕೆಗಳಲ್ಲಿ ಓದಿ ತಿಳಿದು ನಮಗೆಲ್ಲರಿಗೂ ಅತೀವ ದುಖ:ವನ್ನು ತಂದಿದೆ. ಕುರುಂಜಿಯವರು ಸ್ಥಾಪಿಸಿದ ಈ ವಿದ್ಯಾ ಸಂಸ್ಥೆಗಳು ಅಣ್ಣ ತಮ್ಮಂದಿರ ದ್ವೇಷಕ್ಕೆ ಬಲಿಯಾಗಬಾರದು ಮತ್ತು ಈ ಸಂಸ್ಥೆಯಲ್ಲಿ ದುಡಿಯುವ ಸಾವಿರಾರು ಜನರ ಬದುಕಿಗೆ ತೊಂದರೆಯಾಗಬಾರದು ಹಾಗೂ ಈ ಸಂಸ್ಥೆಯಲ್ಲಿ ಲಕ್ಷಾಂತರ ಹಣ ಶುಲ್ಕ ಕಟ್ಟಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರಿಗೆ ತೊಂದರೆಯುಂಟಾಗಬಾರದೆಂಬ ಉದ್ದೇಶದಿಂದ ನಾವೂ ಸಮಾಜದ ಎಲ್ಲಾ ಮುಖಂಡರು ಸೇರಿ ’ಕೆ.ವಿ.ಜಿ ಕ್ಯಾಂಪಸ್ ಹಿತ ರಕ್ಷಣಾ ಸಮಿತಿ’ಯನ್ನು ಹುಟ್ಟು ಹಾಕಿ ಸಹೋದರರ ವಿವಾದವನ್ನು ಸರಿಪಡಿಸುವಂತೆ ಸಮಾಜದ ಮುಖಂಡರುಗಳಾದ ಡಿ.ವಿ.ಸದಾನಂದ ಗೌಡ ಮತ್ತು ಕೆ.ಜಿ ಬೋಪಯ್ಯ ಇವರಲ್ಲಿಯೂ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಾಲಾನಂದನಾಥ ಸ್ವಾಮೀಜಿಯವರಲ್ಲಿಯೂ ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ರಲ್ಲಿಯೂ ಮನವಿಗಳನ್ನು ಮಾಡಿದ್ದೆವು.


ಈ ಮೇಲಿನ ಎಲ್ಲಾ ಗೌರವಾನ್ವಿತರ ಮನವಿಗೆ ಡಾ. ಚಿದಾನಂದರು ಸ್ಪಂದಿಸದೇ ಡಾ. ರೇಣುಕಾ ಪ್ರಸಾದ್ ರವರ ಆಡಳಿತದಲ್ಲಿದ್ದ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರ ಬ್ಯಾಂಕ್ ಖಾತೆಗಳನ್ನು ತಡೆಹಿಡಿದು ಉದ್ಯೋಗಿಗಳಿಗೆ ಸಂಬಳ ಸಿಗದಂತೆ ಮಾಡಿರುವುದಲ್ಲದೇ ’ಬಿ’ ಗ್ರೂಪಿನ ಆಡಳಿತ ವ್ಯಾಪ್ತಿಯ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರು, ಪ್ರಾಧ್ಯಾಪಕರಿಗೆ ಶೋಕಾಸ್ ನೋಟಿಸು ನೀಡಿರುವುದು ಮತ್ತು ಪ್ರತೀಕಾರದ ಕ್ರಮವಾಗಿ ಕೆಲವು ಸಿಬ್ಬಂದಿಗಳನ್ನು ಅಮಾನತು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಪ್ರತೀಕಾರದ ಕ್ರಮವನ್ನು ಕೈ ಬಿಡಬೇಕು ಎನ್ನುವುದು ನಮ್ಮ ಮನವಿ. ಒಂದು ವೇಳೆ ಈ ಮನವಿಯನ್ನು ತಿರಸ್ಕರಿದ್ದೇ ಆದಲ್ಲಿ ನಾವು ಮುಂದಿನ ಹೋರಾಟದ ದಾರಿಗೆ ಇಳಿಯುವ ಅನಿವಾರ್ಯತೆ ಉಂಟಾಗಬಹುದು ಎಂದು ಅವರು ತಿಳಿಸಿದರು.

ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಎನ್.ಎ. ರಾಮಚಂದ್ರ, ಕಾರ್ಯಾಧ್ಯಕ್ಷ ಜಾಕೆ ಮಾಧವ ಗೌಡ, ಉಪಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಎಸ್.ಎನ್.ಮನ್ಮಥ, ಕಾರ್ಯದರ್ಶಿ ಪಿ..ಎಸ್.ಗಂಗಾಧರ್, ಸಂಚಾಲಕರಾದ ಪಿ.ಸಿ.ಜಯರಾಮ್, ವೆಂಕಟ್ ದಂಬೆಕೋಡಿ, ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ ಅವರಲ್ಲದೆ, ಸೋಮಶೇಖರ ಕೊಯಿಂಗಾಜೆ, ದೊಡ್ಡಣ್ಣ ಬರೆಮೇಲು, ಕೆ.ಆರ್.ಮನಮೋಹನ್, ಸಂತೋಷ್ ಜಾಕೆ, ಚಿತ್ತರಂಜನ್ ಕೋಡಿ, ರಾಜೇಶ್ ಅಂಬೆಕಲ್ಲು, ಕುಶಾಲಪ್ಪ ಪೆರುವಾಜೆ, ಸತೀಶ್ ಕೂಜುಗೋಡು, ಜಯಪ್ರಕಾಶ್ ಕುಂಚಡ್ಕ, ಬೂಡು ರಾಧಾಕೃಷ್ಣ ರೈ, ಸುನಿಲ್ ರೈ ಕೇರ್ಪಳ, ಪದ್ಮನಾಭ ಪಾತಿಕಲ್ಲು, ರತ್ನಾಕರ ಗೌಡ ಕುಡೆಕಲ್ಲು, ಮೋನಪ್ಪ ತಂಬಿನಮಕ್ಕಿ, ಪದ್ಮನಾಭ ಬೀಡು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.