ಕನಿಷ್ಠ ವೇತನವನ್ನು ಘೋಷಿಸುವಂತೆ ಒತ್ತಾಯಿಸಿ ಸುಳ್ಯ ತಾಲೂಕು ಪಂಚಾಯತ್ ಕಚೇರಿ ಎದುರು ಅಕ್ಷರ ದಾಸೋಹ ನೌಕರ ಸಂಘದವರ ಪ್ರತಿಭಟನೆ

0

ಸುಳ್ಯ ತಾಲೂಕು ಅಕ್ಷರ ದಾಸೋಹ ನೌಕರ ಸಂಘದವರು ಜ. 23ರಂದು ಕನಿಷ್ಠ ವೇತನವನ್ನು ಘೋಷಿಸುವಂತೆ ಒತ್ತಾಯಿಸಿ ಸುಳ್ಯ ತಾಲೂಕು ಪಂಚಾಯತ್ ಎದುರು ಪ್ರತಿಭಟನೆ ಸಭೆ ನಡೆಸಿದರು.

ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಸುಳ್ಯ ತಾಲೂಕು ಅಕ್ಷರ ದಾಸೊಹ ನೌಕರ ಸಂಘದ ಗೌರವಾಧ್ಯಕ್ಷ ಕೆ.ಪಿ ರಾಬರ್ಟ್ ಡಿಸೋಜ ಮಾತನಾಡಿ, ಕೇಂದ್ರ ಸರ್ಕಾರದ ನವ ಉದಾರೀಕರಣ ನೀತಿಗಳ ಜಾರಿಯ ವೇಗದಲ್ಲಿ ತನ್ನ ನೀತಿಗಳ ಪರಿಕಲ್ಪನೆಯನ್ನು ಬದಲಾಯಿಸಿ ದೇಶದ ಅಭಿವೃದ್ಧಿಯ ಸಂಕೇತಗಳಾದ ಮಕ್ಕಳು ಮತ್ತು ಮಹಿಳೆಯರಿಗಾಗಿ ಕೊಡುವ ಸವಲತ್ತುಗಳಿಗೆ ಕಡಿತ ಮಾಡಿ 2021ರ ಬಜೆಟಿನಲ್ಲಿ 1900 ಕೋಟಿ ರೂಗಗಳನ್ನು ಕಡಿತ ಮಾಡುವ ಮುಖಾಂತರ ಕತ್ತರಿ ಹಾಕುತ್ತಿದೆ, ಇದರಿಂದ ದೇಶದ 11.80 ಕೋಟಿ ಮಕ್ಕಳು ವಂಚಿತರಾಗುತ್ತಿದ್ದಾರೆ.


ದೇಶದ ಬಂಡವಾಳಗಾರರು ಮತ್ತು ಕಾರ್ಪೋರೇಟ್ ಕಂಪೆನಿಗಳಿಗೆ 14.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. 100 ಕೋಟಿ ಒಡೆತನವಿರುವ ಶ್ರೀಮಂತರಿಗೆ ಶೇ.3 ವಿಶೇಷ ತೆರಿಗೆಯನ್ನು ಹಾಕಿದರೆ 134 ಲಕ್ಷ ಕೋಟಿ ಸರ್ಕಾರಕ್ಕೆ ಆದಾಯ ಬರುತ್ತದೆ. ಈ ಹಣದಲ್ಲಿ ಭಾರತದ 130 ಕೋಟಿ ಜನರಿಗೆ ಗುಣಮಟ್ಟದ ಆಹಾರ, ಆರೋಗ್ಯ ಮತ್ತು ಶಿಕ್ಷಣವನ್ನು ಉಚಿತವಾಗಿ ಮತ್ತು ಸಾರ್ವತ್ರಿಕವಾಗಿ ಕೊಡಬಹುದು ಮತ್ತು ಈ ಯೋಜನೆಗಳನ್ನು ಖಾಯಂ ಮಾಡಬಹುದು.
ಈ ಯೋಜನೆಗಳು ಕೆಲಸ ಮಾಡುವ 1 ಕೋಟಿ ನೌಕರರಿಗೆ ಕನಿಷ್ಠ ವೇತನ ಕೊಡಲು ಸಾಧ್ಯವಾಗುತ್ತದೆ. ಬಡವರ ಮತ್ತು ಜನ ಸಾಮಾನ್ಯರ ಮೇಲೆ ತೆರಿಗೆ ಹಾಕುವ ಸರ್ಕಾರ ಶ್ರೀಮಂತರ ಮೇಲೆ ತೆರಿಗೆ ಹಾಕಲಿ.


ಹಿಂದು ಮಹಿಳೆಯರ ಬಗ್ಗೆ ಮಾತಾನಾಡುವ ಕೇಂದ್ರ ಪ್ರಭುತ್ವ ಬಿಸಿಯೂಟ ನೌಕರರಿಗೆ 600 ರೂ, ಆಶಾ ಕಾರ್ಯಕರ್ತೆಯರಿಗೆ 2000ರೂ, ಅಂಗನವಾಡಿ ನೌಕರರಿಗೆ 4500 ರೂ ಕೊಟ್ಟು ದುಡಿಸುವುದು ಸಾಮಾಜಿಕ ನ್ಯಾಯವೇ? ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ಈ ನೌಕರರಿಗೆ ಒಂದೂ ರೂಪಾಯಿಯನ್ನು ಹೆಚ್ಚಳ ಮಾಡದೆ ಚುನಾವಣೆಗಳು, ಮಾತ್ರವಲ್ಲದೆ ಈಗ ಕ್ಷೀರ ಭಾಗ್ಯ, ಮೊಟ್ಟೆ ಕೊಡುವುದು, ಗೋಧಿ ಉತ್ಪನ್ನಗಳಿಂದ ತಯಾರು ಮಾಡುವ ಆಹಾರ, ವಿಶೇಷ ಭೋಜನ ಎಂಬ ಸುತ್ತೋಲೆಯನ್ನು ತಂದು ತಿಂಗಳಲ್ಲಿ ಎರಡು ಬಾರಿ ಸಾಮೂಹಿಕ ಊಟ ಮಾತ್ರವಲ್ಲದೇ ಮಕ್ಕಳು ಶಾಲಾ ಪ್ರವಾಸಗಳನ್ನು ಮಾಡುವಾಗ ಅಡುಗೆಯವರು ಕೂಡಾ ಭಾಗವಹಿಸಿ ಅಲ್ಲಿಯೂ ಅಡುಗೆ ಮಾಡಬೇಕು. ಚುನಾವಣೆಗಳಲ್ಲಿ, ಕೊರೋನಾ ಸಂಧರ್ಭಗಳಲ್ಲಿ, ಗ್ರಾಮ ಸಭೆಗಳು ನಡೆದಾಗ, ಗ್ರಾಮಗಳಲ್ಲಿ ಏನೇ ಕಾರ್ಯಕ್ರಮಗಳು ನಡೆದರೂ ಇವರು ಅಡುಗೆ ಮಾಡಬೇಕು. “ಗೌರವಧನ” ಎಂಬ ಪಟ್ಟಕಟ್ಟಿ ಎಲ್ಲ ಸವಲತ್ತುಗಳಿಂದ ವಂಚನೆ ಮಾಡುವುದು ಧರ್ಮವೇ? 5 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಲು ಹೊರಟಿರುವ ಭಾರತ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನ ಏಕೆ? 100 ಕ್ಕೆ 50 ರಷ್ಟು ಗರ್ಭಿಣಿ ಬಾಣಂತಿಯರ ರಕ್ತಹೀನತೆ ಏಕೆ? ಇದಾಗ್ಯೂ 5 ವರ್ಷದ ಮಕ್ಕಳು ಸಾಯುತ್ತಿರುವುದೇಕೆ? ಸರ್ಕಾರ ಈ ಕೂಡಲೇ ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡು ಜನಸಾಮಾನ್ಯರಿಗೆ ಮತ್ತು ನೌಕರರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ 23 ಜನವರಿ 2024 ರಂದು ಸಂಸದರ ಕಛೇರಿ ಚಲೋ ನಡೆಸಲಾಗುತ್ತಿದೆ ಎಂದು ಹೇಳಿದರು.

ತಾಲೂಕು ಸಂಘದ ಅಧ್ಯಕ್ಷೆ ಲೀಲಾವತಿ ಕೆ.ಅಲೆಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಲೀಲಾವತಿ ಸ್ವಾಗತಿಸಿದರು.ಕೋಶಾಧಿಕಾರಿ ಪುಷ್ಪಾ ಬಿ.ಕೆ ವಂದಿಸಿದರು.