ಮುಕ್ಕೂರು ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0

ಮೌಲ್ಯಯುತ ದಾರಿಯಲ್ಲಿ ಸಾಗಲು ಮುಕ್ಕೂರು ಶಾಲೆಯಲ್ಲಿ ಪಡೆದ ಶಿಕ್ಷಣ ಕಾರಣ : ಸಂಸದ ನಳಿನ್ ಕುಮಾರ್ ಕಟೀಲ್

ರಾಜಕೀಯ ಕ್ಷೇತ್ರದಲ್ಲಿ ನಾನು ಎತ್ತರದ ಸ್ಥಾನಕ್ಕೆ ಏರಿದ್ದರೂ ನನ್ನೊಳಗೆ ನೈತಿಕತೆ, ಮೌಲ್ಯಗಳು ಉಳಿದುಕೊಳ್ಳಲು ಮುಕ್ಕೂರಿನ ಶಾಲೆಯಲ್ಲಿ ದೊರೆತ ಶಿಕ್ಷಣ ಕಾರಣ ಎಂದು ದ.ಕ.ಲೋಕಸಭಾ ಕ್ಷೇತ್ರದ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದರು.


ಮುಕ್ಕೂರು-ಪೆರುವಾಜೆ ಸರಕಾರಿ ಉನ್ನತ್ತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮೌಲ್ಯಯುತ ದಾರಿಯಲ್ಲಿ ಸಾಗಿ ಭ್ರಷ್ಟಚಾರ ರಹಿತವಾದ ಆಡಳಿತ ನಡೆಸಲು ಮುಕ್ಕೂರಿನಲ್ಲಿ ದೊರೆತ ಶ್ರೇಷ್ಠ ಶಿಕ್ಷಣದಿಂದ ಸಾಧ್ಯವಾಗಿದೆ ಎಂದು ತನ್ನ ಪ್ರಾಥಮಿಕ ಶಾಲಾ ದಿನಗಳನ್ನು ಸ್ಮರಿಸಿಕೊಂಡರು.

ಹತ್ತಾರು ಕಡೆಗಳಲ್ಲಿ ಸಮ್ಮಾನ, ಅಭಿನಂದನೆಗಳು ಆಗುತ್ತದೆ. ನಾನು ಸಮ್ಮಾನದ ಹಂತವನ್ನು ದಾಟಿ ಬಂದಿದ್ದರೂ ಮುಕ್ಕೂರು ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಸಾಧಕರಾಗುವ ದೈರ್ಯ, ವಿಶ್ವಾಸ ತುಂಬಬೇಕು ಅನ್ನುವ ನಿಟ್ಟಿನಲ್ಲಿ ಸಮ್ಮಾನ ಸೀಕ್ಷರಿಸಿದ್ದೇನೆ ಎಂದು ಸಂಸದ ನಳಿನ್ ಉಲ್ಲೇಖಿಸಿದರು.

80 ಸಾವಿರ ಕೋಟಿ ಅನುದಾನ
ದ.ಕ.ಜಿಲ್ಲೆಯ ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಹದಿನೈದು ವರ್ಷಗಳನ್ನು ಪೂರೈಸುತ್ತಿರುವ ಮೊದಲ ಸಂಸದ ನಾನು. ಅತಿ ಹೆಚ್ಚು ಮತಗಳ ಅಂತರದ ಗೆಲುವನ್ನು ಪಡೆದಿದ್ದೇನೆ. ಕಳೆದ ಮೂರು ಅವಧಿಯಲ್ಲಿ 80 ಸಾವಿರ ಕೋ.ರೂ.ಅನುದಾನವನ್ನು ಈ ಜಿಲ್ಲೆಗೆ ತಂದಿದ್ದೇನೆ. ಪ್ಲಾಸ್ಟಿಕ್ ಪಾರ್ಕ್, ಕೋಸ್ಟ್ ಗಾರ್ಡ್ ತರಬೇತಿ ಸೆಂಟರ್, ಎಂಆರ್ ಪಿಲ್ ಅಭಿವೃದ್ಧಿ, ಐದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಹತ್ತಾರು ಯೋಜನೆಗಳನ್ನು ಅನುಷ್ಠಾನಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ಎಸ್‍ಡಿಎಂಸಿಗೆ ಸಂಸದರ ಅಭಿನಂದನೆ
ಸರಿಸುಮಾರು ಹದಿನೈದು ವರ್ಷಗಳ ನಂತರ ಮುಕ್ಕೂರು ಶಾಲೆಯಲ್ಲಿ ವಾರ್ಷಿಕೋತ್ಸವ ನಡೆಯುತ್ತಿದೆ. ಅಪೂರ್ವ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಿದ ಎಸ್‍ಡಿಎಂಸಿ ಅಧ್ಯಕ್ಷ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು ಮುಕ್ಕೂರು ಶಾಲೆಯ ಎಲ್ಲ ಬೇಡಿಕೆಗಳನ್ನು ಮುಂದಿನ ಒಂದು ವರ್ಷದೊಳಗೆ ಈಡೇರಿಸುತ್ತೇನೆ. ಇಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗಿ ಶತಮಾನೋತ್ಸವ ದಿನಾಚರಣೆ ಅರ್ಥಪೂರ್ಣವಾಗಿ ಆಗಲಿ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ವಾರ್ಷಿಕೋತ್ಸವ ಅನ್ನುವುದು ಸಂಭ್ರಮದ ದಿನ. ಮುಕ್ಕೂರಿನಲ್ಲಿ ಸೇರಿದ ಜನ ಸಂಖ್ಯೆಯೇ ಇಲ್ಲಿನ ಸಂಭ್ರಮದ ಆಸಕ್ತಿಯನ್ನು ಹೇಳುತ್ತದೆ ಎಂದ ಅವರು ತಳಮಟ್ಟದ, ಪ್ರಾಥಮಿಕ ಹಂತದ ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ಹಾಗಾಗಿ ಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಬೇಕು ಎಂದರು.

ಸಾರ್ವಜನಿಕ ಅಭಿನಂದನೆ ಸ್ವೀಕರಿಸಿದ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಕ್ಕೂರಿನ ವಾರ್ಷಿಕೋತ್ಸವ ಅಭೂತಪೂರ್ವ ರೀತಿಯಲ್ಲಿ ಸಂಪನ್ನಗೊಂಡಿದೆ. ಇದಕ್ಕೆ ಈ ಊರಿನ ದಾನಿಗಳು, ಶಿಕ್ಷಣ ಅಭಿಮಾನಿಗಳು ಕಾರಣ. ಸಂಸದರ ಜತೆಗೆ ನನ್ನನ್ನು ಗೌರವಿಸಿದ ಈ ಊರಿನ ಜನರ ಅಭಿಮಾನಕ್ಕೆ ಚಿರಋಣಿ ಎಂದರು.

ಬೆಳಗ್ಗೆ ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ ಕಂಡಿಪ್ಪಾಡಿ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಶಹಿನಾಜ್, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪುತ್ತೂರು ಕಾನಾವು ಕ್ಲಿನಿಕ್‍ನ ವೈದ್ಯ ಡಾ|ನರಸಿಂಹ ಶರ್ಮ ಕಾನಾವು ಶುಭ ಹಾರೈಸಿದರು. ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ನ್ಯಾಯವಾದಿ ಜಯಪ್ರಕಾಶ್ ರೈ ಕನ್ನೆಜಾಲು ಉಪಸ್ಥಿತರಿದ್ದರು. ಶಿಕ್ಷಕಿ ಲಲಿತಾ ಕುಮಾರಿ ವರದಿ ವಾಚಿಸಿದರು. ಅತಿಥಿ ಶಿಕ್ಷಕಿ ಸರಿತಾ ದತ್ತಿನಿಧಿ ಪಟ್ಟಿ ವಾಚಿಸಿದರು. ಮುಕ್ಕೂರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಭಾರ ಮುಖ್ಯಗುರು ಅರವಿಂದ ಕಜೆ ಸ್ವಾಗತಿಸಿದರು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ವಂದಿಸಿದರು.

ಸಮ್ಮಾನ ಸಮಾರಂಭ
ಈ ಸಂದರ್ಭ ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅವರನ್ನು ಸಮ್ಮಾನಿಸಲಾಯಿತು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಸಮ್ಮಾನಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಅವರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವಕ್ಕೆ ಪ್ರಾಯೋಜಕತ್ವ ನೀಡಿದ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಾಂಸ್ಕತಿಕ ಕಾರ್ಯಕ್ರಮ
ಸಾಂಸ್ಕೃತಿಕ ವೇದಿಕೆಯಲ್ಲಿ ಅಂಗನವಾಡಿ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ, ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಶಾಲಾ ಹಳೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ, ರಾತ್ರಿ ಮಂಜೇಶ್ವರ ಯಶಸ್ವಿ ಕಲಾವಿದರು ತಂಡದಿಂದ ಅಬ್ಬರ ತುಳುನಾಟಕ ಪ್ರದರ್ಶನಗೊಂಡಿತ್ತು.

ಗಮನ ಸೆಳೆದ ಸೆಲ್ಫಿ ಕಾರ್ನರ್..!
ವಿದ್ಯುತ್ ದೀಪ ಅಲಂಕಾರದ ಮೆರಗು
ಮುಕ್ಕೂರು ಶಾಲೆಯ ಆವರಣದಲ್ಲಿ ಐ ಲವ್ ಮುಕ್ಕೂರು ಶಾಲೆ ಅನ್ನುವ ಶೀರ್ಷಿಕೆಯಡಿ ಸಿದ್ಧಪಡಿಸಲಾಗಿದ್ದ ಸೆಲ್ಫಿ ಕಾರ್ನರ್ ಗಮನ ಸೆಳೆಯಿತು. ನೂರಾರು ಮಂದಿ ಸೆಲ್ಫಿ ಕ್ಲಿಕಿಸಿಕೊಂಡರು. ಇಡೀ ವಿದ್ಯಾಸಂಸ್ಥೆಯನ್ನು ವಿದ್ಯುತ್ ದೀಪ, ಬಣ್ಣದ ತೋರಣಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ವೇಳೆ ಸುಮಾರು 850 ಕ್ಕೂ ಅಧಿಕ ಮಂದಿ ಭೋಜನ ಸ್ವೀಕರಿಸಿದರು.