ಸುಳ್ಯದ ಕಾಂಗ್ರೆಸ್ಸಿಗರದು ನೈಜ ರಾಮ ಭಕ್ತಿಯೋ ಅಲ್ಲ ಹಿಂದುತ್ವದ ಅನಿವಾರ್ಯತೆಯೋ : ಸುಳ್ಯ ಬಿಜೆಪಿ ಪ್ರಶ್ನೆ

0

ಕಾಂಗ್ರೆಸ್ಸಿನ ಹೈಕಮಾಂಡ್ ರಾಮಮಂದಿರದ ಉದ್ಘಾಟನೆಗೆ ಹೋಗುವುದಿಲ್ಲವೆಂದು ಘೋಷಿಸಿದ್ದರೂ ಸುಳ್ಯದ ಕಾಂಗ್ರೆಸ್ ನಾಯಕರು ರಾಮಮಂದಿರದ ಉದ್ಘಾಟನೆಯ ದಿವಸ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ದೇವಸ್ಥಾನಗಳಲ್ಲಿ ಸೇರಿ ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿರುವುದು ಅಭಿನಂದನೀಯ ಎಂದು ಸುಳ್ಯ ಬಿಜೆಪಿ ಪ್ರತಿಕ್ರಿಯೆಸಿದೆ.
ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು ಹಿಂದಿನಿಂದಲೂ ರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡುತ್ತ ರಾಮನ ವಿರುದ್ಧವಾಗಿ, ರಾಮಮಂದಿರದ ವಿರುದ್ಧವಾಗಿ ನಿಂತವರು. ಇದೀಗ ರಾಮ ಮಂದಿರದ ಉದ್ಘಾಟನೆಗೆ ಆಹ್ವಾನ ನೀಡಲಾಗಿದ್ದರೂ ಅದನ್ನು ತಿರಸ್ಕರಿಸುವ ಮೂಲಕ ತಾವುಗಳು ಹಿಂದೂ ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆದರೂ ಸುಳ್ಯದ ಕಾಂಗ್ರೆಸ್ ನಾಯಕರು ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆದು ರಾಮಮಂದಿರದ ಉದ್ಘಾಟನೆಯ ದಿನ ಜನವರಿ 22 ರಂದು ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ದೇವಸ್ಥಾನಗಳಲ್ಲಿ ಒಟ್ಟು ಸೇರಿ ಸಾಮೂಹಿಕ ಪೂಜೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿರುವುದು ಕಾಂಗ್ರೆಸ್ಸಿನ ಸ್ಥಳೀಯ ನಾಯಕರ ಒಳ ಮನಸ್ಸನ್ನು ಬಯಲು ಗೊಳಿಸಿದೆ. ರಾಜ್ಯದ ಮುಜರಾಯಿ ಇಲಾಖೆಯು ಜನವರಿ 22ರಂದು ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಆದೇಶ ಹೊರಡಿಸಿರುವುದನ್ನು ಅಭಿನಂದಿಸಿ ಸುಳ್ಯದ ಅನೇಕ ಕಾಂಗ್ರೆಸ್ ನಾಯಕರು ಬ್ಯಾನರ್ ಗಳನ್ನು ಅಳವಡಿಸಿ ರಾಮನ ಭಾವಚಿತ್ರವನ್ನು ಹಾಕುವ ಮೂಲಕ ತಾವುಗಳು ಕೂಡ ರಾಮಭಕ್ತರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕೇವಲ ವೋಟ್ ಬ್ಯಾಂಕ್ ರಾಜಕಾರಣಕೋಸ್ಕರ ಮುಸ್ಲಿಂ ಓಲೈಕೆಯನ್ನು ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು ಇದೀಗ ಅನಿವಾರ್ಯತೆಯ ಸಂದರ್ಭವನ್ನು ಉಪಯೋಗಿಸಿಕೊಂಡು ರಾಮ ಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಇದು ನಿಜವಾದ ರಾಮ ಭಕ್ತಿಯೋ ಅಥವಾ ರಾಮನನ್ನು ಮತ್ತು ಹಿಂದುತ್ವ ಶಕ್ತಿಯನ್ನು ಕಡೆಗಣಿಸಿದರೆ ತಮಗೆ ಉಳಿಗಾಲ ಇಲ್ಲ ಎನ್ನುವ ಭಯವೋ ತಿಳಿಯದು. ಆದರೂ ಅವರ ಈ ಹೇಳಿಕೆಗಳು ಕೇವಲ ಬಾಯಿಮಾತಿಗೆ ಸೀಮಿತಗೊಳ್ಳದೆ ಹಿಂದುತ್ವದ ಚಳುವಳಿಗೆ ಬೆಂಬಲ ನೀಡುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಬೇಕಾಗಿದೆ. ಸ್ಥಳೀಯ ಕಾರ್ಯಕರ್ತರಿಗೆ ಪೂಜೆಯಲ್ಲಿ ಭಾಗವಹಿಸುವ ಕರೆ ನೀಡುವುದು ಮಾತ್ರವಲ್ಲದೆ, ರಾಮಮಂದಿರದ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರುವ ರಾಷ್ಟ್ರೀಯ ನಾಯಕರ ನಿಲುವನ್ನು ಕೂಡ ಸುಳ್ಯದ ಕಾಂಗ್ರೆಸ್ ನಾಯಕರು ಖಂಡಿಸಲಿ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.