ಚುನಾವಣೆಯ ಸಂದರ್ಭ ರೈತರು ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಪಡೆದಿರುವ ಕೋವಿಗಳನ್ನು ಪೊಲೀಸ್ ಠಾಣೆ ಅಥವಾ ಮದ್ದುಗುಂಡು ವ್ಯಾಪಾರಿಗಳಲ್ಲಿ ಡೆಪಾಸಿಟ್ ಇರಿಸಬೇಕೆಂಬ ನಿಯಮದಿಂದ ವಿನಾಯಿತಿ ನೀಡಬೇಕೆಂದು ಹಾಗೂ ಸುಳ್ಯ ಅಗ್ನಿಶಾಮಕ ಠಾಣೆಗೆ ಗುಡ್ಡಗಾಡು ಪ್ರದೇಶಗಳಲ್ಲಿ ಚಲಾಯಿಸಲು ಅನುಕೂಲವಾಗುವ ವರುಣಾ ವಾಹನ ಒದಗಿಸಬೇಕೆಂದು ಹಾಗೂ ವಾಹನ ನಿಬಿಡವಾಗಿ ಬೆಳೆಯುತ್ತಿರುವ ಸುಳ್ಯಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರು ಮಾಡಬೇಕೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿನ್ನೆ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಮನವಿ ಮಾಡಿದೆ.
ನಗರ ವ್ಯಾಪ್ತಿಯಿಂದ ನಿಗದಿತ ದೂರದ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಮತ್ತು 94ಸಿ ಅಡಿಯಲ್ಲಿ ಭೂ ಮಂಜೂರಾತಿ ಮಾಡದಂತೆ ನಿರ್ಬಂಧ ವಿಧಿಸಿ ಸರಕಾರ ಆದೇಶ ಮಾಡಿರುವುದರಿಂದ ನಗರ ಪ್ರದೇಶದ ಗ್ರಾಮಗಳಿಗೆ ತಾಗಿಕೊಂಡಿರುವ ಗ್ರಾಮಗಳ ಜನತೆ ಸಂಕಷ್ಟ ಪಡುವಂತಾಗಿದ್ದು, ಆ ನಿಯಮವನ್ನು ರದ್ದುಪಡಿಸಿ ನಿರ್ಬಂಧ ತೆರವುಗೊಳಿಸಬೇಂಕೆಂದೂ ಬ್ಲಾಕ್ ಕಾಂಗ್ರೆಸ್ ಪಿ.ಸಿ.ಜಯರಾಮ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ಸಚಿವರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಹಿಂದೆ ಭೂ ಮಂಜೂರಾತಿ ಆದವರ ಜಾಗ ಫ್ಲಾಟಿಂಗ್ ಆಗದೆ ಸಮಸ್ಯೆಯಾಗಿರುವುದರಿಂದ ಈ ಸಮಸ್ಯೆಯನ್ನು ಕೂಡಾ ನಿವಾರಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.