ಸುಬ್ರಹ್ಮಣ್ಯ :ವಿವೇಕಾನಂದ ದೇವರಗದ್ದೆ ನಿಧನ ಹಿನ್ನೆಲೆ

0

ಸೂಕ್ತ ಚಿಕಿತ್ಸೆ ಲಭಿಸದೆ ಮೃತಪಟ್ಟಿರುವುದಾಗಿ ಅಕ್ರೋಶ

24x 7 ವೈದ್ಯಕೀಯ ಸೇವೆಯ ಆಗ್ರಹಿಸಿ ಪ್ರತಿಭಟನೆಯ ಬರಹ ವೈರಲ್, ಅನುಮತಿ ಪಡೆಯದ ಪ್ರತಿಭಟನೆಗೆ ನಿರಾಕರಣೆ

ಪ್ರತಿಭಟನೆಯ ಎಚ್ಚರಿಕೆ

ಕುಕ್ಕೆ ಶ್ರೀ ಆಟೋ ಚಾಲಕ-ಮಾಲಕ ಸಂಘದ ಅಧ್ಯಕ್ಷರಾದ ವಿವೇಕಾನಂದ ದೇವರಗದ್ದೆ ಅವರು ಮಾ.3 ರ ರಾತ್ರಿ ಆಟೋ ಚಾಲನೆ ಮಾಡುವಾಗ ಅಪಘಾತವಾಗಿ ಸೂಕ್ತ ಚಿಕಿತ್ಸೆ ಲಭಿಸದೆ ಮೃತಪಟ್ಟಿರುವುದಾಗಿ ಅಕ್ರೋಶ ವ್ಯಕ್ತವಾಗಿದ್ದು ಸುಬ್ರಹ್ಮಣ್ಯದಲ್ಲಿ 24x 7 ವೈದ್ಯಕೀಯ ಸೇವೆಯ ಆಗ್ರಹಿಸಿ ರಸ್ತೆ ತಡೆ ಮಾಡುವುದಾಗಿ ಬರಹ ವೈರಲ್ ಆಗಿ, ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಲು ಅವಕಾಶವನ್ನು ಸುಬ್ರಹ್ಮಣ್ಯ ಪೊಲೀಸರು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಸಂಘಟನೆಯ ಬೆಂಬಲದೊಂದಿಗೆ 24×7 ವೈದ್ಯಕೀಯ ಸೇವೆ ದೊರಕುವಂತೆ ಮಾಡಲು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಒತ್ತಡ ಹಾಕುವ ಕೆಲಸ ಮಾಡುವುದಾಗಿ ನ್ಯಾಯವಾದಿ ಪದ್ಮರಾಜ್, ಅಶೋಕ್ ನೆಕ್ರಾಜೆ, ಕುಕ್ಕೆ ಶ್ರೀ ಅಟೋ ಚಾಲಕ ಮಾಲಕರ ಸಂಘಟನೆಯ ಪದಾಧಿಕಾರಿಗಳಾದ ಉಮೇಶ್ ಕೆ.ಎನ್, ರವಿಕಕ್ಕೆಪದವು ಮತ್ತಿತರರು ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ವಿವೇಕಾನಂದ ದೇವರಗದ್ದೆ ಅವರ ನಿಧನ ನಂತರ ಅವರ ಮರಣದ ಬಗ್ಗೆ ಬರಹವೊಂದು ವೈರಲ್ ಆಗಿದ್ದು ಅದರಲ್ಲಿ ಕುಕ್ಕೆ ಶ್ರೀ ಆಟೋ ಚಾಲಕ-ಮಾಲಕ ಸಂಘದ ಅಧ್ಯಕ್ಷರಾದ ವಿವೇಕಾನಂದ ದೇವರಗದ್ದೆ ಅವರು ಮಾ.3 ರ ರಾತ್ರಿ ಆಟೋ ಚಾಲನೆ ಮಾಡುವಾಗ ಅಪಘಾತವಾಗಿ
ಜೀವನ್ಮರಣ ಹೋರಾಟದಲ್ಲಿ ಇರುವಾಗ ನಾವೆಲ್ಲರೂ ಸೇರಿ ಸಮೀಪದ ನಿಟ್ಟೆ ಆಸ್ಪತ್ರೆಗೆ ಸಾಗಿಸಿದೆವು ಅಲ್ಲಿ ನೋಡಿದರೆ ಆಸ್ಪತ್ರೆಗೆ ಬೀಗ ಹಾಕಿತ್ತು. ಬೆಳಕಿನ ವ್ಯವಸ್ಥೆ ಇಲ್ಲದೆ ಆಸ್ಪತ್ರೆ ಆವರಣ ಕತ್ತಲಾಗಿತ್ತು. ಪಕ್ಕದಲ್ಲೇ ಇರುವ ಡಾಕ್ಟರ್ ಮನೆಗೆ ಓಡಿದೆವು. ಅಲ್ಲಿಯೂ ಡಾಕ್ಟರ್ ಇರಲಿಲ್ಲ. ಬೇರೆ ದಾರಿ ಕಾಣದೆ ಸುಬ್ರಹ್ಮಣ್ಯದಲ್ಲಿ ಇರುವ ಎಲ್ಲಾ ಆಂಬ್ಯುಲೆನ್ಸ್ ಗೆ ಕರೆ ಮಾಡಿದೆವು. ಆಸ್ಪತ್ರೆಗೆ ಸಂಬಂದಿಸಿದ ಆಂಬ್ಯುಲೆನ್ಸ್ ನ ಚಾಲಕ ಪರಿಚಿತರಾದ ಕಾರಣ ಅವರ ವೈಯಕ್ತಿಕ ದೂರವಾಣಿ ಸಂಖ್ಯೆಗೂ ಕರೆ ಮಾಡಿದೆವು.


ಅಷ್ಟರೊಳಗೆ ಯುವ ತೇಜಸ್ಸು ಸಂಸ್ಥೆಯ ಅಂಬ್ಯುಲೆನ್ಸ್ ನಿಟ್ಟೆ ಆಸ್ಪತ್ರೆಗೆ ಆಗಮಿಸಿತು, ಕೂಡಲೇ ಆಸ್ಪತ್ರೆಯ ಆಂಬುಲೆನ್ಸ್ ನ ಚಾಲಕರೂ ಆಗಮಿಸಿದರು. ಅದಾಗಲೇ ನಮ್ಮ ಸಂಘದ ಅಧ್ಯಕ್ಷರಿಗೆ ಆಕ್ಸಿಜನ್ ಅನಿವಾರ್ಯ ಇದ್ದ ಕಾರಣ ಸೂಕ್ತ ವ್ಯವಸ್ಥೆ ಇದ್ದ ಆಸ್ಪತ್ರೆಯ ಆಂಬುಲೆನ್ಸ್ ಗೆ ಅವರನ್ನು ಶಿಫ್ಟ್ ಮಾಡಿದೆವು. ಆಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಇದ್ದರೂ ಅದನ್ನು ಸೂಕ್ತವಾಗಿ ಅಳವಡಿಸುವವರು ಯಾರೂ ಅಲ್ಲಿರಲಿಲ್ಲ. ಆಕ್ಸಿಜನ್ ವ್ಯವಸ್ಥೆ ಇಲ್ಲದೆ,ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಲುಪಿಸಿದೆವು. ಅಲ್ಲಿಯ ತನಕ ಜೀವ ಕೈಯಲ್ಲಿ ಹಿಡಿದು ಹೋರಾಟ ನಡೆಸಿದ ಅಧ್ಯಕ್ಷರು ಕಡಬ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದಿರು.


ಇದಕ್ಕೆಲ್ಲಾ ಕಾರಣ ನಮ್ಮ ಸುಬ್ರಹ್ಮಣ್ಯದಲ್ಲಿ 247 ಕಾರ್ಯ ನಿರ್ವಹಿಸುವ ಆಸ್ಪತ್ರೆ ಇಲ್ಲದ್ದು. ಹಾಗಾಗಿ ಸುಬ್ರಹ್ಮಣ್ಯದ ಸರ್ವರಲ್ಲೂ ನಮ್ಮದೊಂದು ವಿನಮ್ರ ವಿನಂತಿ ಮಾ.4 ರ ಬೆಳಿಗ್ಗೆ 10-00 ಗಂಟೆಗೆ ಸರಿಯಾಗಿ ನಮ್ಮ ಸಂಘದ ಅಧ್ಯಕ್ಷರ ಪಾರ್ಥಿವ ಶರೀರ ಕುಮಾರಧಾರ ಬಳಿ ಆಗಮಿಸಲಿದೆ. ಅಧ್ಯಕ್ಷರ ಸಾವಿಗೆ ನ್ಯಾಯ ಒದಗಿಸಲು ಹಾಗು ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ 247 ಕಾರ್ಯಾಚರಣೆ ಮಾಡುವ ಆಸ್ಪತ್ರೆಯ ಬೇಡಿಕೆ ಈಡೇರಿಕೆಗೆ ಕುಮಾರಧಾರದ ಲ್ಲಿ ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಲಿದ್ದೇವೆ. ಸುಬ್ರಹ್ಮಣ್ಯದ ಸಜ್ಜನ ನಾಗರಿಕರು ಪತ್ರಕರ್ತ ಮಿತ್ರರು ಹಾಗು ಸುಬ್ರಹ್ಮಣ್ಯದ ಸಂಘ- ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಬೇಕಾಗಿ ನಿಮ್ಮೊಂದಿಗೆ ಕೈ ಮುಗಿದು ಕೇಳಿಕೊಳ್ಳುತ್ತೇವೆ ಎಂದು ಬರೆದುಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಆದರೆ ಸುಬ್ರಹ್ಮಣ್ಯ ಪೊಲೀಸರು ರಸ್ತೆ ತಡೆ ನಡೆಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ರಸ್ತೆ ತಡೆ ನಡೆದಿಲ್ಲ. ಆದರೆ ವಿವೇಕಾನಂದ ದೇವರಗದ್ದೆ ಅವರ ಮೃತ ದೇಹದ ಯಾತ್ರೆಯನ್ನು ಕುಮಾರಧಾರದಿಂದ ಸುಬ್ರಹ್ಮಣ್ಯದ ಮೃತರ ಮನೆ ದೇವರಗದ್ದೆ ವರೆಗೆ ನಡೆಸಲಾಯಿತು.ದೇವರ ಗದ್ದೆ ಬಳಿ ಸಾಂಕೇತಿಕ ಸಭೆ ನಡೆಯಿತು. ಅಲ್ಲದೆ ಸುಬ್ರಹ್ಮಣ್ಯದಲ್ಲಿ ಮಾ.4 ರಂದು ಅಟೋ ಸೇವೆ ಸ್ಥಗಿತಗೊಳಿಸಲಾಗಿತ್ತು.