ಅಜ್ಜಾವರ ಬಯಂಬು ಕಾಲೋನಿಯ ನೀರಿನ ಶೆಡ್ ಗೆ ಬೀಗ ಜಡಿದ ಪ್ರಕರಣ

0

ಪಂಚಾಯತ್ ಗೆ ಬಂದ ಕಾಲೋನಿ ನಿವಾಸಿಗಳು : ಆಡಳಿತದೊಂದಿಗೆ ಮಾತುಕತೆ

ಬಿಲ್ ಪಾವತಿಗೆ ನಿಯಮ : ಒಪ್ಪಿದ‌ ನಿವಾಸಿಗಳು – ಪ್ರಕರಣ ಸುಖಾಂತ್ಯ

ಅಜ್ಜಾವರ ಗ್ರಾಮದ ಬಯಂಬು ಕಾಲೊನಿ ನಿವಾಸಿಗಳು ಪಂಚಾಯತ್ ಗೆ ನೀರಿನ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಪಂಚಾಯತ್ ನವರು ಶೆಡ್ ಗೆ ಬೀಗ ಜಡಿದು ನೀರು ಸರಬರಾಜು ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಲೊನಿ ನಿವಾಸಿಗಳು ಇಂದು ಪಂಚಾಯತ್ ಎದುರು ಜಮಾಯಿಸಿದ್ದು ವಿಷಯ ತಿಳಿದ ಆಡಳಿತ ಮಂಡಳಿಯವರು ಬಂದು ಮಾತುಕತೆ ನಡೆಸಿದರು. ಸುದೀರ್ಘ ಚರ್ಚೆ ನಡೆದು ಬಿಲ್ ಪಾವತಿಗೆ ಪಂಚಾಯತ್ ನಿಯಮ ಸೂಚಿಸಿದನ್ನು ಒಪ್ಪಿದ ಮೇರೆಗೆ ಪ್ರಕರಣ ಸುಖಾಂತ್ಯಗೊಂಡಿತು.

ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಗೆ ನೀರಿನ ಬಿಲ್ ಪಾವತಿ ಬಾಕಿ ಇದ್ದು, ಮೂರು ತಿಂಗಳ ಹಿಂದೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು, ಬಿಲ್ ಪಾವತಿಗೆ ಗಡುವು ನೀಡುವುದು ಇಲ್ಲವಾದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸುವ ಕುರಿತು ಪಂಚಾಯತ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಕೈಗೊಂಡಿತ್ತು.

ಈ ನಿರ್ಣಯದ ಪ್ರಕಾರ ಪಂಚಾಯತ್ ವತಿಯಿಂದ ನೀರು ಪಡೆದು, ಬಿಲ್ ಪಾವತಿಸದವರಿಗೆ ನೋಟೀಸ್ ನೀಡಲಾಯಿತಲ್ಲದೆ, ಗ್ರಾಮದಲ್ಲಿ ಮೈಕ್ ಅನೌನ್ಸ್ ಮಾಡಲಾಗಿತ್ತು.

ಆದರೂ ಹಲವರು ಬಿಲ್ ಪಾವತಿಸಿಲ್ಲ. ಬಯಂಬು ಕಾಲೊನಿಯ ಹಲವು ಮನೆಯವರು ಬಿಲ್ ಪಾವತಿಸದಿದ್ದುದರಿಂದ ಫೆ.17ರಂದು ಪಂಚಾಯತ್ ವತಿಯಿಂದ ಕಾಲೊನಿಯಲ್ಲಿದ್ದ ನೀರಿನ ಶೆಡ್ ಗೆ ಬೀಗ ಜಡಿಯಲಾಗಿತ್ತು. ಇದರಿಂದ ಆಕ್ರೋಶಗೊಂಡ ನಿವಾಸಿಗಳು ಫೆ.18ರಂದು ಕಾಲೊನಿಯಲ್ಲಿ ಪ್ರತಿಭಟನೆ ನಡೆಸಿದರು.

ಫೆ.19ರಂದು ಸೋಮವಾರ ಬೆಳಗ್ಗೆ ಪಂಚಾಯತ್ ಎದುರು ಜಮಾಯಿಸಿದರು. ವಿಷಯ ತಿಳಿದು ಆಡಳಿತ ಮಂಡಳಿ ಉಪಾಧ್ಯಕ್ಷ ಜಯರಾಮ ಅತ್ಯಡ್ಕ, ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಮಾಜಿ ಉಪಾಧ್ಯಕ್ಷೆ ಲೀಲಾ ಮನಮೋಹನ್, ಸದಸ್ಯರುಗಳಾದ ರಾಘವ, ರಾಹುಲ್ ಅಡ್ಪಂಗಾಯ, ಅಬ್ದುಲ್ಲ ಅಜ್ಜಾವರ, ಶ್ವೇತಾ ಶಿರಾಜೆ,, ಶಿವಕುಮಾರ್ ಹಾಗೂ ಪಿಡಿಒ ಇದ್ದರು.

ಈ ಕುರಿತು ಬಯಂಬು ಕಾಲೊನಿ ನಿವಾಸಿಗಳೊಂದಿಗೆ ಸುದೀರ್ಘ ಚರ್ಚೆ ನಡೆಯಿತು. ನಾವು ಬಿಲ್ ಪಾವತಿಸಿಲ್ಲವೆಂದು ಬಯಂಬು ಕಾಲೊನಿಯ ನೀರಿನ ಸಂಪರ್ಕ ಮಾತ್ರ ಕಡಿತ ಮಾಡಿದ್ದಲ್ಲ. ಇತರ ಕಡೆಯೂ ಮಾಡಲಾಗಿದೆ. ಪಂಚಾಯತ್ ಗೆ ನೀರಿನ ಬಿಲ್ ಬಾಕಿ ಇಡುವುದು ಸರಿಯಲ್ಲ ಎಂದು ಆಡಳಿತ ಮಂಡಳಿಯವರು ಹೇಳಿದರು.

ಪಂಚಾಯತ್ ಗೆ ನೀರಿನ ಬಿಲ್ 18 ಲಕ್ಷದಷ್ಟು ಬರಲು ಬಾಕಿ ಇದೆ. ಇದು ಬಾರದೆ‌ ಇದ್ದರೆ ವಿದ್ಯುತ್ ಬಿಲ್ ಪಾವತಿಸಬೇಕಲ್ಲವೇ. ಆದ್ದರಿಂದ ನೀರಿನ ಬಿಲ್ ಕಡ್ಡಾಯವಾಗಿ ಎಲ್ಲರೂ ಕಟ್ಟಬೇಕಾಗಿರುವುದು ನಿಯಮ ಎಂದು ಪಂಚಾಯತ್ ಉಪಾಧ್ಯಕ್ಷ ಜಯರಾಮರು ಹಾಗೂ ಸದಸ್ಯ ಪ್ರಸಾದ್ ರೈ, ರಾಹುಲ್ ಅಡ್ಪಂಗಾಯರವರು ಹೇಳಿದರು. “ನಾವು ನೀರಿನ ಬಿಲ್ ಪಾವತಿಸುತ್ತೇವೆ. ಹಾಗಂದ ಮಾತ್ರಕ್ಕೆ ಒಂದೇ ಕಂತ್ ನಲ್ಲಿ ನಲ್ಲಿ ಪಾವತಿ ಸಾಧ್ಯವೇ ಇಲ್ಲ. ತಿಂಗಳಿಗೆ‌ ಇಷ್ಟು ಎಂದು ಪಾವತಿಸುತ್ತೇವೆ ಎಂದು‌ ಬಯಂಬು ನಿವಾಸಿಗಳು ಹೇಳಿದರಲ್ಲದೆ ನಮಗೆ ನೀರಿನ ಸಂಪರ್ಕ ಕೊಡಿ ಎಂದು ಕೇಳಿದರು.

” ನೀರು ಫ್ರೀ ಇದೆ ಎಂದು ಹೇಳಿದ್ದು ಯಾರು. ನೀರು ಪ್ರೀ ಇಲ್ಲ ಅದಕ್ಕೆ ಶುಲ್ಕ ಪಾವತಿಸಬೇಕು ಎಂಬ ನಿಯಮ” ಎಂದು ಸದಸ್ಯ ರಾಘವರು ಹೇಳಿದರು. “ನಮಗೆ ಫ್ರೀ ನೀರು ಬೇಡ. ಹಣ ಪಾವತಿಸುತ್ತೇವೆ” ಎಂದು‌ ನಿವಾಸಿಗಳು ಹೇಳಿದರು. “ನಾವು ಮೊದಲೇ ನಿಮಗೆಲ್ಲ ನೋಟೀಸ್ ನೀಡಿದ್ದೇವೆ. ಏಕಾಏಕಿ ನೀರು ಸಂಪರ್ಕ ನಿಲ್ಲಿಸಿಲ್ಲ ಮತ್ತು ನೀರಿನ ಶುಲ್ಕ, ತೆರಿಗೆ ಗಳು ಪಂಚಾಯತ್ ಗೆ ಬರಲು ಬಾಕಿ ಇದ್ದರೆ ಯಾಕೆ ಸಂಗ್ರಹಿಸುತ್ತಿಲ್ಲ ಎಂದು ನಮ್ಮನ್ನು ಮೇಲಾಧಿಕಾರಿಗಳು ಪ್ರಶ್ನಿಸುತ್ತಾರೆ. ನಮ್ಮ ಮೇಲೆ ಯಾಕೆ ಕ್ರಮಕೈಗೊಳ್ಳಬಾರದೆಂದು ನೋಟೀಸು ನೀಡುತ್ತಾರೆ. ಹೀಗಿರುವಾಗ ಸರಕಾರದ ನಿಯಮದಂತೆ ನಾವು ಕೆಲಸ ಮಾಡಬೇಕು ಎಂದು ಪಿಡಿಒ ಹೇಳಿದರು.

ಮತ್ತೆ ಕೆಲ ಸಮಯ ಮಾತುಕತೆ ನಡೆದು ಸಮಸ್ಯೆ ಇತ್ಯರ್ಥಕ್ಕೆ ಬರಲಾಯಿತು. ಮಾತುಕತೆಯಂತೆ ಈಗ ಬಾಕಿ ಇರುವ ನೀರಿನ ಶುಲ್ಕವನ್ನು ಮುಂದಿನ ಮೂರು ತಿಂಗಳ ಒಳಗೆ ಹಂತ ಹಂತವಾಗಿ ಪಂಚಾಯತ್ ಗೆ ಕಟ್ಟುವುದು ಹಾಗೂ ಪ್ರತೀ ತಿಂಗಳು ನೀರಿನ ಶುಲ್ಕ ರೂ.100‌ನ್ನು ಪಾವತಿ ಮಾಡಬೇಕಬ ಪಂಚಾಯತ್ ನಿರ್ಣಯಕ್ಕೆ ನಿವಾಸಿಗಳು ಒಪ್ಪಿದರು.‌ ಮೂರು ತಿಂಗಳೊಳಗೆ ಬಾಕಿ ಪಾವತಿ ಮಾಡದೇ ಇದ್ದರೆ ಮತ್ತೆ ಸಂಪರ್ಕ ಕಡಿತಕ್ಕೂ ನಿವಾಸಿಗಳು ಸಮ್ಮತಿ ಸೂಚಿಸಿದರು.

ಪಂಚಾಯತ್ ಗೆ ಬಂದಿದ್ದ ವರಲ್ಲಿ ಕೆಲವರು ಬಿಲ್ ಪಾವತಿ ಮಾಡಿದರು.