ಗೌರಿ ಹೊಳೆಯ ಜಳಕದ ಗುಂಡಿಯಲ್ಲಿ ಜಲದುರ್ಗೆಯ ಅವಭೃತ : ಧ್ವಜಾವರೋಹಣ

0

ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ಅವಭೃತವು ಗೌರಿ ಹೊಳೆಯ ಜಳಕದ ಗುಂಡಿಯಲ್ಲಿ ಶನಿವಾರ ರಾತ್ರಿ ನೆರವೇರಿತು.

ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ, ಕೆಮ್ಮಿಂಜೆ ಕಾರ್ತಿಕ್ ತಂತ್ರಿ ನೇತೃತ್ವದಲ್ಲಿ ರಾತ್ರಿ ಶ್ರೀ ದೇವರ ಬಲಿ ಹೊರಟು ಅಲ್ಲಲ್ಲಿ ಕಟ್ಟೆಪೂಜೆ ಸ್ವೀಕರಿಸುತ್ತಾ ಶ್ರೀದೇವಿ ಅವಭೃತಕ್ಕೆ ತೆರಳಿತು. ಮುಂಭಾಗದಲ್ಲಿ ಕುಣಿತ ಭಜನೆ ತಂಡ, ಹಿಂಭಾಗದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಹೆಜ್ಜೆ ಹಾಕಿದರು. ಅವೃಭತದ ಬಳಿಕ ಪುನಃ ದೇವಾಲಯಕ್ಕೆ ಆಗಮಿಸಿ ಧ್ವಜಾವರೋಹಣ ನಡೆಯಿತು.

ಮಹಾಪೂಜೆ, ಪ್ರಸಾದ ವಿತರಣೆ ನಂತರ ಉಳ್ಳಾಕುಲು, ಮೈಷಂತಾಯ, ಶ್ರೀ ವ್ಯಾಘ್ರಚಾಮುಂಡಿ ದೈವದ ಭಂಡಾರ ತೆಗೆಯಲಾಯಿತು. ಸಾವಿರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪಿ. ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ, ಭಾಗ್ಯಲಕ್ಷ್ಮಿ, ಯಶೋದ ಎ,ಎಸ್., ಕಚೇರಿ ವ್ಯವಸ್ಥಾಪಕ ವಸಂತ ಆಚಾರ್ಯ ಪೆರುವಾಜೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.