ಸಂಪಾಜೆಯಿಂದ ಸುಳ್ಯಕ್ಕೆ ಪಾದಯಾತ್ರೆಯಲ್ಲಿ ಬಂದ ದಿವಾಕರ ಪೈ ಅವರನ್ನು ಸ್ವಾಗತಿಸಿದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರುಗಳು

0

ಗಾಂಧಿನಗರದಿಂದ ತಾಲೂಕು ಕಚೇರಿಯವರೆಗೆ ಕಾಲ್ನಡಿಗೆ ಜಾಥಾದಲ್ಲಿ ತೆರಳಿ ಸುಳ್ಯ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಕೆ

ಸಾರ್ವತ್ರಿಕ ಚುನಾವಣೆಯಲ್ಲಿ ಮತಚಲಾವಣೆಗೆ ಮತದಾರರಿಗೆ ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ನೀಡಬೇಕೆಂಬ ಬೇಡಿಕೆಯೊಂದಿಗೆ ಸಂಪಾಜೆ ಯಿಂದ ಬೆಳಿಗ್ಗೆ ಪಾದಯಾತ್ರೆ ಹೊರಟ ರೈತ ಮುಖಂಡ ದಿವಾಕರ ಪೈ ಅವರು ಸಂಜೆ 4 ಗಂಟೆಗೆ ಗಾಂಧಿನಗರಕ್ಕೆ ಬರುತ್ತಿದ್ದಂತೆ ಸುಳ್ಯ ಕಾಂಗ್ರೆಸ್ ಪಕ್ಷದ ಮುಖಂಡರು, ಆಮ್ ಆದ್ಮಿ ಪಕ್ಷದ ಮುಖಂಡರು, ಮತ್ತು ಸಮಾನ ಮನಸ್ಕರ ಮುಖಂಡರುಗಳು ಸೇರಿ ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು.

ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎಂ ವೆಂಕಪ್ಪ ಗೌಡ,ಕೆ ಗೋಕುಲ್ ದಾಸ್,ಪಿ ಎಸ್ ಗಂಗಾಧರ್, ಧರ್ಮಪಾಲ ಕೊಯಿಂಗಾಜೆ,ಗೀತಾ ಕೋಲ್ಚಾರ್, ಸುರೇಶ್ ಅಮೈ,ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್, ಸ್ಥಳೀಯರಾದ ಅಬೂಬಕ್ಕರ್ ಸಿದ್ದಿಕ್ ಕಟ್ಟೆಕಾರ್ಸ್, ಆಮ್ ಆದ್ವಿ ಪಕ್ಷದ ಮುಖಂಡ ರಶೀದ್ ಜಟಿಪಳ್ಳ ಮೊದಲಾದವರು ಸೇರಿಕೊಂಡ ಸುಳ್ಯ ತಾಲೂಕು ಕಚೇರಿ ಆವರಣದವರೆಗೆ ಕಾಲ್ನಡಿಗೆಯಲ್ಲಿ ಬಂದು ತಾಲೂಕು ಕಚೇರಿ ಆವರಣದಲ್ಲಿ ಕಿರು ಸಭೆಯನ್ನು ನಡೆಸಿದರು.


ಸಂಪಾಜೆಯಿಂದ ಸುಳ್ಯದವರೆಗೆ ಪಾದಯಾತ್ರೆ ಮೂಲಕ ಬಂದ ದಿವಾಕರ ಪೈ ಅವರಿಗೆ ಸೇರಿದ ಮುಖಂಡರುಗಳು ತಂಪು ಪಾನೀಯವನ್ನು ನೀಡಿ ಅವರು ನಡೆಸಿದ ಬೇಡಿಕೆಯ ಧರಣಿಗೆ ತಾತ್ಕಾಲಿಕ ವಿರಾಮ ನೀಡುವಂತೆ ಕೇಳಿಕೊಂಡರು.


ಈ ಸಂದರ್ಭದಲ್ಲಿ ಮಾತನಾಡಿದ ದಿವಾಕರ್ ಪೈ ನಾನು ನಡೆಸಿದ ಈ ಹೋರಾಟಕ್ಕೆ ಎಲ್ಲಾ ಪಕ್ಷದ ಮುಖಂಡರುಗಳು, ನಮ್ಮ ಸಂಘಟನೆಯ ಪ್ರತಿಯೊಬ್ಬ ಸದಸ್ಯರು ನನಗೆ ಸಹಕಾರವನ್ನು ನೀಡಿದ್ದು ಮೊದಲಿಗೆ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಇವಿಎಂ ಯಂತ್ರ ಅದು ಮನುಷ್ಯ ನಿರ್ಮಿತ ಕಂಪ್ಯೂಟರ್ ಮಾದರಿಯ ಯಂತ್ರವಾಗಿದೆ.ಇದರಿಂದ ಯಾವುದೇ ಸಂದರ್ಭದಲ್ಲಿ ತಪ್ಪುಗಳು ಸಂಭವಿಸಬಹುದು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಈವಿಎಂ ಯಂತ್ರದ ಬಗ್ಗೆ ನಾನಾ ರೀತಿಯ ಸಂದೇಹಗಳು ಕೇಳಿಬರುತ್ತಿದೆ.ಉನ್ನತ ಹುದ್ದೆಯಲ್ಲಿರುವ ಕೆಲವು ವಕೀಲರುಗಳೇ ಈ ಯಂತ್ರದ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಬ್ಯಾಲೆಟ್ ಪೇಪರ್ ನಿಂದ ಯಾವುದೇ ಸಮಸ್ಯೆ ಬರಲು ಕಾರಣವಾಗುವುದಿಲ್ಲ.ಆ ವಿಧಾನವನ್ನು ಪರಿಪೂರ್ಣವಾಗಿ ನಂಬುವಂತದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ಬಗ್ಗೆ ಚಿಂತೆ ಮಾಡಿ ಈ ರೀತಿಯ ಜಾಗೃತಿ ಅಭಿಯಾನವನ್ನು ಮಾಡಬೇಕೆಂದು ನಿರ್ಧರಿಸಿದ್ದೆ. ಇಂದು ಕಾಲ ಕೂಡಿಬಂದ ಕಾರಣ ಎಲ್ಲರ ಸಹಕಾರದಿಂದ ಈ ಪಾದಯಾತ್ರೆಯನ್ನು ಯಶಸ್ವಿಯಾಗಿಸಲು ಸಾಧ್ಯವಾಯಿತು ಎಂದು ಹೇಳಿದರು.


ಬಳಿಕ ಇವರ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ ವೆಂಕಪ್ಪಗೌಡ, ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಎಡಮಲೆ, ಸಿಪಿಐಎಂ ಮುಖಂಡ ಕೆ ಪಿ ಜಾನಿ, ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್, ರೈತ ಸಂಘಟನೆಯ ರಾಜ್ಯ ಸಮಿತಿ ಖಾಯಂ ಸದಸ್ಯ ಸನ್ನಿ ಡಿಸೋಜ ಮಾತನಾಡಿ ಚುನಾವಣೆಯಲ್ಲಿ ಬಳಸುವಂತಹ ಇವಿಎಂ ಯಂತ್ರ ತೊಲಗಿ ಬ್ಯಾಲೆಟ್ ಪೇಪರ್ ಬರುವುದು ಅತಿ ಅವಶ್ಯಕವಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಇವಿಎಂ ಯಂತ್ರದಿಂದ ಉಂಟಾದ ಲೋಪ ದೋಷಗಳ ನಿರ್ದರ್ಶನಗಳ ಬಗ್ಗೆ ಮಾತನಾಡಿ ದಿವಾಕರ ಪೈ ಯವರು ನಡೆಸಿದ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು. ಅಲ್ಲದೆ ಈ ಪಾದಯಾತ್ರೆಗೆ ಪೋಲಿಸ್ ಇಲಾಖೆಯಿಂದ ಸಾರ್ವಜನಿಕರಿಗೆ ಅನುಮತಿ ದೊರೆಯದ ಕಾರಣದಿಂದಾಗಿ ರೈತ ಮುಖಂಡರಾದ ದಿವಾಕರ ಪೈ ಅವರೊಬ್ಬರೇ ಪಾದಯಾತ್ರೆ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಯಿತು ಎಂದು ಅವರು ಹೇಳಿದರು.
ಬಳಿಕ ಅಲ್ಲಿ ಸೇರಿದ್ದ ಎಲ್ಲರೂ ತಹಶೀಲ್ದಾರ್ ರವರ ಬಳಿ ತೆರಳಿ ಅವರ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ತಿರುಮಲ ಸೋನ, ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಬೂತಕಲ್ಲು, ಮುಖಂಡರುಗಳಾದ ಪಿ.ಎಲ್. ಸುರೇಶ್,ಮಾದವ ಗೌಡ ಸುಳ್ಯಕೋಡಿ,ಮೋಹನ ಬಾಳೆಕಜೆ, ವಸಂತ ಪೆಲ್ತಡ್ಕ,ನೂಜಾಲು ಪದ್ಮನಾಭ ಗೌಡ, ಮಂಜುನಾಥ ಮಡ್ತಿಲ, ಚನ್ನಕೇಶವ ಐವರ್ನಾಡು, ಗಣೇಶ್ ಸುಳ್ಯ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಮೊಹಮ್ಮದ್ ಕುಂಞಿ ಗೂನಡ್ಕ, ಸತ್ಯ ಕುಮಾರ್ ಅಡಿಂಜ, ಸಿದ್ದೀಕ್ ಗೂನಡ್ಕ, ಸಾಮಾಜಿಕ ಹೋರಾಟಗಾರ ಡಿ ಎಂ ಶಾರಿಕ್ ಸೇರಿದಂತೆ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.