ಹಿಂದೂಗಳನ್ನು ಬಿಜೆಪಿ ಗುತ್ತಿಗೆಗೆ ಪಡೆದಿದೆಯೇ ? – ಪಿ.ಸಿ. ಜಯರಾಂ

0

ನಮ್ಮದು ನಿಜವಾದ ಹಿಂದುತ್ವ : ಭರತ್ ಮುಂಡೋಡಿ

ಬಿಜೆಪಿ ಟೀಕೆಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ

ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ದಿನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಬೇಕೆಂಬ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ನಿರ್ಧಾರವನ್ನು ಸ್ವಾಗತಿಸಿದ ಸುಳ್ಯ ಕಾಂಗ್ರೆಸ್ ನಾಯಕರ ನಡೆಯನ್ನು ಪ್ರಶ್ನಿಸಿದ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕರು, ಹಿಂದುಗಳನ್ನು ಬಿಜೆಪಿ ಗುತ್ತಿಗೆಗೆ ಪಡೆದಿದೆಯಾ ಎಂದು ಪ್ರಶ್ನಿಸಿದ್ದಾರೆ.

ಸುಳ್ಯದಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಠಿಯ ವೇಳೆ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಂ ರವರು , ೧೯೮೯ರಲ್ಲಿ ರಾಜೀವ್ ಗಾಂಧಿ ಪ್ರಧಾನ ಮಂತ್ರಿ ಇರುವಾಗ ರಾಮ ಮಂದಿರದ ಬೀಗ ತೆರೆಯಲ್ಪಟ್ಟಿತ್ತು. 34 ವರ್ಷದ ಬಳಿಕ ಈಗ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆಗಿರುವುದರಿಂದ ಸಂವಿಧಾನ ಬದ್ಧವಾಗಿ ಅವರ ಕಾಲದಲ್ಲಿ ಉದ್ಘಾಟನೆ ಆಗುತ್ತಿದೆ. ನಮ್ಮದು ನೈಜ ರಾಮ ಭಕ್ತಿ , ಆದರೆ ರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯದ್ದು ಕಪಟ ಹಿಂದುತ್ವ ಎಂದು ಹೇಳಿದರು.

ನಮ್ಮನ್ನು ಮುಸ್ಲಿಮ್ ಓಲೈಕೆ ಎಂದು ಟೀಕಿಸುತ್ತೀರಿ. ನೀವು ಮುಸ್ಲಿಮರೊಂದಿಗೆ ವ್ಯವಹಾರ ನಡೆಸಿದರೆ ಅದು ಓಲೈಕೆ ಅಲ್ಲವೇ ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯವದ್ದು ನೈಜ ಹಿಂದುತ್ವವಲ್ಲ . ಅವರು ದೈವ ದೇವರುಗಳನ್ನು ರಾಜಕೀಯಕೋಸ್ಕರ ಬಳಸುವವರು . ಊರಿನ ದೇವಸ್ಥಾನಗಳ ಪೂಜೆಗೇ ಸರಿ ಹೋಗುವವರಲ್ಲ ಎಂದು ಕಾಂಗ್ರೆಸ್ ನಾಯಕ ಭರತ್ ಮುಂಡೋಡಿ ಹೇಳಿದರು.

ಮಾಜಿ ಸಂಸದ ವಿನಯ ಕುಮಾರ್ ಸೊರಕೆ , ಕಾಂಗ್ರೆಸ್ ನಾಯಕರಾದ ಪಿ.ಸಿ. ಜಯರಾಂ, ಎಂ. ವೆಂಕಪ್ಪ ಗೌಡ , ಪಿ. ಎಸ್. ಗಂಗಾಧರ್, ಸರಸ್ವತಿ ಕಾಮತ್, ರಾಜೀವಿ ಆರ್‌ ರೈ, ಅಶೋಕ್ ಚೂಂತಾರು, ಸುಜಯ ಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.