ಪ್ರತಿಮೆಗೆ ಮಾಲಾರ್ಪಣೆ ಮಾಡಿದರೆ ಮಾತ್ರ ಕೆವಿಜಿಯವರ ಆತ್ಮಕ್ಕೆ ಶಾಂತಿ ಸಿಗದು; ಅವರ ಆಶಯ ಈಡೇರಿದರೆ ಮಾತ್ರ ಶಾಂತಿ
ಪತ್ರಿಕಾಗೋಷ್ಠಿಯಲ್ಲಿ ಕೆವಿಜಿ ವಿದ್ಯಾಸಂಸ್ಥೆಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳ ಹೇಳಿಕೆ
ಡಾ. ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟುಹಬ್ಬದಂದು ನಡೆದ ಸ್ಥಾಪಕರ ದಿನಾಚರಣೆಯಲ್ಲಿ ಅಕಾಡೆಮಿ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದರು ಭಾಷಣ ಮಾಡುತ್ತಾ,” ಕೆಲವರು ಉತ್ತಮವಾಗಿ ನಡೆಯುತ್ತಿರುವ ಅಕಾಡೆಮಿಯನ್ನು ನಾಶ ಮಾಡಲು ಹೊರಟಿದ್ದಾರೆ. ಅಕಾಡೆಮಿಯನ್ನು ವಿಭಜಿಸಲು ಆಗುವುದಿಲ್ಲ ಎಂಬ ಕಾನೂನನ್ನು ತಿಳಿಯದವರು ಈ ರೀತಿಯಾಗಿ ಮಾತನಾಡುತ್ತಿದ್ದಾರೆ ” ಎಂಬ ಹೇಳಿಕೆ ನೀಡಿರುವುದು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತದೆ. ನಾವೆಂದೂ ಅಕಾಡೆಮಿಯನ್ನು ನಾಶ ಮಾಡಲು ಹೊರಟಿಲ್ಲ. ಅದನ್ನು ಮಾಡುತ್ತಿರುವವರು ಅವರೇ. ಸಹೋದರರಿಬ್ಬರಲ್ಲಿ ಹೊಂದಾಣಿಕೆ ಇಲ್ಲದೆ ಅಕಾಡೆಮಿಯ ಐದಾರು ಪ್ರಕರಣಗಳು ನ್ಯಾಯಾಲಯದಲ್ಲಿ ದಾವೆಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಕೆವಿಜಿ ವಿದ್ಯಾಸಂಸ್ಥೆಗಳ ಹಿತರಕ್ಷಣಾ ಸಮಿತಿ ಹೇಳಿದೆ.
ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿಯವರು, ಡಾ. ಕೆ.ವಿ. ಚಿದಾನಂದರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಅಕಾಡೆಮಿಯನ್ನು ವಿಭಜನೆ ಮಾಡಲು ಬರುವುದಿಲ್ಲ ಎಂದು ಹಲವಾರು ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ನಿರ್ದೇಶಕರುಗಳಾಗಿ, ಅಧ್ಯಕ್ಷರುಗಳಾಗಿ ದುಡಿಯುತ್ತಿರುವ ನಮಗೆ ಸ್ಪಷ್ಟ ಅರಿವಿದೆ. ಆದರೆ ಅಕಾಡೆಮಿಯನ್ನು ಆಡಳಿತದ ಹಿತದೃಷ್ಟಿಯಿಂದ ಕೆವಿಜಿಯವರ ಜೀವಿತಾವಧಿಯಲ್ಲಿಯೇ ನಿಮ್ಮ ಆಡಳಿತ ಮಂಡಳಿಯಲ್ಲಿ ಎ ಮತ್ತು ಬಿ ವಿಭಾಗಗಳಾಗಿ ವಿಭಜಿಸಿದ್ದು ಮತ್ತು ಅದಕ್ಕೆ ತಾವುಗಳೆಲ್ಲಾ ಸಹಿ ಮಾಡಿರುವುದು ನಿಮಗೆ ತಿಳಿದಿದೆಯಷ್ಟೇ. ಆ ನಿರ್ಣಯದ ಆಶಯದಂತೆ ನಡೆದುಕೊಳ್ಳಿ ಎಂಬುದೇ ನಮ್ಮ ಮನವಿಯಾಗಿತ್ತು ಎಂದು ಭರತ್ ಮುಂಡೋಡಿ ಹೇಳಿದರು.
ಸ್ಥಾಪಕರ ದಿನಾಚರಣೆಯಂದು ಅಕಾಡೆಮಿಯವರೇ ಕೆವಿಜಿಯವರ ಪ್ರತಿಮೆಗೆ ಮಾಲೆ ಹಾಕಿ ಗೌರವ ಸೂಚಿಸುತ್ತಿರುವುದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿತ್ತೇ ಹೊರತು ಸಾರ್ವಜನಿಕರಾದ ನಾವುಗಳು ಈ ಕಾರ್ಯಕ್ರಮದಲ್ಲಿ ಮೊದಲಿನಿಂದಲೂ ಭಾಗವಹಿಸುತ್ತಿರಲಿಲ್ಲ. ಆದರೆ ಕುರುಂಜಿಯವರ ಮೇಲಿನ ಅಪಾರವಾದ ಗೌರವದಿಂದ ಕೆವಿಜಿಯವರ ಹುಟ್ಟುಹಬ್ಬವನ್ನು ಸುಳ್ಯ ಹಬ್ಬವಾಗಿ ಪರಿವರ್ತಿಸಿ ಆಚರಿಸುತ್ತಿರುವುದು ಸಾರ್ವಜನಿಕರೇ ಹೊರತು ಅಕಾಡೆಮಿಯಲ್ಲಿ ಅಧಿಕಾರ ಹೊಂದಿರುವ ನೀವುಗಳಲ್ಲ ಎನ್ನುವುದು ಸಾರ್ವತ್ರಿಕವಾಗಿ ಎಲ್ಲರಿಗೂ ತಿಳಿದಿದೆ. ಕೆವಿಜಿಯವರ ಪ್ರತಿಮೆಯನ್ನು ಕೂಡಾ ಅವರ ವಿದ್ಯಾಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರರು ತಮ್ಮ ವೇತನದಿಂದ ನಿರ್ಮಿಸಿದ್ದಾಗಿದೆ. ಇದರಲ್ಲೂ ಕೂಡಾ ಅಕಾಡೆಮಿಯ ಕೊಡುಗೆ ಏನೂ ಇರುವುದಿಲ್ಲ ಎನ್ನುವುದು ಸಾರ್ವಜನಿಕರಿಗೆ ತಿಳಿದಿದೆ. ತಾವು ಗೌರವಯುತ ಸ್ಥಾನದಲ್ಲಿದ್ದು, ಭಾಷಣಗಳ ಮೂಲಕ ಸಾರ್ವಜನಿಕರಿಗೆ ತಪ್ಪು ಸಂದೇಶಗಳನ್ನು ನೀಡುತ್ತಿರುವುದು ಖಂಡನೀಯ. ಈ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಭರತ್ ಮುಂಡೋಡಿ ಹೇಳಿದರು.
ಕೇವಲ ಸ್ಥಾಪಕ ದಿನಾಚರಣೆಯಂದು ಕೆವಿಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ದೊರೆಯಲಾರದು. ಅದರ ಬದಲು ಅವರ ಆಶಯದಂತೆ ವಿದ್ಯಾಸಂಸ್ಥೆಗಳನ್ನು ಸಹೋದರರಿಬ್ಬರು ಸೌಹಾರ್ದತೆಯಿಂದ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ನಡೆಸಿಕೊಂಡು ಹೋದಾಗಲೇ ಅವರ ಆತ್ಮಕ್ಕೆ ಶಾಂತಿ ಮತ್ತು ಸಾರ್ವಜನಿಕರಿಗೆ ನೆಮ್ಮದಿ ಉಂಟಾಗುತ್ತದೆ. ನಾವು ಈ ಹಿಂದೆ ಕೆವಿಜಿ ವಿದ್ಯಾಸಂಸ್ಥೆಗಳ ಹಿತರಕ್ಷಣಾ ಸಮಿತಿಯಿಂದ ತಮಗೆ ಪತ್ರ ಬರೆದು ಐದು ಪ್ರಶ್ನೆಗಳನ್ನು ಲಿಖಿತವಾಗಿ ಕೇಳಿದ್ದೆವು. ಅಲ್ಲದೆ ಪತ್ರಿಕಾ ಪ್ರಕಟಣೆಯ ಮೂಲಕ ಬಹಿರಂಗವಾಗಿಯೂ ಕೇಳಿದ್ದೆವು. ಈ ಪ್ರಶ್ನೆಗಳಿಗೆ ಅಕಾಡೆಮಿ ಅಧ್ಯಕ್ಷರಾಗಿರುವ ತಾವು ತಮ್ಮ ಅಧಿಕೃತ ಪತ್ರದ ಮೂಲಕ ಉತ್ತರಿಸಬೇಕೆ ಹೊರತು ಬದಲಾಗಿ ನಮ್ಮ ಕೆಲವು ಸದಸ್ಯರುಗಳಿಗೆ ಅನಾಮಧೇಯ ಪತ್ರಗಳನ್ನು ಬರೆಯಿಸುವ ಮೂಲಕ ನಮ್ಮ ಪ್ರಶ್ನೆಗಳಿಂದ ಪಲಾಯನ ಮಾಡಿದ್ದೀರಿ. ತಮ್ಮ ಲೆಟರ್‌ಹೆಡ್‌ನಲ್ಲಿ ಅಧಿಕೃತ ಸಹಿಯೊಂದಿಗೆ ಉತ್ತರಿಸಬೇಕಾಗಿ ವಿನಂತಿಸುತ್ತೇನೆ. ತಾವು ಬರೆಯಿಸುವ ಅನಾಮಧೇಯ ಪತ್ರಗಳಿಗೆ ನಾವು ಕಿಂಚಿತ್ತೂ ಮಾನ್ಯತೆ ನೀಡುವುದಿಲ್ಲ ಎಂದು ಭರತ್ ಮುಂಡೋಡಿ ಹೇಳಿದರು.
ಇನ್ನೂ ಕಾಲ ಮಿಂಚಿಲ್ಲ, ನ್ಯಾಯಾಲಯದಲ್ಲಿ ಹೋರಾಡುವುದನ್ನು ಬಿಟ್ಟು, ವ್ಯಾಜ್ಯಗಳನ್ನು ಹಿಂಪಡೆದು ಸೌಹಾರ್ದತೆಯಿಂದ ಕೆವಿಜಿಯವರ ಹಾಗೂ ಸಾರ್ವಜನಿಕರ ಆಶಯದಂತೆ ಯಾವುದೇ ಗೊಂದಲಕ್ಕೆ ಎಡೆಮಾಡದೆ ವಿದ್ಯಾಸಂಸ್ಥೆಗಳನ್ನು ನಡೆಸಿಕೊಂಡು ಹೋಗಬೇಕೆನ್ನುವುದೇ ನಮ್ಮ ಮನವಿ ಎಂದವರು ಹೇಳಿದರು.
ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕೆಂಬ ನಮ್ಮ ಮನವಿಯನ್ನು ಪುರಸ್ಕರಿಸಿ ಅನೇಕ ನಾಯಕರು, ಮಠಾಧೀಶರು ಅವರೊಂದಿಗೆ ಮಾತನಾಡಿದ್ದರೂ ಅವರು ಯಾರದೇ ಮಾತುಗಳನ್ನು ಕೇಳುತ್ತಿಲ್ಲ. ಇನ್ನೂ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಂಸ್ಥೆಗೆ, ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಆಗುವ ತೊಂದರೆಗಳನ್ನು ಮನಗಂಡು ಎಲ್ಲಾ ಪೋಷಕರಿಗೂ ಪರಿಸ್ಥಿತಿ ಅರ್ಥ ಮಾಡಿಸುವ ಅನಿವಾರ್ಯತೆ ಬಂದೀತು. ನಾವೆಲ್ಲಾ ಅವರ ಒಡನಾಡಿಗಳೇ. ಅವರ ಸಂಸ್ಥೆಯ ಏಳಿಗೆಯ ಉದ್ದೇಶ ಹೊಂದಿದವರೇ. ಆದರೆ ಈಗ ನಮ್ಮನ್ನೇ ವಿರೋಧಿಗಳಾಗಿ ಬಿಂಬಿಸುತ್ತಿದ್ದಾರೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
ನಮ್ಮ ಸಮಿತಿಯನ್ನು ಅನಧಿಕೃತ ಎಂಬ ಹೇಳಿಕೆಯನ್ನೂ ಅವರು ನೀಡಿದ್ದಾರೆ. ಕೆವಿಜಿ ವಿದ್ಯಾಸಂಸ್ಥೆಗಳ ಹಿತರಕ್ಷಣಾ ಸಮಿತಿ ಸಹಕಾರಿ ಕಾಯ್ದೆಗಳ ಪ್ರಕಾರ ನೋಂದಾಯಿತವಾದ ಒಂದು ಸಮಿತಿ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.
ಅಕಾಡೆಮಿಯಲ್ಲಿ ಯಾವುದೇ ಗೊಂದಲವಿಲ್ಲ ಎಂಬ ಹೇಳಿಕೆಯನ್ನು ಕೆಲವು ಸಮಯದ ಹಿಂದೆ ಅವರು ನೀಡಿದ್ದರು. ಆದರೆ ಇತ್ತೀಚೆಗಷ್ಟೇ ಅಲ್ಲಿನ ವಿದ್ಯಾರ್ಥಿಗಳೂ, ಸಿಬ್ಬಂದಿಗಳು ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಇದು ಗೊಂದಲವಲ್ಲವೇ ಎಂದವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆವಿಜಿ ವಿದ್ಯಾಸಂಸ್ಥೆಗಳ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಎನ್.ಎ. ರಾಮಚಂದ್ರ, ಕಾರ್ಯಾಧ್ಯಕ್ಷ ಜಾಕೆ ಮಾಧವ ಗೌಡ, ಉಪಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಕೋಶಾಧಿಕಾರಿ ಎಸ್. ಸಂಶುದ್ದಿನ್, ಕಾರ್ಯದರ್ಶಿ ಸಂತೋಷ್ ಜಾಕೆ, ಸಂಚಾಲಕ ಪಿ.ಸಿ.ಜಯರಾಮ್, ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು.