ಎಡಮಂಗಲ ಸಹಕಾರಿ ಸಂಘದ ಚುನಾವಣೆ : ಸಹಕಾರ ಭಾರತಿಗೆ ಕ್ಲೀನ್‌ಸ್ವೀಪ್

0


ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳನ್ನು ಗೆದ್ದು, ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿದಿದೆ. ಆಡಳಿತ ಮಂಡಳಿಯ 12 ಸ್ಥಾನಗಳಲ್ಲಿ 4 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 8 ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆದು ಸಂಜೆ ಮತ ಎಣಿಕೆ ನಡೆಯಿತು.

ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ ಸಹಕಾರ ಭಾರತಿಯ ಅಭ್ಯರ್ಥಿಗಳಾದ ಗಿರೀಶ್ ನಡುಬೈಲು 379, ರಾಮಕೃಷ್ಣ ರೈ ಮಾಲೆಂಗಿರಿ 362, ಕಮಲಾಕ್ಷ 341, ಅವಿನಾಶ್ ಡಿ. 340, ತ್ಯಾಗರಾಜ ಎಚ್.ಎಸ್. 339ಮತಗಳನ್ನು ಪಡೆದು ಜಯಶಾಲಿಯಾದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪದ್ಮನಾಭ ಪುಳಿಕುಕ್ಕು 209, ಜಯರಾಮ ಕೆ. 147 ಮತಗಳನ್ನು ಪಡೆದು ಪರಾಭವಗೊಂಡರು.


ಹಿಂದುಳಿದ ವರ್ಗ ಎ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ ಸಹಕಾರ ಭಾರತಿಯ ರಾಘವ ಪೂಜಾರಿ 330 ಮತಗಳನ್ನು ಪಡೆದು ವಿಜೇತರಾದರೆ, ಜನಾರ್ದನ ಪೂಜಾರಿ 131 ಮತ ಪಡೆದು ಪರಾಭವಗೊಂಡರು. ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ ಸಹಕಾರ ಭಾರತಿಯ ಶುಭದಾ ಎಸ್.ರೈ 369 ಹಾಗೂ ಸುಮಾ ನೂಚಿಲ 330 ಮತಗಳನ್ನು ಪಡೆದು ಜಯಗಳಿಸಿದರೆ, ಅರುಣಾ ಪಿ. 156 ಮತಗಳನ್ನು ಪಡೆದು ಪರಾಭವಗೊಂಡರು.

ಇದರೊಂದಿಗೆ ಸಹಕಾರ ಭಾರತಿಯ ಎಲ್ಲಾ ಅಭ್ಯರ್ಥಿಗಳು ವಿಜಯ ಸಾಧಿಸಿ ಮತ್ತೊಮ್ಮೆ ಅಧಿಕಾರ ಹಿಡಿದದೆ. ಚುನಾವಣಾ ಅಧಿಕಾರಿಯಾಗಿ ಸಹಕಾರ ಸಂಘಗಳ ಹಿರಿಯ ಅಧಿಕಾರಿ ಎಂ. ಶಿವಲಿಂಗಯ್ಯ ಕರ್ತವ್ಯ ನಿರ್ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಡಿ. ಹಾಗೂ ಸಿಬ್ಬಂದಿಗಳು ಸಹಕರಿಸಿದರು.