ಜಾಲ್ಸೂರು: ಅಟೋರಿಕ್ಷಾ ಪಾರ್ಕಿಂಗ್ ಗೆ ಶಾಸಕರ ಅನುದಾನದಡಿ ತಾತ್ಕಾಲಿಕ ಶೆಡ್ ನಿರ್ಮಾಣದ ಭರವಸೆ ಹಿನ್ನೆಲೆ

0

ಗ್ರಾ.ಪಂ. ಸಹಯೋಗದಲ್ಲಿ ಭೂಮಾಪನ ಇಲಾಖೆಯಿಂದ ಸ್ಥಳ ಸರ್ವೆ ಕಾರ್ಯ

ಜಾಲ್ಸೂರಿನ ಅಟೋರಿಕ್ಷಾ ಚಾಲಕ – ಮಾಲಕ ಸಂಘದ ಬೇಡಿಕೆಯಂತೆ ಅಟೋರಿಕ್ಷಾ ಪಾರ್ಕಿಂಗ್ ಗೆ ಶಾಸಕರ ಅನುದಾನದಡಿಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಹಾಗೂ ಭೂಮಾಪನ ಇಲಾಖೆಯ ಉಪಸ್ಥಿತಿಯಲ್ಲಿ ಸ್ಥಳದ ಸರ್ವೆ ಕಾರ್ಯವನ್ನು ಫೆ.27ರಂದು ನಡೆಸಲಾಯಿತು.

ಜಾಲ್ಸೂರಿನ ಶ್ರೀನಿವಾಸ ಕಾಂಪ್ಲೆಕ್ಸ್ ಮುಂಭಾಗದ ಮುಖ್ಯರಸ್ತೆ ಬದಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅಟೋರಿಕ್ಷಾ ಪಾರ್ಕಿಂಗ್ ನಡೆಸಲಾಗುತ್ತಿದ್ದು, ಇಲ್ಲಿರುವ ಅಟೋರಿಕ್ಷಾ ತಂಗುದಾಣಕ್ಕೆ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿ ನೆರಳಿನ ವ್ಯವಸ್ಥೆ ಮಾಡುವಂತೆ ಅಟೋರಿಕ್ಷಾ ಘಟಕದ ವತಿಯಿಂದ ಜಾಲ್ಸೂರು ಗ್ರಾಮ ಪಂಚಾಯತಿ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಮಾಡಲಾಗಿತ್ತು.
ಜಾಲ್ಸೂರು ಗ್ರಾಮ ಪಂಚಾಯತಿ ವತಿಯಿಂದ ರಿಕ್ಷಾ ಚಾಲಕರು ನೀಡಿದ ಮನವಿಯನ್ನು ಶಾಸಕರಿಗೆ ಹಸ್ತಾಂತರ ಮಾಡಿದ್ದು, ಶಾಸಕರು ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದರು. ಬಳಿಕ ಅಟೋರಿಕ್ಷಾ ಪಾರ್ಕಿಂಗ್ ಸ್ಥಳದ ಗೊಂದಲವನ್ನು ಸರ್ವೆ ಮಾಡಿಸಿ, ತಿಳಿಸುವಂತೆ ಸೂಚಿಸದರೆಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಫೆ.27ರಂದು ಭೂ ಮಾಪನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಕಾರ್ಯದರ್ಶಿ ಸುಂದರ ಮುಪ್ಪೇರ್ಯ, ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಜಾಲ್ಸೂರು ಗ್ರಾಮ ಆಡಳಿತಾಧಿಕಾರಿ ಶಾಹಿನ, ಗ್ರಾಮ ಸಹಾಯಕ ನಂದಕುಮಾರ್, ಕಟ್ಟಡ ಮಾಲಕರಾದ ಶ್ರೀನಿವಾಸ ಭಟ್ ದರ್ಖಾಸ್ತು, ಅಟೋರಿಕ್ಷಾ ಯೂನಿಯನ್ ಘಟಕದ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಜಾಲ್ಸೂರು ಘಟಕದ ಅಧ್ಯಕ್ಷ ಗೋಪಾಲ ಅಡ್ಕಾರುಪದವು ಹಾಗೂ ಸ್ಥಳೀಯ ಅಟೋರಿಕ್ಷಾ ಚಾಲಕರ ಉಪಸ್ಥಿತಿಯಲ್ಲಿ ಸ್ಥಳ ಸರ್ವೆ ನಡೆಸಲಾಯಿತು.

ಸ್ಥಳ ಸರ್ವೆ ನಡೆಸಿದಾಗ ಪ್ರಸ್ತುತ ಅಟೋರಿಕ್ಷಾ ಪಾರ್ಕಿಂಗ್ ಸ್ಥಳವು ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ ಮಂಗಳೂರು ಅವರಿಗೆ ಸಂಬಂಧಿಸಿದ ಸರ್ಕಾರಿ ಜಾಗವೆಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಜಾಲ್ಸೂರು ಗ್ರಾಮ ಪಂಚಾಯತಿ ವತಿಯಿಂದ ಶಾಸಕರಿಗೆ ಹಾಗೂ ಮಂಗಳೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಛೇರಿಗೆ ಮನವಿ ಸಲ್ಲಿಸಿದ ಬಳಿಕ ಅವರ ಆದೇಶದಂತೆ ಅಟೋರಿಕ್ಷಾ ಪಾರ್ಕಿಂಗ್ ಗೆ ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿರುವುದಾಗಿ ತಿಳಿದುಬಂದಿದೆ.