ಸುಳ್ಯದಲ್ಲಿ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿ ಆರಂಭಗೊಂಡಿರುವ ಹಿನ್ನಲೆಯಲ್ಲಿ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಚರ್ಚಿಸಲು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಕೆಪಿಟಿಸಿಎಲ್ ಇಂಜಿನಿಯರ್‌ಗಳ ಜೊತೆ ಸಭೆ ಸುಳ್ಯ ತಾಲೂಕು ಪಂಚಾಯತ್‌ನ ಶಾಸಕರ ಕಚೇರಿಯಲ್ಲಿ ನಡೆಯಿತು. ಕೆಪಿಟಿಸಿಎಲ್ ಇಂಜಿನಿಯರ್‌ಗಳು ಕಾಮಗಾರಿಯ ವಿವರಗಳ ಬಗ್ಗೆ ಶಾಸಕರಿಗೆ ವಿವರಿಸಿದರು.
೧೧೦ ಕೆ.ವಿ. ಲೈನ್ ನಿರ್ಮಾಣ ಸಂದರ್ಭದಲ್ಲಿ ಸಾರ್ವಜನಿಕರಿಂದ ಉಂಟಾಗಬಹುದಾದ ದೂರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು. ಆದನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ತಹಶೀಲ್ದಾರ್ ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲು ನಿರ್ಧರಿಸಲಾಯಿತು. ಖಾಸಗಿ ಜಾಗದಲ್ಲಿ ಲೈನ್ ಹಾದು ಹೋಗುವ ಸಂದರ್ಭದಲ್ಲಿ ಎದುರಾಗುವ ದೂರುಗಳ ಪರಿಹಾರದ ಬಗ್ಗೆ, ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಯಿತು. ಪರಿಹಾರ ದರ ನಿಶ್ಚಯ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಬೇಕು. ಕಾಮಗಾರಿಯ ನಿರ್ಮಾಣ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಅದಕ್ಕೆ ನಮ್ಮ ಕಡೆಯಿಂದ ಏನು ಸಹಕಾರ ಬೇಕೊ ಅದನ್ನು ನೀಡಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಕಾಮತ್, ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರ ಕೆ., ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಸಿವಿಲ್) ಅವಿನಾಶ್ ಕೆ., ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿವೇಕಾನಂದ ಶೆಣೈ, ಗುತ್ತಿಗೆ ವಹಿಸಿಕೊಂಡಿರುವ ಹೈದರಾಬಾದ್‌ನ ಸಿಎಂಆರ್‌ಎಂ ಇನ್‌ಪ್ರಾ ಇಂಜಿನಿಯರಿಂಗ್ ಪ್ರೈ.ಲಿ. ಕಂಪೆನಿಯ ಚಂದ್ರಶೇಖರ ರೆಡ್ಡಿ ಸಭೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ಸಂತೋಷ್ ಕುತ್ತಮೊಟ್ಟೆ, ಮಹೇಶ್ ಕುಮಾರ್ ಮೇನಾಲ, ಶ್ರೀನಾಥ್ ಬಾಳಿಲ, ಸುನಿಲ್ ಕೇರ್ಪಳ ಸುಪ್ರಿತ್ ಮೋಂಟಡ್ಕ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.