ಸುಳ್ಯ ಸಂತ ಜೋಸೆಫ್ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ

0

ಸುಳ್ಯ ಸಂತ ಜೋಸೆಫ್ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವವನ್ನು ಜ.26 ರಂದು ಆಚರಿಸಲಾಯಿತು. ಶಾಲಾ ಸಂಚಾಲಕರಾದ ರೆ. ಫಾದರ್ ವಿಕ್ಟರ್ ಡಿಸೋಜರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.

ವೇದಿಕೆಯಲ್ಲಿದ್ದ ಗಣ್ಯರು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಫೋಟೋಗೆ ಪುಷ್ಪ ನಮನ ಸಲ್ಲಿಸಿದರು.ವೇದಿಕೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಪೋಷಕ ಸಮಿತಿಯ ಅಧ್ಯಕ್ಷರುಗಳಾದ ಜೆ.ಕೆ ರೈ ಹಾಗೂ ಗುರುಸ್ವಾಮಿ,ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ, ಶಾಲಾ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ಸಾಯಿ ನಕ್ಷತ್ರ 5ನೇ ತರಗತಿ ಇವರು ಘೋಷಣೆಗಳನ್ನು ಉಚ್ಛರಿಸಿದರು.

5ನೇ ತರಗತಿಯ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಹಾಗೂ ದೇಶಪ್ರೇಮವನ್ನು ಸಾರುವ ನೃತ್ಯ ಸೊಗಸಾಗಿ ಮೂಡಿ ಬಂತು. ತನ್ವಿ. ಪಿ ಐದನೇ ತರಗತಿ ಗಣರಾಜ್ಯೋತ್ಸವದ ಬಗ್ಗೆ ಭಾಷಣ ಮಾಡಿದರು. ಪೋಷಕ ಸಮಿತಿಯ ಅಧ್ಯಕ್ಷರುಗಳು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗೌರವಾನ್ವಿತ ಫಾದರ್ ವಿಕ್ಟರ್ ಡಿಸೋಜ ರವರು ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ತಿಳಿಸಿ ಎಲ್ಲರನ್ನು ಆಶೀರ್ವದಿಸಿದರು.

ಪ್ರೌಢಶಾಲಾ ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಸಮೂಹ ಗೀತೆ ಹಾಡಿದರು. ಐದನೇ ತರಗತಿಯ ಮರಿಯಂ ಸನ ಸ್ವಾಗತಿಸಿ, ಇಷಾತ್ ವಂದಿಸಿ, ಮನಸ್ವಿ ಪಿ. ಬಿ ಹಾಗೂ ಸಿಮಾ ಆಯಿಷಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಶ್ರೀಮತಿ ಸವಿತಾ ಹಾಗೂ ಶ್ರೀಮತಿ ಮಮತಾ ಹಾಗೂ ಎಲ್ಲ ಶಿಕ್ಷಕ ವೃಂದದವರು ಸಹಕರಿಸಿದರು.