ವಿವಾಹವಾಗಿ ಮಂಗಳೂರಿನಲ್ಲಿ ವಾಸಿಸುತ್ತಿದ್ದ ಸುಳ್ಯ ಮೂಲದ ಮಹಿಳೆ ಮತ್ತು ಆಕೆಯ ಮೂರು ವರ್ಷದ ಮಗು ನಾಪತ್ತೆ

0

ಸುಳ್ಯ ಮೂಲದ ಮಹಿಳೆ ಶರೀನಾ ವೈ (24 ವರ್ಷ) ಹಾಗೂ ಆಕೆಯ 3 ವರ್ಷದ ಮಗ ಮೊಹಮ್ಮದ್ ತೋಹರ್ ಡಿಸೆಂಬರ್ 11ರಂದು ರಾತ್ರಿಯಿಂದ ಕಾಣೆಯಾಗಿರುವುದಾಗಿ ಆಕೆಯ ಪತಿ ಮಂಗಳೂರು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸುಳ್ಯ ಮೂಲದ ಯೂಸುಫ್ ಎಂಬುವವರ ಪುತ್ರಿ ಶರೀನಾ ಆರು ವರ್ಷದ ಹಿಂದೆ ಸುಳ್ಯದಿಂದ ವಿವಾಹವಾಗಿ ಮಂಗಳೂರು ಕೆ ಪಿ ನಗರದ ಶಾಯಿಸ್ತ ಮಂಜಿಲ್ ನಲ್ಲಿ ತಮ್ಮ ಪತಿ ಅಹ್ಮದ್ ಮಕ್ಸೂದ್ ರವರೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.

ಇವರಿಗೆ ಮೂರು ವರ್ಷದ ಗಂಡು ಮಗು ಇದ್ದು ಪ್ರಸ್ತುತ ಐದು ತಿಂಗಳ ಗರ್ಭಿಣಿ ಕೂಡ ಆಗಿದ್ದರು ಎನ್ನಲಾಗಿದೆ.

ಡಿಸೆಂಬರ್ 11ರಂದು ರಾತ್ರಿ ಎಲ್ಲರೂ ಮಲಗಿದ್ದಾಗ ಮಧ್ಯರಾತ್ರಿ 2.45ರ ಸುಮಾರಿಗೆ ಶರೀನಾ,ತನ್ನ ಪುತ್ರನೊಂದಿಗೆ ಮನೆ ಬಿಟ್ಟು ಹೋಗಿರುವುದಾಗಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮರುದಿನ ಬೆಳಿಗ್ಗೆ ಮನೆಯ ಎದುರಿನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮನೆ ಬಿಟ್ಟು ಹೋಗಿರುವುದಾಗಿ ದೃಢಪಟ್ಟಿದೆ.


ಶರೀನಾ ಬಟ್ಟೆ ಬರೆ ಹಾಗೂ ಐದು ಗ್ರಾಂ ಚಿನ್ನದ ಆಭರಣ ಕೂಡ ತೆಗೆದುಕೊಂಡು ಹೋಗಿದ್ದು ತಾಯಿ ಮನೆಗೆ ಹೋಗುತ್ತಿರುವುದಾಗಿ ಚೀಟಿ ಬರೆದಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಆದರೆ ಅವರ ತಾಯಿಗೆ ಫೋನ್ ಮಾಡಿ ವಿಚಾರಿಸಿದಾಗ ಅಲ್ಲಿಗೆ ತಲುಪಿರಲಿಲ್ಲ,ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಹಮದ್ ಮಕ್ಸೂದ್ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.