ಬಳ್ಪ: ವಿಕಸಿತ ಭಾರತ ಸಂಕಲ್ಪ ಯಾತ್ರೆ

0

ಕೇಂದ್ರ ಸರಕಾರದ ಜನಪರ ಯೋಜನೆ ಜನಸಾಮಾನ್ಯರಿಗೆ ತಲುಪಿಸುವ ವಿಶೇಷ ಕಾರ್ಯಕ್ರಮ : ಭಾಗೀರಥಿ ಮುರುಳ್ಯ

ಕೇಂದ್ರ ಸರಕಾರ ಜನಪರವಾಗಿ ಅನೇಕ ಯೋಜನೆಗಳನ್ನು ತಂದಿದ್ದು, ಇದು ಹಳ್ಳಿಹಳ್ಳಿಯ ಸಾಮಾನ್ಯ ಜನರಿಗೆ ತಲುಪಬೇಕೆನ್ನುವ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಸರಕಾರದ ಯೋಜನೆಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಬ್ಯಾಂಕಿನ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯುತ್ತದೆ ಎಂದು ಶಾಸಕಿ ಕು. ಭಾಗೀರಥಿ ಮುರುಳ್ಯ ಹೇಳಿದರು. ಅವರು ಜ. 24ರಂದು ಬಳ್ಪ ಸ.ಉ.ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ಬಳ್ಪ ಗ್ರಾ.ಪಂ. ಮತ್ತು ಕೆನರಾ ಬ್ಯಾಂಕ್ ಪಂಜ ಮತ್ತು ಬಳ್ಪ ಶಾಖೆಯ ಸಹಯೋಗದೊಂದಿಗೆ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶೂನ್ಯ ಮೊತ್ತದಲ್ಲಿ ಖಾತೆ ತೆರೆಯುವಾಗ ಕೆಲವರು ಹಾಸ್ಯ ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಅದರ ಲಾಭವನ್ನು ಖಾತೆ ಹೊಂದಿದವರು ಪಡೆದಿದ್ದಾರೆ ಎಂದು ಅವರು ಹೇಳಿದರು.


ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಪಂಜ ಶಾಖೆಯ ವ್ಯವಸ್ಥಾಪಕ ರಾಘವೇಂದ್ರ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಬ್ಯಾಕಿನ ಬಳ್ಪ ಶಾಖೆಯ ವ್ಯವಸ್ಥಾಪಕ ಸಾಧಿಕ್, ಬಳ್ಪ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ಪಿ.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕರಾದ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಪುತ್ತೂರು ಇದರ ಆರ್ಥಿಕ ಸಾಕ್ಷರತಾ ಸಮಾಲೋಚಕಿ (ಎಫ್.ಎಲ್.ಸಿ.) ಶ್ರೀಮತಿ ಗೀತಾ ವಿಜಯ್ ಪ್ರಾಸ್ತಾವಿಕ ಮಾತುಗಳೊಂದಿಗೆ ವಿವಿಧ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿ ನೀಡಿದರು. ಬಳ್ಪ ಗ್ರಾ.ಪಂ. ಪಿ.ಡಿ.ಒ ನಾರಾಯಣ ಸ್ವಾಗತಿಸಿ ಬಳ್ಪ ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ವಂದಿಸಿದರು. ರಜನೀಶ್ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಕ್ಷೇತ್ರದ ಸಾಧಕ ಭತ್ತ ಬೆಳೆಗಾರ ಹರಿಯಪ್ಪ ಗೌಡ ಕಣ್ಕಲ್ , ಕಲಿಕಾ ಕ್ಷೇತ್ರದ ಸಾಧಕಿ ವಿದ್ಯಾರ್ಥಿನಿ ಕು. ಶ್ವೇತಾ, ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿ ಪ್ರದೀಪ್ ಕೊನ್ನಡ್ಕ ಮತ್ತು ಘನತ್ಯಾಜ ಘಟಕ ನಿರ್ವಾಹಕಿ ಶ್ರೀಮತಿ ಯಮುನಾ ಕಾರ್ಜರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬಳ್ಪ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಪಡೆದ ಫಲಾನುಭವಿಗಳಾದ ಬಳ್ಪ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್ ಬುಡೆಂಗಿ, ಬಳ್ಪ ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ಮತ್ತು ಬಳ್ಪ ಗ್ರಾ.ಪಂ. ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಶ್ರೀಮತಿ ಶಶಿಕಲಾ ಸೂಂತಾರು ತಾವು ಪಡೆದ ಸವಲತ್ತುಗಳಿಂದ ಆದ ಪ್ರಯೋಜನಳನ್ನು ವಿವರಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ರಥವನ್ನು ವೀಕ್ಷಿಸಿ, ವಿವರಗಳನ್ನು ಪಡೆದುಕೊಂಡರು.

ಬಳ್ಪ ಪಂ. ಕಾರ್ಯದರ್ಶಿ ರಘು ಎನ್.ಬಿ. ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.