ವರ್ಷದಲ್ಲಿ ವೈಭವಿಸಿದ ಹರ್ಷ – ‘ವರ್ಷ ವೈಭವ – 2023’

0

“ಗೆಲುವಿನ ಹಾದಿಗೆ ಬೆಳಕ ಬೀರುವ” ಎಂಬ ಧ್ಯೇಯದೊಂದಿಗೆ ತನ್ನ ತಳಪಾಯವನ್ನು ಭದ್ರಗೊಳಿಸುತ್ತಾ ಮುನ್ನಡೆಯುತ್ತಿರುವ ವಿದ್ಯಾಸಂಸ್ಥೆ ‘ಕೆ. ಎಸ್. ಗೌಡ ಸಮೂಹ ವಿದ್ಯಾಸಂಸ್ಥೆ (ರಿ). ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ನಿಂತಿಕಲ್ಲು ಎಂಬಲ್ಲಿ ವರ್ಷನಗರ ಎಂಬ ಸ್ಥಳದಸ್ಮಿತೆಯನ್ನು ಬೆಳೆಸಿಕೊಂಡು ತಲೆ ಎತ್ತಿ ನಿಂತ ಕೆ. ಎಸ್. ಗೌಡ ಸಮೂಹ ವಿದ್ಯಾಸಂಸ್ಥೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ, ಪದವಿ ಪೂರ್ವ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ತರಬೇತಿ ಸಂಸ್ಥೆಗಳೆಂಬ ತ್ರಿವಳಿ ಒಕ್ಕೂಟ ಶಿಕ್ಷಣ ವಿಭಾಗಗಳಿಂದ ಕೂಡಿದ್ದು, ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಕೇಂದ್ರವಾಗಿ ರೂಪುಗೊಂಡಿದೆ.

2019ರಲ್ಲಿ ಕಾಣಿಸಿಕೊಂಡು, ಎಲ್ಲೆಲ್ಲೂ ಹಬ್ಬಿಕೊಂಡಿದ್ದ ಕೊರೋಣಾ ವೈರಾಣು ಸಾಕಷ್ಟು ನೋವುಗಳಿಗೆ ಮುನ್ನುಡಿ ಬರೆದದ್ದು ಮಾತ್ರವಲ್ಲದೇ ಮುಗ್ಧ ಮನಸ್ಸುಗಳನ್ನು ತಮ್ಮದಾಗಿಸಿಕೊಂಡ ಪುಟ್ಟ ಮಕ್ಕಳಿಂದ ಹಿಡಿದು ಉನ್ನತ ಮಟ್ಟದ ಶಿಕ್ಷಣ ಪಡೆಯುತ್ತಿದ್ದ ಸಾವಿರಾರು ವಿದ್ಯಾರ್ಥಿಗಳ ಮನವನ್ನು ಕೂಡ ನಿರಾಸೆಯಿಂದ ಘಾಸಿಗೊಳಿಸಿತ್ತು. ಬಹುಶಃ ಇಡೀ ವಿಶ್ವ ಇದಕ್ಕೆ ಹೊರತಾಗಿರಲಿಲ್ಲ ಕೂಡ ! ಇಂತಹದೊಂದು ಭೀಕರತೆಗೆ ಒಳಗಾಗಿ, ವ್ಯಾಪಕವಾಗಿ ಹಬ್ಬಿ ನಿಂತಿದ್ದ ಕಟು ಸತ್ಯವನ್ನು ಸಹಿಸಿ, ಸೃಷ್ಟಿಯ ಶಕ್ತಿಯನ್ನು ನಂಬಿ ಬಾಳ್ವೆಯ ಹೆಜ್ಜೆಗಳನ್ನು ಸವೆಸಿದುದರ ಪರಿಣಾಮವೋ ಎಂಬಂತೆ ಪ್ರಸ್ತುತ ವಿದ್ಯಾಸಂಸ್ಥೆಯು ತನ್ನ ವೈಭವವನ್ನು ಡಿಸೆಂಬರ್ ತಿಂಗಳ 16ನೇ ಶನಿವಾರದಂದು ಅತೀ ಅದ್ದೂರಿಯಾಗಿಯೇ ಆಚರಿಸಿಕೊಂಡಿತು.

ಶೈಕ್ಷಣಿಕ ಸಾಧನೆಗೆ ಕೇವಲ ಕಲಿಕೆಯೊಂದೇ ಅಂಶ ಪ್ರಧಾನವಾಗಿರದೇ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ವಿದ್ಯಾರ್ಥಿಗಳ ಭಾಗವಹಿಸುವಿಕೆ ಅತೀ ಮುಖ್ಯ ಹಾಗೂ ಅವಶ್ಯಕವಾಗಿರುತ್ತದೆ ಕೂಡ. ಪುಸ್ತಕದ ಬಿಳಿ ಹಾಳೆಯ ತುಂಬೆಲ್ಲ ಅಚ್ಚೊತ್ತಿ ನಿಂತ ಪಾಠಗಳ ಜೊತೆ ಜೊತೆಗೆ ಮನಸ್ಸನ್ನು ಮತ್ತಷ್ಟು ಪ್ರಫುಲ್ಲಮಯಗೊಳಿಸಲು ನೃತ್ಯ, ಗಾಯನ, ಶಿಬಿರ, ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಇವೇ ಮೊದಲಾದ ಅಂಶಗಳು ಕೂಡ ಗಣನೀಯವಾಗಿ ಪಾತ್ರ ವಹಿಸುತ್ತದೆ ಎಂಬುದನ್ನು ಎರಡು ಮಾತಿಲ್ಲದೆ ಯಾರಾದರೂ ಒಪ್ಪಿಕೊಳಲೇ ಬೇಕಷ್ಟೇ ! ಪಠ್ಯ ಎಂಬುದು ವಿದ್ಯಾರ್ಥಿಯನ್ನು ಆರ್ಥಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ವಿಕಸನಗೊಳಿಸಿದರೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ಮನೋಸ್ಥಿತಿಯನ್ನು ಉತ್ತಮಗೊಳಿಸುವುದಷ್ಟೇ ಅಲ್ಲದೇ ಸುಪ್ತ ಪ್ರತಿಭೆಯನ್ನು ಪ್ರಜ್ವಲಿಸುವಂತೆ ಮಾಡಿ, ಸ್ವ ಸಾಮರ್ಥ್ಯದ ಅರಿವನ್ನು ಸ್ವತಃ ಅರಿಕೆ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಿರುತ್ತದೆ ಎಂದರೆ ತಪ್ಪಾಗಲಾರದು. ಇದೇ ಸದುದ್ದೇಶವನ್ನೇ ಲಕ್ಷ್ಯವಾಗಿರಿಸಿಕೊಂಡು ಕೆ. ಎಸ್. ಗೌಡ ಸಮೂಹ ವಿದ್ಯಾಸಂಸ್ಥೆ ತನ್ನ ವಾರ್ಷಿಕ ವೈಭವಕ್ಕೆ ನಾಂದಿ ಬರೆಯಿತು ವಾರ್ಷಿಕ ಕ್ರೀಡೋತ್ಸವದ ಮೂಲಕ.

ಡಿಸೆಂಬರ್ ತಿಂಗಳ 6ನೇ ತಾರೀಕು ಕೆ. ಎಸ್. ಗೌಡ ಸಮೂಹ ವಿದ್ಯಾಸಂಸ್ಥೆ ತನ್ನ ತ್ರಿವಳಿ ಒಕ್ಕೂಟವನ್ನು ಜೊತೆಗಿರಿಸಿಕೊಂಡು ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿತು. ತುಳುನಾಡಿನ ಹೆಮ್ಮೆಯ ಅವಳಿ ವೀರರುಗಳಾದ ‘ಕೋಟಿ ಚೆನ್ನಯ’ ರ ಜನ್ಮಭೂಮಿಯಾದ ಎಣ್ಮೂರು ಕ್ರೀಡಾಂಗಣದಲ್ಲಿ ಪ್ರಸ್ತುತ ಕಾರ್ಯಕ್ರಮವನ್ನು ಶ್ರೀ. ರಘುನಾಥ ರೈ ಕಟ್ಟಬೀಡು, ಅಧ್ಯಕ್ಷರು ‘ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನ (ರಿ) ಕೋಟಿ ಚೆನ್ನಯ ನಗರ ಎಣ್ಮೂರು’ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಶುಭ ನುಡಿಗಳನ್ನು ನುಡಿದು, ಕ್ರೀಡಾ ಜ್ಯೋತಿಯನ್ನು ಗೌರವಿಸುವ ಮೂಲಕ ಕಾರ್ಯಕ್ರಮ ಪೂರ್ವಾಹ್ನ ಗಂಟೆ 10ಕ್ಕೆ ಸರಿಯಾಗಿ ಆರಂಭಗೊಂಡು ಸಂಜೆ ಗಂಟೆ 5ರ ಹೊತ್ತಿಗೆ ಸಮಾಧಾನಕರ ತೆರೆಯನ್ನು ಕಂಡು ಆ ದಿನದ ಸಾರ್ಥಕ್ಯ ಕಂಡುಕೊಂಡಿತು. ವಿವಿಧ ಬಗೆಯ ಕ್ರೀಡಾ ಸ್ಪರ್ಧೆಗಳು, ಆಟೋಟಗಳು ಈ ದಿನದ ಸಾರ್ಥಕತೆಯಲ್ಲಿ ಬೆಳಗಿದ ಪ್ರತಿಭೆಗಳಾದವು.

ವಾರ್ಷಿಕ ಕ್ರೀಡಾಕೂಟದ ಮೆರುಗು ತನ್ನ ಛಾಪನ್ನು ಮಸ್ತಕದಲ್ಲಿ ಅಚ್ಚೊತ್ತಿಸುತ್ತಿರುವಾಗಲೇ ವಾರ್ಷಿಕೋತ್ಸವದ ವೈಭವ ವೈಭವಿಸಲು ಮುಂದಾಯಿತು. ಶಾಲೆ, ಕಾಲೇಜು ಮತ್ತು ತಾಂತ್ರಿಕ ತರಬೇತಿ ಸಂಸ್ಥೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಡಿಸೆಂಬರ್ 15ರಂದು ನಡೆದರೆ ಡಿಸೆಂಬರ್ 16ರಂದು ವರ್ಷನಗರದಲ್ಲಿ ವಾರ್ಷಿಕೋತ್ಸವದ ಸಂಭ್ರಮ. ಮುಂಜಾನೆ ಗಂಟೆ 9.30ಕ್ಕೆ ಅಲೆಕ್ಕಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಕುಸುಮಾವತಿ ರೈ ಗುತ್ತು ಇವರು ಧ್ವಜಾರೋಹಣ ನಡೆಸುವುದರ ಮೂಲಕ ಕೆ. ಎಸ್. ಗೌಡ ಸಮೂಹ ವಿದ್ಯಾಸಂಸ್ಥೆಯ ‘ವರ್ಷ ವೈಭವ – 2023’ ಈ ಒಂದು ಸಮಾರಂಭಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.‌ ಅಪರಾಹ್ನ ಗಂಟೆ 2ಕ್ಕೆ ಸರಿಯಾಗಿ ವಿದ್ಯಾಸಂಸ್ಥೆಯ ಗಣ್ಯರುಗಳ ಹಾಗೂ ಊರಿನ ಹಿರಿಯರ ಸಹಭಾಗಿತ್ವದಲ್ಲಿ ‘ದೀಪ ಪ್ರಜ್ವಲನೆ’ ಮೂಲಕ ಏರ್ಪಟ್ಟ ಸಭಾ ಕಾರ್ಯಕ್ರಮ ತಾಲೂಕಿನ ಮಾನ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ, ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್. ಕೆ. ಎಸ್ ಮತ್ತು ನಿರ್ದೇಶಕರುಗಳಾದ ಶ್ರೀ ಕುಮಾರಸ್ವಾಮಿ. ಕೆ. ಎಸ್, ಸ.ಪ.ಪೂ. ಕಾಲೇಜು ಗಾಂಧಿನಗರ ಸುಳ್ಯ ಇಲ್ಲಿನ ಪ್ರಾಚಾರ್ಯರಾದ ಶ್ರೀ ಅಬ್ದುಲ್ ಸಮದ್, ಕಲ್ಮಡ್ಕ ಗ್ರಾಮದ ಪ್ರಥಮ ಪ್ರಜೆ ಶ್ರೀ. ಮಹೇಶ್ ಕುಮಾರ್ ಕರಿಕ್ಕಳ ಇವರುಗಳ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು. ಕಲಿಕಾ ಚರ್ಯೆಗಳಲ್ಲಿ ಪ್ರತಿಭೆ ಮೆರೆದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ನೀಡಿ ಶುಭ ಕೋರಿದರೆ, ಕ್ರೀಡಾ ವಿಭಾಗದಲ್ಲಿ ವಿಜಯ ಮೆರೆದ ಪಟುಗಳಿಗೆ ಚಾಂಪಿಯನ್ ಶಿಪ್ ನೀಡಿ ಗೌರವಿಸಲಾಯಿತು. ವಿದ್ಯಾಸಂಸ್ಥೆಯ ವಿಕಸನದ ಬೇರಿನಲ್ಲಿ ತಾವುಗಳೂ ಇರುವುದಾಗಿ ನುಡಿದ ಗಣ್ಯರ ಮಾತುಗಳು ಸಭೆಯ ಗೌರವವನ್ನು ಹೆಚ್ಚಿಸಿದುದು ಮಾತ್ರವಲ್ಲದೆ, ಮಾನ್ಯ ಪ್ರಾಚಾರ್ಯರಾದ ಶ್ರೀ ಅಬ್ದುಲ್ ಸಮದ್ ಅವರ ವಿಚಾರಧಾರೆ ವಿದ್ಯಾರ್ಥಿಗಳಲ್ಲಿ ನವಚೈತನ್ಯದ ಅಲೆಯನ್ನು ಎಬ್ಭಿಸಿದ್ದು ಸುಳ್ಳಲ್ಲ. ಇದೇ ಸಂದರ್ಭದಲ್ಲಿ ತ್ರಿವಳಿ ಸಂಸ್ಥೆಗಳ ಮುಖಂಡರುಗಳಾದ ಉಮೇಶ ಗೌಡ. ಹೆಚ್, ಸದಾನಂದ ರೈ ಕೂವೆಂಜ ಹಾಗೂ ಸುಧೀರ್. ಎಂ. ವಿ ಇವರುಗಳಿಂದ ವಾರ್ಷಿಕ ವರದಿ ವಾಚನ ನಡೆಯಿತು. ಮಾನ್ಯ ಶಾಸಕರನ್ನು ಕೂಡ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಅಂಬೆಗಾಲಿಡುವ ಪುಟ್ಟ ಪುಟ್ಟ ಪುಟಾಣಿಗಳಿಂದ ಹಿಡಿದು ಕೈಯಲ್ಲಿ ಮೆಕಾನಿಕ್ ಟೂಲ್ಸಗಳನ್ನು ಹಿಡಿದು ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದ ವಿದ್ಯಾರ್ಥಿಗಳವರೆಗಿನ ಸುಪ್ತ ಪ್ರತಿಭೆ ಸಂಜೆ ಗಂಟೆ 4.15ರ ಸುಮಾರಿಗೆ ಆರಂಭಗೊಂಡು ರಾತ್ರಿ ಗಂಟೆ 9.30ರ ಸುಮಾರಿಗೆ ಸಮಾರೋಪ ಕಂಡುಕೊಂಡಿತು. ಪೂಜಾ ನೃತ್ಯ, ಪಟ ಪಟನೇ ಓಡುವ ಪುಟಾಣಿಗಳ ಪುಟ್ಟ ಪುಟ್ಟ ಹೆಜ್ಜೆಗಳ ಮನಮೋಹಕ ನಡಿಗೆ, ಕಿರಿಯರೇ ಆಗಿದ್ದರೂ ಕಿರಿಯರಲ್ಲದವರಂತೆ ವರ್ತಿಸುವ ಮಕ್ಕಳ ನೃತ್ಯ, ಹೈಸ್ಕೂಲ್ ವಿಭಾಗದ ಮಕ್ಕಳಿಂದ ‘ಕೋಟಿ ಚೆನ್ನಯ ರೂಪಕ’, ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಂದ ಹಾಗೂ ಐಟಿಐ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಗಾನ-ನೃತ್ಯ..ಇವೇ ಮೊದಲಾದ ಭಿನ್ನ ಭಿನ್ನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮ ವರ್ಷ ವೈಭವದ ಮೆರುಗಿಗೆ ಮತ್ತಷ್ಟು ಪ್ರಭೆ ನೀಡಿತು. ನವರಸಗಳಿಂದ ಮೇಳವಿಸಿದ ಈ ಒಂದು ಸಾಂಸ್ಕೃತಿಕ ಅನಾವರಣ ಸಂಸ್ಥೆಯವರಿಂದಷ್ಟೇ ಅಲ್ಲದೇ ಊರಿನವರ ಹಾಗೂ ಸ್ಥಳೀಯ ಗಣ್ಯರುಗಳ ಅಧರಗಳಿಂದಲೂ ಮೆಚ್ಚುಗೆಗೆ ಪಾತ್ರವಾದದ್ದು ಖಂಡಿತ ಪ್ರಶಂಸನೀಯ ಕೆಲಸವೇ ಸರಿ.

‘ವಸುದೈವ ಕುಟುಂಬಕಂ” ಎಂಬ ತತ್ವಕ್ಕೆ ಸಾಮ್ಯವಾಗುವಂತೆ ಈ ಒಂದು ಸಮಾರಂಭ ಮೂಡಿಬಂದದ್ದು ಖಂಡಿತ ಜನಮಾನಸದಲ್ಲಿ ಅಚ್ಚರಿಯ ಭಾವವೊಂದನ್ನು ಮೂಡಿಸದೇ ಇದ್ದಿರಲಾರದು. ಆಧುನೀಕತೆಯೇ ಮೈವೆತ್ತು, ಸಂಬಂಧಗಳನ್ನು ಸಂಕುಚಿಸಿ, ಭಾವನೆಗಳನ್ನು ಬರಿದಾಗಿಸುತ್ತಿರುವ ಕಾಲಘಟ್ಟದಲ್ಲಿ ಆಡಳಿತಾತ್ಮಕವಾಗಿ ಹಾಗೂ ಪಠ್ಯ ಕ್ರಮದಲ್ಲಿ ಸಂಪೂರ್ಣ ಭಿನ್ನತೆಯನ್ನು ಮೈಗೂಡಿಸಿಕೊಂಡ ಈ ತ್ರಿವಳಿ ಸಂಸ್ಥೆಗಳ ಮನೋಭಾವ ‘ವರ್ಷ ವೈಭವ 2023’ರ ಸಂಭ್ರಮದಲ್ಲಿ ಅತ್ಯಂತ ಪಾರದರ್ಶಕವಾಗಿ ಬಿಂಬಿತಗೊಂಡದ್ದು ಶ್ಲಾಘನೀಯ. ನಡೆವ ಹೆಜ್ಜೆ ಭಿನ್ನತೆಯನ್ನು ರೂಢಿಸಿಕೊಂಡಿದ್ದರೂ, ಓದು ಬರಹದ ಈಜು ವಿರುದ್ಧ ದಿಕ್ಕಿನಲ್ಲಿ ಸಾಗುವಂತಿದ್ದರೂ ಕೂಡ ಮನಸ್ಸಿನಲ್ಲಿ ಒಂದಾಗಿದ್ದವು – ಕರ್ತವ್ಯದಲ್ಲಿ ಜೊತೆ ಸೇರಿ ನಿಂತಿದ್ದವು ‘ಏಕತೆ’ಯ ಭಾವ ಸಾರಿ, ‘ಒಂದೇ’ ಎಂಬ ಅಸ್ಮಿತೆಯ ಅಸ್ತಿತ್ವದಲ್ಲಿ ದೃಢ ಮನವಿರಿಸಿ..

ಸುಮವೊಂದು ಮೆರುಗಿನಲ್ಲಿ ನಳನಳಿಸಬೇಕಾದರೆ ಹೇಗೆ ಅದರ ಪಕಳೆಗಳು ಪ್ರಮುಖ ಪಾತ್ರ ವಹಿಸುತ್ತದೆಯೋ ಹಾಗೆಯೇ ಕಾರ್ಯಕ್ರಮವೊಂದರ ಸಂಪನ್ನತೆಯಲ್ಲಿ ಸಂಸ್ಥೆಯ ಸಿಬ್ಬಂದಿಗಳ ವೈಯಕ್ತಿಕ ಹಾಗೂ ಸಾಮೂಹಿಕ ಪಾಲ್ಗೊಳ್ಳುವಿಕೆ ಕೂಡ ಮಹತ್ವದ್ದೇ. ಸುರಿದ ಬೆವರ ಹನಿಯ ಲೆಕ್ಕವನ್ನಿಡದೇ, ತನು ಕಂಡ ದಣಿವಿನ ಪರಿವಿರದೇ, ಆಯೋಜಿಸಿಕೊಂಡ ಗಮ್ಯದ ವ್ಯಾಪ್ತಿ ವಿಸ್ತೃತವಾದದ್ದೆಂಬ ಅರಿವನ್ನು ಅರಿವಿನಲ್ಲಿ ಪ್ರತಿ ಕ್ಷಣವೂ ಉಳಿಸಿಕೊಂಡು ಅದನ್ನು ಸಾಫಲ್ಯಗೊಳಿಸಲು ಹೆಜ್ಜೆಗಳು ಕಂಡ ಅಡೆ ತಡೆಗಳನ್ನು ಕೂಡ ಆತ್ಮಶಕ್ತಿಯಿಂದ ಬದಿಗೆ ಸರಿಸುತ್ತಾ ಕೌಟುಂಬಿಕ ಪರಿಕಲ್ಪನೆಯನ್ನು ಚಿತ್ತದಲ್ಲಿ ಇರಿಸಿಕೊಂಡ ಶ್ರಮ ಈ ಒಂದು ಸಮಾರಂಭದ ಯಶಸ್ಸಿಗೆ ರೂವಾರಿಯಾಯಿತು ಎಂದರೆ ಖಂಡಿತ ತಪ್ಪಾಗಲಾರದು. ವಿಹಗವೊಂದು ಗೂಡು ಹೆಣೆಯುವುದು ಎಲ್ಲರಿಗೂ ಸಹಜವಾಗಿ ತೋರುವ ಪ್ರಕ್ರಿಯೆಯಾದರೂ ಕೂಡ ಅದರ ಸಾಮರ್ಥ್ಯವನ್ನು ಪ್ರತಿಫಲಿಸಲು ಅಲ್ಲಿ ಕಾರಣೀಭೂತವಾಗುವ ಅಂಶಗಳು ಬಹಳಷ್ಟು ಹಾಗೂ ಅವುಗಳ ಅರ್ಪಣೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗೆಯೇ ಕಾರ್ಯಕ್ರಮವೊಂದರ ಗಣನೀಯ ವಿಜಯ ಕೇವಲ ಆರ್ಥಿಕ ಹಾಗೂ ಸಾಮಾಜಿಕ ಪಾಲ್ಗೊಳ್ಳುವಿಕೆಯಿಂದಷ್ಟೇ ಆಗಿರದೇ ಪ್ರತಿಯೊಂದು ಕಿರಿದಾದ ಅಂಶಗಳನ್ನು ಕೂಡ ಅವಲಂಬಿಸಿರುತ್ತದೆ. ಮಿಂಚುವ ಬೆಳಕು, ಗಾನವೈಭವದಲ್ಲಿ ವಿಲಾಸಿಸುವಂತೆ ಪ್ರೇರೇಪಿಸುವ ಧ್ವನಿ ಮಾಧ್ಯಮ, ಹಸಿದ ಉದರಕ್ಕೆ ನಳಪಾಕದ ತುತ್ತು, ತಮ್ಮವರೆಂದು ಭಾವಿಸಿಕೊಂಡ ಬಂಧಗಳ ನಿಸ್ವಾರ್ಥ ಸಹಕಾರ..ದಂತಹ ಮಹತ್ವದ ಹಸ್ತಗಳು ಕೂಡ ಇಲ್ಲಿ ಅಭಿನಂದನಾರ್ಹ ಹಾಗೂ ಅವುಗಳು ಬೆಲೆಗೆ ನಿಲುಕದ್ದು ಕೂಡ. ‘ವರ್ಷ ವೈಭವ 2023’ರ ಕಾಂತಿಯನ್ನು ಮತ್ತಷ್ಟು ದೇದೀಪ್ಯಮಾನಗೊಳಿಸುವಲ್ಲಿ ಸಮರ್ಪಣಾ ಭಾವದಲ್ಲಿ ಅರ್ಪಿತಗೊಂಡ ಪ್ರತಿಯೊಂದು ಮಾನಸಗಳಿಗೂ ಅನಂತ ಅನಂತ ಕೃತಜ್ಞತೆಗಳು.

  • ನಯನ. ಜಿ. ಎಸ್,
    ಕೋಟೆ ಮುಂಡುಗಾರು.