ಕವನದ ಶೀರ್ಷಿಕೆ : ನಾವಿಕ

0

ಪ್ರಶಾಂತ ಸಾಗರದಂತೆ ಬಾಳು ಮಿನುಗುತಿದೆ
ಸೂರ್ಯರಶ್ಮಿಯ ಕಿರಣ ಸಮ್ಮಿಳಿತಗೊಂಡು
ರಂಗೇರಿದೆ ಸಮಯ ಅದರೊಳಗೆ ಮಿಂದು
ಪಯಣವದು ಅಲೆಗಳಿಗೆ ಎದೆಯೊಡ್ಡಿ ಇಂದು

ಗುಪ್ತಗಾಮಿನಿ ಹರಿವು ನಾವಿಕರು ನಾವೇ
ಹರಿಗೋಲು ಕೈಲಿಹುದು ದೇವರ ಲೀಲೆ
ಆಸೆ ಎನ್ನುವುದು ನಭದ ನಕ್ಷತ್ರ
ಅಪ್ಪಳಿಸದಿರಲಿ ಕಲ್ಲು ಬಂಡೆಗಳ ಮೇಲೆ

ಗಾಳಿಪಟ ಹಾರುತಿರೆ ಸೂತ್ರದಾರರು ನಾವೇ
ದಿಕ್ಕು ತೋಚದಂತೆ ಹಾರದಂತಿರಬೇಕು
ಬಾಳನೌಕೆಯದು ಪಥವ ಬದಲಿಸದಂತೆ
ಸಾರಥ್ಯವು ಅನಂತತೆಯತ್ತ ಸಾಗುತಿರಬೇಕು