ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಸುಳ್ಯದ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್

0

ಮಾ.7ರಂದು ಆಗ್ರೋ ಸುವರ್ಣ ಸಂಭ್ರಮ

ಸುಳ್ಯದ ಪ್ರಥಮ ಕೃಷಿ ಪರಿಕರಗಳ ಮಳಿಗೆ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ ಸ್ಥಾಪನೆಯಾಗಿ 50 ವರ್ಷಗಳು ಪೂರ್ಣಗೊಂಡಿದ್ದು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ‌. ಈ ಹಿನ್ನಲೆಯಲ್ಲಿ ಮಾ.7 ರಂದು ಅದ್ದೂರಿಯ ‘ಆಗ್ರೋ ಸುವರ್ಣ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಕುರಿತು ವಿವರ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ್ ಆಗ್ರೋ ಮಾಲಕ ಪಿ.ರಾಮಚಂದ್ರ ಅವರು ನಮ್ಮ ಸಂಸ್ಥೆಗೆ ಐವತ್ತು ವರ್ಷ ತುಂಬುವುದನ್ನು ಆಚರಿಸುವ ದಿನ ಆಗ್ರೋ ಕೃಷಿ ಚಿಂತನ, ಆಗ್ರೋ ಗೌರವ ಸನ್ಮಾನ, ಆಗ್ರೋ ಸಾಂಸ್ಕೃತಿಕ ಸಂಜೆ ಎಂಬ ಕಾರ್ಯಕ್ತಮಗಳನ್ನು ಆಯೋಜಿಸಲಾಗಿದೆ ಎಂದರು.

1972 ರಲ್ಲಿ ಇಂಜಿನಿಯರಿಂಗ್ ಪೂರೈಸಿ, ಸುಳ್ಯಕ್ಕೆ ಬಂದು 1974 ರಲ್ಲಿ ಭಾರತ್ ಆಗ್ರೋ ಸಂಸ್ಥೆ ಆರಂಭಿಸಿದೆ. ಐವತ್ತು ವರ್ಷ ತುಂಬಿದ ಪ್ರಯುಕ್ತ ಮಾರ್ಚ್ 07 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ‘ಆಗ್ರೋ ಸುವರ್ಣ ಸಂಭ್ರಮ’ ವನ್ನು ಏರ್ಪಡಿಸಲಾಗಿದೆ. ಅಪರಾಹ್ನ 3.30 ರಿಂದ ರಾತ್ರಿ 9.00 ರ ವರೆಗೆ ಕಾರ್ಯಕ್ರಮ ನಡೆಯಲಿದೆ.

ಆಗ್ರೋ ಕೃಷಿ ಚಿಂತನ

ಅಪರಾಹ್ನ 3.30 ಕ್ಕೆ ಸರಿಯಾಗಿ ಭಾರತದ ಪ್ರಸಿದ್ಧ ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಇವರ ಅಧ್ಯಕ್ಷತೆಯಲ್ಲಿ ಆಗ್ರೋ ಕೃಷಿ ಚಿಂತನ’ ಕಾರ್ಯಕ್ರಮ ನಡೆಯಲಿದ್ದು ನಾಡಿನ ಅನುಭವಿ ಕೃಷಿ ತಜ್ಞರಿಂದ ಕೃಷಿಯ ಬಗೆಗಿನ ವಿಶೇಷ ಮಾಹಿತಿ ಉಪನ್ಯಾಸ ನಡೆಯಲಿದೆ. ಸ್ವಯಂಚಾಲಿತ ನೀರಾವರಿ ವಿಧಾನದ ಬಗ್ಗೆ ಅನಂತ ರಾಮಕೃಷ್ಣ ಪೆರುವಾಯಿ, ಕನಿಷ್ಠ ನೀರಿನಲ್ಲಿ ಅಡಿಕೆ ಕೃಷಿ ಬಗ್ಗೆ ಪ್ರವೀಣ ಕೇಶವ ಮೈರುಗ ಕುರುಡಪದವು ಹಾಗೂ ಟ್ಯಾಂಕ್‌ಗಳ ಬಳಕೆ ಹಾಗೂ ಮಳೆ ಕೊಯ್ಲು ವಿಷಯದ ಬಗ್ಗೆ ಮುರಳೀಧರ ಭಟ್ ಬಂಗಾರಡ್ಕ ಮಾತಾಡಲಿದ್ದಾರೆ.
ವಿಶೇಷ ಕೃಷಿ ಚಿಂತನದಲ್ಲಿ ಪ್ರಕೃತಿ- ಯಂತ್ರ- ಬದುಕು ಎಂಬ ವಿಚಾರದ ಕುರಿತು ಡಾ.ಆರ್.ಕೆ.ನಾಯರ್ ಮಾತಾಡಲಿದ್ದಾರೆ.

ಸುವರ್ಣ ಸಂಭ್ರಮದ ಉದ್ಘಾಟನೆ

ಸಂಜೆ 5 ಗಂಟೆಗೆ ಸುವರ್ಣ ಸಂಭ್ರಮದ ಉದ್ಘಾಟನೆ ನಡೆಯಲಿದೆ. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದರು ಅಧ್ಯಕ್ಷತೆ ವಹಿಸುವರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಆಗ್ರೋ ಸುವರ್ಣ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಶುಭಾಶಂಸನೆಗೈಯ್ಯಲಿದ್ದಾರೆ. ಇದೇ ಸಂದರ್ಭದಲ್ಲಿ ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ನಿರ್ದೇಶಿಸಿದ ಆಗ್ರೋ ಸಾಕ್ಷ್ಯಚಿತ್ರವನ್ನು ರೋಟರಿ ಜಿಲ್ಲಾ ಮಾಜಿ ಗವರ್ನರ್ ಸುರೇಶ್ ಚಂಗಪ್ಪ ಬಿಡುಗಡೆಗೊಳಿಸಲಿದ್ದಾರೆ. ಐವತ್ತು ವರ್ಷದ ಆಗ್ರೋ ಸಾಧನೆಯ ಅವಲೋಕನವನ್ನು ಲಯನ್ಸ್‌ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ಹಾಗೂ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹಿರಿಯ ಸಾಧಕರಿಗೆ ಆಗ್ರೋ ಗೌರವ ಸನ್ಮಾನ

ಕಾರ್ಯಕ್ರಮದಲ್ಲಿ ನಾಡಿನ ಐದು ಮಂದಿ ಹಿರಿಯ ಸಾಧಕರಿಗೆ ಆಗ್ರೋ ಗೌರವ ಸನ್ಮಾನ ನೀಡಲಾಗುವುದು. ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್, ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್.ಕೆ.ನಾಯರ್, ಹಿರಿಯ ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ಮಾಪಲತೋಟ, ಗೋಣಿಕೊಪ್ಪ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಂ. ಗೌರಿಶಂಕರ್ ಹಾಗೂ ಹಿರಿಯ ಕೃಷಿಕರಾದ ಸಂಪಾಜೆಯ ಶಂಕರ್ ಪ್ರಸಾದ್ ರೈ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು
ರಾಮಚಂದ್ರ ಪಿ. ವಿವರಿಸಿದರು.

ಆಗ್ರೋ ಸಾಂಸ್ಕೃತಿಕ ಸಂಜೆ

ರಂಗ ನಿರ್ದೇಶಕ ಡಾ.ಜೀವನ್ ರಾಂ ಸುಳ್ಯ ಸಂಯೋಜನೆಯಲ್ಲಿ ಸಂಜೆ 7.00 ಕ್ಕೆ ಎಸ್.ಡಿ.ಯಂ.ಶಿಕ್ಷಣ ಸಂಸ್ಥೆ ಉಜಿರೆ ಇಲ್ಲಿನ ಸುಮಾರು 160 ಕ್ಕಿಂತಲೂ ಹೆಚ್ಚು ಕಲಾವಿದರಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ. ಕೇರಳದ ಮೋಹಿನಿಯಾಟ್ಟಂ, ಗುಜರಾತ್ ನ ದಾಂಡಿಯಾ- ಗರ್ಭ ನೃತ್ಯ ಒರಿಸ್ಸಾದ ಒಡಿಸ್ಸಿ, ಕರಾವಳಿಯ ಯಕ್ಷಗಾನ ಬ್ಯಾಲೆಟ್, ಭರತನಾಟ್ಯ ಶಿವತಾಂಡವ ರೂಪಕ, ಸ್ಪಾನಿಶ್ ಪ್ಲೆಮೆಂಕೋ ಕ್ರಿಯೇಟಿವ್ ಡ್ಯಾನ್ಸ್, ಸೆಮಿ ಕ್ಲಾಸಿಕಲ್ ಡ್ಯಾನ್ಸ್, ಕೇರಳದ ತೆಯ್ಯಂ ಆಧಾರಿತ ನರಸಿಂಹಾವತಾರ, ಶ್ರೀರಾಮ ಪಟ್ಟಾಭಿಷೇಕ ವಿಶೇಷ ನೃತ್ಯ ರೂಪಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ಪ್ರಭಾಕರ ನಾಯರ್ ಸ್ವಾಗತ್ , ದಳ ಸುಬ್ರಾಯ ಭಟ್, ಡಾ. ಕೇಶವ ಪಿ.ಕೆ, ಡಾ. ಪುರುಷೋತ್ತಮ ಕೆ. ಜಿ. ಉಪಸ್ಥಿತರಿದ್ದರು.