ಸಂಪಾಜೆ : ಕಡೆಪಾಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯ

0

ಸ್ವಾಮಿ ಕೊರಗಜ್ಜ ದೈವದ ನುಡಿಯಂತೆ ಉದ್ಭವಗೊಂಡ ಭೂತ ಸಂಪಿಗೆ ಗಿಡಕ್ಕೆ ವಿಶೇಷ ಪೂಜಾ ವಿಧಿವಿಧಾನ

ದ.ಕ. ಸಂಪಾಜೆ ಗ್ರಾಮದ ಕಡೆಪಾಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಸ್ವಾಮಿ ಕೊರಗಜ್ಜ ಸನ್ನಿಧಿಯ ಪಕ್ಕದಲ್ಲಿ ದೈವದ ನುಡಿಯಂತೆ ಉದ್ಭವಗೊಂಡಿರುವ ಭೂತಸಂಪಿಗೆ ಗಿಡಕ್ಕೆ ವಿಶೇಷ ಪೂಜಾ ವಿಧಿವಿಧಾನಗಳನ್ನು ಡಿ.14ರಂದು ನಡೆಸಲಾಯಿತು.

ಸ್ವಾಮಿ ಕೊರಗಜ್ಜ ದೈವದ ನರ್ತಕರಾದ ಸುರೇಶ್ ಪಡ್ರೆ ಅವರು ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಕಳೆದ 2022ರ ಎಪ್ರಿಲ್ ತಿಂಗಳಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ಕಲಶೋತ್ಸವವು ಜರುಗಿದ್ದು, ಆ ಸಂದರ್ಭದಲ್ಲಿ ನಡೆದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವದಲ್ಲಿ ಕೊರಗಜ್ಜ ದೈವವು ಹಾಲು ಬರುವ ಭೂತಸಂಪಿಗೆ ಗಿಡವನ್ನು ಕ್ಷೇತ್ರದಲ್ಲಿ ಹುಟ್ಟಿಸುವ ಕುರಿತು ಅಭಯ ನೀಡಿತ್ತು. ಇದಾಗಿ ಇತ್ತೀಚಿನ ಕೆಲ ಸಮಯಗಳ ಹಿಂದೆ ಕ್ಷೇತ್ರದ ಸ್ವಾಮಿ ಕೊರಗಜ್ಜ ದೈವದ ಗುಡಿಯ ಹಿಂಬದಿಯಲ್ಲಿ ಹಾಲು ಬರುವ ಭೂತಸಂಪಿಗೆ ಗಿಡವೊಂದು ಉದ್ಭವಗೊಂಡಿದ್ದು, ಇದೀಗ ವಿಧಿವಿಧಾನಗಳ ಪ್ರಕಾರ ಅದಕ್ಕೆ ಪೂಜೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಈಶ್ವರ ಕಡೆಪಾಲ, ಮಾಜಿ ಅಧ್ಯಕ್ಷ ತೇಜಸ್ ಕಡೆಪಾಲ, ಕಾರ್ಯದರ್ಶಿ ರಕ್ಷಿತ್ ದೊಡ್ಡಡ್ಕ, ಕೋಶಾಧಿಕಾರಿ ರಾಜೇಶ್ ಬಂಟೋಡಿ, ಉಮೇಶ್ ಕುದ್ಪಾಜೆ, ಓ.ಯಂ. ಸುರೇಂದ್ರ, ಜಗದೀಶ್ ರೈ ಸಂಪಾಜೆ, ಸುರೇಶ್ ಕಲ್ಲುಗುಂಡಿ, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ ಸೇರಿದಂತೆ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಆಡಳಿತ ಸಮಿತಿ ಪದಾಧಿಕಾರಿಗಳು ಸೇರಿದಂತೆ ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.