ರಾಷ್ಟ್ರೀಯ ಲಗೋರಿ ಪಂದ್ಯಾಟದ ರೆಫ್ರೀಸ್ ಟ್ರೈನಿಂಗ್ ಆರಂಭ

0


ಫೆಬ್ರವರಿ ತಿಂಗಳಲ್ಲಿ ಸುಳ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಲಗೋರಿ ಪಂದ್ಯಾಟದ ಪೂರ್ವಭಾವಿಯಾಗಿ ನಿರ್ಣಾಯಕರುಗಳಿಗೆ ತರಬೇತಿ ಶಿಬಿರವು ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಷನ್ ಆಶ್ರಯದಲ್ಲಿ ಇಂದು ಸುಳ್ಯದ ಗೌಡ ಸಮುದಾಯ ಭವನದ ಆವರಣದಲ್ಲಿ ಆರಂಭಗೊಂಡಿತು. ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು ಮತ್ತು ದ.ಕ.ಜಿಲ್ಲೆಯ ವಿವಿಧ ತಾಲೂಕುಗಳ ದೈಹಿಕ ಶಿಕ್ಷಣ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದರು.


ರೆಫ್ರೀಸ್ ಟ್ರೈನಿಂಗ್ ಅನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕ್ರೀಡಾಪಟು ಹಾಗೂ ಕ್ರೀಡಾ ಸಂಘಟಕ ಎನ್.ಎ.ರಾಮಚಂದ್ರರು ಲಗೋರಿ ಕ್ರೀಡೆಯನ್ನು ಬೆಳೆಸುವಲ್ಲಿ ರೆಫ್ರಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಕಾಲಕಾಲಕ್ಕೆ ಅಗತ್ಯವಾದ ಬದಲಾವಣೆಗಳನ್ನು ಅಳವಡಿಸಿಕೊಂಡು ನಿಯಮದಂತೆ ಶಿಸ್ತು ಬದ್ಧವಾಗಿ ಲಗೋರಿಯನ್ನು ಆಡಿಸಿದರೆ ದೊಡ್ಡಣ್ಣ ಬರೆಮೇಲು ಅವರ ಕನಸಿನಂತೆ ರಾಷ್ಟ್ರಮಟ್ಟದಲ್ಲಿ ಇದು ಬೆಳಗಲು ಸಾಧ್ಯ ಎಂದರು. ರಾಷ್ಟ್ರೀಯ ಲಗೋರಿ ಪಂದ್ಯಾಟದ ಸಂಘಟನಾ ಸಮಿತಿಯ ಅಧ್ಯಕ್ಷರಾದ ಎನ್.ಜಯಪ್ರಕಾಶ್ ರೈ ಸಭಾಧ್ಯಕ್ಷತೆ ವಹಿಸಿದ್ದರು. ಕಳೆದ ೨೩ ವರ್ಷಗಳಿಂದ ದೊಡ್ಡಣನ್ಣ ಬರೆಮೇಲುರವರು ಲಗೋರಿ ಪಂದ್ಯಾಟದ ಪುನರುಜ್ಜೀವನಕ್ಕಾಗಿ ಹೋರಾಡುತ್ತಿದ್ದಾರೆ. ಸ್ಕೂಲ್ ಗೇಮ್ ಆಗಿ ಲಗೋರಿಯು ಕ್ರೀಡಾ ಪಠ್ಯಕ್ಕೆ ಸೇರ್ಪಡೆಗೊಳ್ಳಬೇಕೆಂಬುದು ಅವರ ಮತ್ತು ನಮ್ಮೆಲ್ಲರ ಆಶಯ.

ಹಾಗಾದಾಗ ಲಗೋರಿ ಬೆಳೆಯುತ್ತದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮಂಡ್ಯದ ರವಿ, ಸಂಘಟನಾ ಸಮಿತಿಯ ಖಜಾಂಜಿ ಸಂತೋಷ್ ಕುತ್ತಮೊಟ್ಟೆ, ಲಯನ್ಸ್ ಕ್ಲಬ್ ಅಧ್ಯಕ್ಷ ಲ. ವೀರಪ್ಪ ಗೌಡ ಕಣ್ಕಲ್, ಕ್ರೀಡಾ ಪ್ರೋತ್ಸಾಹಕ ಹರೀಶ್ ರೈ ಉಬರಡ್ಕ, ಶರತ್ ಅಡ್ಕಾರ್, ರವಿಚಂದ್ರ ಕೊಡಿಯಾಲಬೈಲು, ಲಗೋರಿ ರೆಫ್ರಿಗಳ ಪ್ರಮುಖ ಸಂದೀಪ್ ರೈ ಪಲ್ಲೋಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ದೊಡ್ಡಣ್ಣ ಬರೆಮೇಲುರವರು ಶಿಬಿರಾರ್ಥಿಗಳಿಗೆ ಲಗೋರಿಯ ನಿಯಮಾವಳಿಗಳ ಬಗ್ಗೆ ತರಬೇತಿ ನೀಡಿದರು.