ಮನೆಯೊಡತಿಯ ಶಬ್ದ ಕೇಳಿ ಅಡಿಕೆ ತುಂಬಿಸಿದ ಚೀಲವನ್ನು ಬಿಟ್ಟು ಪರಾರಿಯಾದ ಭೂಪ
ಕಳ್ಳನ ಚಲನವಲನ ಸಿಸಿ ಟಿವಿ ಯಲ್ಲಿ ಪತ್ತೆ
ಹಳೆಗೇಟು ಗುಂಡ್ಯಡ್ಕ ಪರಿಸರದಲ್ಲಿ ಮನೆಯೊಂದರ ಅಂಗಳದಲ್ಲಿ ಒಣ ಹಾಕಿದ್ದ ಅಡಿಕೆಯನ್ನು ವ್ಯಕ್ತಿಯೊಬ್ಬ ಕಳ್ಳತನಕ್ಕೆ ಯತ್ನಿಸಿದ್ದು,ಶಬ್ದಕೇಳಿ ಕಿಟಕಿಯಿಂದ ನೋಡಿದ ಮನೆಯೊಡತಿ ಶಬ್ದವಿಟ್ಟಾಗ ಚೀಲದಲ್ಲಿ ತುಂಬಿಸುತ್ತಿದ್ದ ಅಡಿಕೆಯನ್ನು ಬಿಟ್ಟು ಕಳ್ಳ ಪರಾರಿಯಾದ ಘಟನೆ ಡಿ. 6ರಂದು ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುಂಡ್ಯಡ್ಕ ನಿವಾಸಿ ಇಬ್ರಾಹಿಂ ಶೀತಲ್ ಎಂಬುವವರ ಮನೆಯ ಅಂಗಳದಲ್ಲಿ ಅಡಿಕೆ ಒಣಗಿಸಲು ಹಾಕಲಾಗಿತ್ತು. ಡಿಸೆಂಬರ್ 6 ರಂದು ಮಧ್ಯಾಹ್ನ 3:30 ಗಂಟೆಗೆ ಸ್ಕೂಟಿಯಲ್ಲಿ ಬಂದ ವ್ಯಕ್ತಿ ಮನೆಯ ಎದುರು ಭಾಗದಲ್ಲಿದ್ದ ಗೇಟನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಗೇಟು ಒಳಭಾಗದಿಂದ ಚಿಲ್ಕ ಹಾಕಿದ ಕಾರಣ ಅದು ತೆರೆಯಲು ಸಾಧ್ಯವಾಗದೆ ಅಲ್ಲೇ ಪಕ್ಕದಲ್ಲಿ ಇರುವ ರಸ್ತೆಯ ಮೂಲಕ ಸ್ವಲ್ಪ ಮುಂದಕ್ಕೆ ಹೋಗಿ ಕಾಂಪೌಂಡ್ ದಾಟಿ ಮನೆಯ ಅಂಗಳಕ್ಕೆ ಬಂದಿದ್ದಾನೆ. ಬಳಿಕ ತಾನು ತಂದಿದ್ದ ಚೀಲದಲ್ಲಿ ಅಡಿಕೆಯನ್ನು ತುಂಬಿಸುತ್ತಿದ್ದಾಗ,ಹೊರಗಿನಿಂದ ಬರುತ್ತಿದ್ದ ಶಬ್ದವನ್ನು ಕೇಳಿ ಇಬ್ರಾಹಿಂ ರವರ ಪತ್ನಿ ಕಿಟಕಿಯಿಂದ ನೋಡಿದ್ದಾರೆ. ಈ ಸಂದರ್ಭದಲ್ಲಿ ಕಳ್ಳ ಚೀಲದಲ್ಲಿ ಅಡಿಕೆಯನ್ನು ತುಂಬಿಸುತ್ತಿದ್ದ ಎನ್ನಲಾಗಿದ್ದು ಈ ವೇಳೆ ಮಹಿಳೆ ಜೋರಾಗಿ ಬೊಬ್ಬೆ ಹಾಕಿದ್ದಾರೆ.ಮಹಿಳೆ ಬೊಬ್ಬೆ ಹಾಕುವುದನ್ನು ಕೇಳಿದ ಕಳ್ಳ ಕೂಡಲೆ ತಾನು ತುಂಬಿಸುತ್ತಿದ್ದ ಅಡಿಕೆ ಚೀಲವನ್ನು ಅಲ್ಲೇ ಬಿಟ್ಟು ಸ್ಥಳದಿಂದ ಕಾಲುಕ್ಕಿತ್ತಿದ್ದಾನೆ.
ಈ ಘಟನೆಯ ದೃಶ್ಯ ಸಿ ಸಿ ಟಿವಿಯಲ್ಲಿ ಸೆರೆಯಾಗಿದ್ದು ಮನೆಯವರು ಸುಳ್ಯ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.