110 ಕೆ.ವಿ. ಸಬ್ ಸ್ಟೇಶನ್ ಕಾಮಗಾರಿ ಆರಂಭ : ವಸತಿಗೃಹ ಕಟ್ಟಡ ನೆಲಸಮ-ಮೆಸ್ಕಾಂ ಕಚೇರಿ ಶಿಫ್ಟ್

0

ಸುಳ್ಯ ತಾಲೂಕಿನ ಜನರ ಬಹು ವರ್ಷಗಳ ಬೇಡಿಕೆಯಾಗಿರುವ ೧೧೦ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ಆರಂಭವಾಗಿದೆ. ಸುಳ್ಯದ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿ ಹಾಗೂ ಸಿಡಿಪಿಒ ಕಚೇರಿಯ ಪಕ್ಕದಲ್ಲಿರುವ ಮೆಸ್ಕಾಂ ಕಚೇರಿ ಆವರಣದಲ್ಲಿ ನೆಲ ಸಮತಟ್ಟು ಕಾಮಗಾರಿ ನಡೆಯುತ್ತಿದ್ದು, ಅಲ್ಲಿದ್ದ ಮೆಸ್ಕಾಂ ಅಧಿಕಾರಿಗಳ ವಸತಿಗೃಹಗಳನ್ನು ತೆರವುಗೊಳಿಸಿ ಕೆಡವಲಾಗಿದೆ. ಮೆಸ್ಕಾಂ ಸೆಕ್ಷನ್ ಆಫೀಸ್ ಮತ್ತು ಡಿವಿಜನ್ ಕಚೇರಿಗಳನ್ನು ಸ್ಥಳಾಂತರಿಸಲಾಗುತ್ತಿದೆ.
೧೦೦ ಕೆ.ವಿ. ವಿದ್ಯುತ್ ಲೈನಿಗೆ ಅಲ್ಲಲ್ಲಿ ಇದ್ದ ಆಕ್ಷೇಪಗಳು ಇದ್ದ ಕಾರಣ ಕಾಮಗಾರಿ ಮಂಜೂರಾತಿಗೆ ವಿಳಂಬವಾಗಿತ್ತು. ಆ ಪ್ರಕ್ರಿಯೆಗಳನ್ನು ಮುಗಿಸಿ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಂಡ ಬಳಿಕ ೨೦೨೩ ಜನವರಿ ೧೦ ರಂದು ಸಚಿವ ಅಂಗಾರರ ನೇತೃತ್ವದಲ್ಲಿ ಇಂಧನ ಸಚಿವ ವಿ.ಸುನಿಲ್‌ಕುಮಾರ್ ಸುಳ್ಯಕ್ಕೆ ಬಂದು ೧೧೦ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಿಲಾನ್ಯಾಸ ನಡೆಸಿದ್ದರು. ವಿದ್ಯುತ್ ವಿತರಣಾ ಕೇಂದ್ರದ ಮಂಜೂರಾತಿ ಪ್ರಕ್ರಿಯೆ ಸಮರ್ಪಕವಾಗಿ ಪೂರ್ಣಗೊಳ್ಳುವ ಮೊದಲೇ ಚುನಾವಣಾ ಸಂದರ್ಭ ಆತುರಾತುರವಾಗಿ ೧೧೦ ಕೆ.ವಿ. ಗೆ ಶಿಲಾನ್ಯಾಸ ನಡೆಸಲಾಗಿದೆ. ಈಗಷ್ಟೇ ಪ್ರಕ್ರಿಯೆ ಪೂರ್ಣಗೊಂಡು ೧೧೦ ಕೆ.ವಿ. ಮಂಜೂರಾಗಿದೆ’ ಎಂದು ಕಾಂಗ್ರೆಸ್ ನಾಯಕರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದರು. ಈ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಗೆ ವೇಗ ಬಂದಿದ್ದು ಸಮತಟ್ಟು ಗೊಳಿಸಲಾಗುತ್ತಿದೆ.
ಸುಮಾರು ೫೦ ಕೋಟಿ ರೂ. ವೆಚ್ಚದ ಈ ಕಾಮಗಾರಿ ೨ ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಸುಳ್ಯದಲ್ಲಿ ಮೆಸ್ಕಾಂ ಕಚೇರಿ ಇರುವ ಪ್ರದೇಶ ಕೆ.ಪಿ.ಟಿ.ಸಿ.ಎಲ್. ಗೆ ಸೇರಿದ್ದು, ಒಟ್ಟು ಮೂರು ಎಕರೆಗೂ ಹೆಚ್ಚು ವಿಸ್ತಾರವಿದೆ. ಅದರೊಳಗಿದ್ದ ಮೂರು ವಸತಿಗೃಹಗಳನ್ನು ಈಗಾಗಲೇ ಕೆಡವಲಾಗಿದೆ. ಸೆಕ್ಷನ್ ಕಚೇರಿಯನ್ನು ಕೂಡಾ ತೆರವುಗೊಳಿಸಲಾಗುವುದೆಂದೂ, ಡಿವಿಜನ್ ಕಚೇರಿಯನ್ನು ಮಾತ್ರ ಕೆಡವದೆ ಉಳಿಸಿಕೊಳ್ಳಲಾಗುವುದೆಂದೂ ತಿಳಿದುಬಂದಿದೆ. ಆದರೆ ೧೧೦ ಕೆ.ವಿ. ಸಬ್ ಸ್ಟೇಷನ್ ಆದ ಬಳಿಕ ಪೂರ್ತಿ ಜಾಗಕ್ಕೆ ಆವರಣ ಗೋಡೆ ನಿರ್ಮಾಣಗೊಂಡು ಸಾರ್ವಜನಿಕರಿಗೆ ಪ್ರವೇಶ ಇಲ್ಲದಂತಾಗುವುದು. ಅದಕ್ಕಾಗಿ ಸೆಕ್ಷನ್ ಕಚೇರಿ

ಮತ್ತು ಡಿವಿಜನ್ ಕಚೇರಿಗಳನ್ನು ಸುಳ್ಯದ ಕೇರ್ಪಳಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಕೇರ್ಪಳದಲ್ಲಿ ಬಂಟರ ಭವನದಿಂದ ಸ್ವಲ್ಪ ಮುಂದಕ್ಕೆ ಬಲಬದಿಗೆ ಇರುವ ಮೆಸ್ಕಾಂ ವಸತಿಗೃಹಗಳಲ್ಲಿ ಎರಡನ್ನು ಸೆಕ್ಷನ್ ಕಚೇರಿ ಹಾಗೂ ಡಿವಿಜನ್ ಕಚೇರಿಯಾಗಿ ಬಳಸಲು ನಿರ್ಧರಿಸಿದ್ದು, ಮುಂದಕ್ಕೆ ಅಲ್ಲಿಯೇ ಹೊಸ ಡಿವಿಜನ್ ಕಚೇರಿ ನಿರ್ಮಿಸಲು ಕೂಡಾ ಚಿಂತಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

೧೧೦ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಮಂಜೂರಾಗಿದ್ದರೂ ಡ್ರಾಯಿಂಗ್ ಅಪ್ರೂವಲ್ ಮೊದಲಾದ ಕಡತಗಳ ಕೆಲಸ ಮುಗಿದು ಇದೀಗ ಕೆಲಸ ಆರಂಭವಾಗಿದೆ. ಒಂದು ವರ್ಷದಲ್ಲಿ ಕೆಲಸ ಮುಗಿಸಬೇಕೆಂಬ ನಿಯಮ ಇದ್ದರೂ ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಇನ್ನು ಲೈನ್‌ನಲ್ಲಿ ಆಕ್ಷೇಪಗಳು ಬಂದರೆ ಅಥವಾ ಬಾರದಂತೆ ಸಾರ್ವಜನಿಕರು ಸಹಕಾರ ನೀಡಿ ಕೆಲಸ ಪೂರ್ಣಗೊಳ್ಳುವಂತೆ ಮಾಡಬೇಕು.

  • ರವಿಕಾಂತ ಕಾಮತ್ ಸುಪರಿಂಟೆಂಡೆಂಟ್ ಇಂಜಿನಿಯರ್ ಕೆಪಿಟಿಸಿಎಲ್

ಮೆಸ್ಕಾಂ ಕಚೇರಿಗಳು ಈಗ ಇರುವ ಸ್ತಳ ಕೆ.ಪಿ.ಟಿ.ಸಿ.ಎಲ್. ನವರದ್ದು. ಅಲ್ಲಿ ಪೂರ್ಣ ಆವರಣಗೋಡೆಗಳು ಬರುವುದರಿಂದ ಮೆಸ್ಕಾಂ ಕಚೇರಿಯನ್ನು ಕೇರ್ಪಳಕ್ಕೆ ಮೆಸ್ಕಾಂ ಜಾಗಕ್ಕೆ ಸ್ಥಳಾಂತರಿಸಿzವೆ. ನಮ್ಮ ಇ.ಇ. ಬಂದು ನೋಡಿ ಹೋಗಿದ್ದಾರೆ. ಮುಂದಕ್ಕೆ ಡಿವಿಜನ್ ಕಚೇರಿಯೂ ಅಲ್ಲೇ ನಿರ್ಮಾಣವಾಗಲಿದೆ.

  • ಹರೀಶ್ ನಾಯ್ಕ್ ಎ.ಇ.ಇ. ಮೆಸ್ಕಾಂ ಸುಳ್ಯ