ಕೊಡಗು ಸಂಪಾಜೆಯ ಬೈಲಿನಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಹಣ ಸಹಿತ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಗಳು ಪೊಲೀಸರ ಬಲೆಗೆ

0

ಕೊಡಗು ಸಂಪಾಜೆಯ ಬೈಲಿನ ಕನ್ಯಾನ ಎಂಬಲ್ಲಿ ಫೆಬ್ರವರಿ 8 ರಂದು ಸ್ಥಳೀಯವಾಗಿ ಟೈಲರಿಂಗ್ ವೃತ್ತಿ ನಡೆಸುತ್ತಿರುವ ಕನ್ಯಾನ ವಿಜಯ್ ಕುಮಾರ್ ಎಂಬವರ ಮನೆಯಿಂದ ಹಾಡು ಹಗಲೇ ಮನೆಯ ಬೀಗ ಮುರಿದು ಒಳ ನುಗ್ಗಿ ಹಣ ಸಹಿತ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಮಡಿಕೇರಿ ಪೋಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳು ಕೊಡಗು ಜಿಲ್ಲೆಯ ಬಲಮುರಿ ನಿವಾಸಿ ಸುದೀಪ್ ಟಿ.ಎಸ್. (23), ಎಂ ಬಾಡಗ ನಿವಾಸಿ ನಿಶಾಂತ್ ಎಂ.ಎಂ. (27) ಹಾಗೂ ನಾಪೋಕ್ಲು ಹಳೆ ತಾಲೂಕು ನಿವಾಸಿ ಇಬ್ರಾಹಿಂ (29) ಬಂಧಿತ ಆರೋಪಿಗಳಾಗಿದ್ದಾರೆ.

ಕನ್ಯಾನ ವಿಜಯ್‌ ಕುಮಾರ್ ಫೆ.8 ರಂದು ಕೆಲಸದ ನಿಮಿತ್ತ ಬೇರೆಡೆಗೆ ತೆರಳಿದ್ದ ಸಂದರ್ಭ ಮನೆಯಲ್ಲಿ ಯಾರು ಇಲ್ಲದಿರುವಾಗ ಅಪರಿಚಿತ ವ್ಯಕ್ತಿಗಳು ಮನೆಯ ಬಾಗಿಲ ಬೀಗವನ್ನು ಮುರಿದು ಕಪಾಟಿನಲ್ಲಿದ್ದ ಅಂದಾಜು 47 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ರೂ. 20 ಸಾವಿರ ನಗದನ್ನು ಕಳವು ಮಾಡಿದ್ದರು. ಈ ಬಗ್ಗೆ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದೀಗ ಮಡಿಕೇರಿ ಪೋಲೀಸರು ಮೂವರನ್ನು ಬಂಧಿಸಿದ್ದು ಆರೋಪಿಗಳ ಬಳಿಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಗ್ರಾಂ. 630 ಮಿಲಿ ಚಿನ್ನಾಭರಣ ಮತ್ತು ರೂಪಾಯಿ 4,860 ನಗದನ್ನು ವಶಪಡಿಸಿಕೊಂಡಿರುತ್ತಾರೆ.


ಇದೇ ಆರೋಪಿಗಳು ಫೆಬ್ರವರಿ 9ರಂದು ಕೊಡಗು ಜಿಲ್ಲೆಯ ಮಾದಾಪುರ ಗ್ರಾಮದ ನಿವಾಸಿ ಜೀವನ್ ಡಿ. ಎಂಬವರ ಮನೆಗೆ ನುಗ್ಗಿ ಅಲ್ಲಿಂದಲೂ ನೂರು ಗ್ರಾಂ. ತೂಕದ ಚಿನ್ನಾಭರಣ ಮತ್ತು 1.20 ಲಕ್ಷ ನಗದು ಮತ್ತು ಜಮೀನಿನ ಮೂಲ ದಾಖಲಾತಿಗಳನ್ನು ಕಳ್ಳತನ ಮಾಡಿರುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.


ಅಲ್ಲದೆ ಈ ಆರೋಪಿಗಳು ಮಂಗಳೂರು, ಹಾಸನ, ಮದ್ದೂರು, ಚನ್ನಪಟ್ಟಣ, ಮತ್ತು ರಾಮನಗರದಲ್ಲಿ ಕಳವು ಮಾಡಿರುವ ವಿಚಾರ ತನಿಖೆ ಸಂದರ್ಭದಲ್ಲಿ ತಿಳಿದುಬಂದಿದೆ.

ಕಳ್ಳತನ ನಡೆದ ದಿನ ಘಟನೆ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಆರೋಪಿಗಳನ್ನು ಪತ್ತೆ ಹಚ್ಚಲು ಮಡಿಕೇರಿ ಉಪ ವಿಭಾಗದ ಡಿ ಎಸ್ ಪಿ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪನಿರೀಕ್ಷಕ ರಮೇಶ ಕರಕಿಕಟ್ಟಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಉಪವಿಭಾಗ ಮಟ್ಟದ ಅಪರಾಧ ತನಿಖಾ ಸಿಬ್ಬಂದಿಗಳು ಹಾಗೂ ಶ್ವಾನ ದಳ ಮತ್ತು ತಾಂತ್ರಿಕ ಸಿಬ್ಬಂದಿಗಳು ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಒಂದೇ ವಾರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ ರಾಮರಾಜನ್ ಶ್ಲಾಘಿಸಿರುತ್ತಾರೆ.