ಸಾರ್ವಜನಿಕರಿಂದ ಮನವಿ ಹಿನ್ನೆಲೆ ಮತ್ತೆ ಯಥಾಸ್ಥಿತಿಗೆ ಮರಳಿದ ಬಸ್ ನಿಲುಗಡೆ ಜಾಗ
ಜಾಲ್ಸೂರಿನಿಂದ ಸುಳ್ಯಕ್ಕೆ ತೆರಳುವ ಬಸ್ ತಂಗುದಾಣದ ಜಾಗ ಸಾರ್ವಜನಿಕರಿಂದ ಗ್ರಾ.ಪಂ. ಗೆ ಮನವಿ ಬಂದ ಹಿನ್ನೆಲೆಯಲ್ಲಿ ಮತ್ತೆ ಯಥಾಸ್ಥಿತಿಗೆ ಮರಳಿದ್ದು, ಜಾಲ್ಸೂರಿನ ಕಜೆಗದ್ದೆ ಕಾಂಪ್ಲೆಕ್ಸ್ ಬಳಿ ಗ್ರಾ.ಪಂ. ವತಿಯಿಂದ ಬಸ್ಸು ನಿಲುಗಡೆಯ ನಾಮಫಲಕವನ್ನು ಜ.24ರಂದು ಅಳವಡಿಸಲಾಯಿತು.
ಈ ಹಿಂದೆ ಸುಳ್ಯಕ್ಕೆ ತೆರಳುವ ಬಸ್ಸುಗಳು ಕಜೆಗದ್ದೆ ಕಾಂಪ್ಲೆಕ್ಸ್ ಬಳಿ ನಿಲ್ಲುತ್ತಿದ್ದು, ಇತ್ತೀಚಿನ ಕೆಲ ಸಮಯದಿಂದ ಜಾಲ್ಸೂರಿನ ಜುಮ್ಮಾ ಮಸೀದಿಯ ಬಳಿಯಿರುವ ಪ್ರಯಾಣಿಕರ ತಂಗುದಾಣದ ಬಳಿ ನಿಲ್ಲುತ್ತಿತ್ತು.
ಆದರೆ ಪ್ರಯಾಣಿಕರು ಮಾತ್ರ ಮೊದಲಿನ ಸ್ಥಳದಲ್ಲಿಯೇ ಬಸ್ಸಿಗಾಗಿ ಕಾಯುತ್ತಿದ್ದು, ಬಸ್ ಬಂದಾಗ ಅಲ್ಲಿಯ ತನಕ ಓಡಿ ಬಸ್ಸು ಹತ್ತುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಇದೀಗ ಸಾರ್ವಜನಿಕರು ಮೊದಲಿದ್ದ ಸ್ಥಳದಲ್ಲೇ ಬಸ್ ನಿಲ್ಲಿಸುವಂತೆ ಮಾಡಲು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರಿಂದ , ಗ್ರಾ.ಪಂ. ಕೆ.ಎಸ್.ಆರ್.ಟಿ.ಸಿ. ಇಲಾಖೆಗೆ ಕೇಳಿಕೊಂಡ ಮೇರೆಗೆ ಕೆ.ಎಸ್.ಆರ್.ಟಿ.ಸಿ. ಸೂಚನೆಯಂತೆ ಮತ್ತೆ ಮೊದಲಿದ್ದ ಜಾಗದಲ್ಲೇ ನಾಮಫಲಕ ಅಳವಡಿಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಸದಸ್ಯರುಗಳಾದ ಎನ್.ಎಂ. ಸತೀಶ ಕೆಮನಬಳ್ಳಿ, ಪಿ.ಆರ್. ಸಂದೀಪ್ ಕದಿಕಡ್ಕ, ಶಿವಪ್ರಸಾದ್ ನೀರಬಸಿರು, ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ಶ್ರೀಮತಿ ಗೀತಾ ಚಂದ್ರಹಾಸ ಅರ್ಭಡ್ಕ, ಶ್ರೀಮತಿ ಅಂಬಿಕಾ ಕುಕ್ಕಂದೂರು, ಈಶ್ವರ ನಾಯ್ಕ ಸೋಣಂಗೇರಿ, ಜಾಲ್ಸೂರು ಬಿ.ಎಂ. ಎಸ್. ಅಟೋಚಾಲಕ ಸಂಘದ ಅಧ್ಯಕ್ಷ ಗೋಪಾಲ ಅಡ್ಕಾರುಪದವು, ಕಜೆಗದ್ದೆ ಕಾಂಪ್ಲೆಕ್ಸ್ ನ ವರ್ತಕರು, ಸ್ಥಳೀಯ ಅಟೋರಿಕ್ಷಾ ಚಾಲಕರು ಸೇರಿದಂತೆ ಮತ್ತಿತರ ಗ್ರಾಮಸ್ಥರು ಉಪಸ್ಥಿತರಿದ್ದರು.