14 ವರ್ಷದ ಬಾಲಕನಿಂದ ದೈವ ನರ್ತನ : ವೀಡಿಯೋ ವೈರಲ್
ಐನೆಕಿದು ಗ್ರಾಮದ ಕೂಜುಗೋಡು ಮನೆತನದ ದೈವಗಳ ನೇಮೋತ್ಸವ ಸಂದರ್ಭ ೧೪ ರ ಪ್ರಾಯದ ಎಂಟನೇ ಕ್ಲಾಸಿನ ಬಾಲಕ ದೈವ ನರ್ತನ ಮಾಡಿದ್ದು ಸುದ್ದಿಯಾಗುತ್ತಿದೆ.
ಕೂಜುಗೋಡು ಮನೆತನದ ದೈವಗಳ ನೇಮೋತ್ಸವ ಮಾ.೧ ರಿಂದ ಮಾ. ೩ ರ ವರೆಗೆ ನಡೆದಿದ್ದು, ಮಾ.೨ ರಂದು ಗಿಣಿರಾಮ ದೈವದ ನರ್ತನ ಸೇವೆ ನಡೆದಿದ್ದು , ಐನೆಕಿದು ಗ್ರಾಮದ ಶೇಷಪ್ಪ ಅಜಿಲರ ಪುತ್ರ ಅಶ್ವಥ್ ಪ್ರಸ್ತುತ ಸುಬ್ರಹ್ಮಣ್ಯದ ಎಸ್ ಎಸ್ ಪಿ.ಯು ಕಾಲೇಜಿನ ಪ್ರೌಢಶಾಲಾ ವಿಭಾಗದ ೮ ತರಗತಿ ಓದುತ್ತಿರುವ ಹುಡುಗನ ನರ್ತನ ಸೇವೆ ಮೆಚ್ಚುಗೆ ಗಳಿಸಿದ್ದು, ನರ್ತನದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಅಶ್ವಥ್ ಮೊದಲ ಭಾರಿ ದೈವದ ನರ್ತನ ಸೇವೆ ಮಾಡಿದ್ದಾನೆ. ತಯಾರಿಯೂ ನಡೆಸಿರಲಿಲ್ಲ. ದೈವ ಕಟ್ಟುತ್ತಿಯಾ ಎಂದು ಕೇಳಿದಾಗ ಕಟ್ಟುತ್ತೇನೆ ಅಂದ. ಕೂಜುಗೋಡು ಮನೆತನದವರು ಅವಕಾಶ ಕೊಟ್ಟರು. ದೈವ ಕಟ್ಟಿ ನರ್ತನ ಸೇವೆ ಪೂರೈಸಿದ’ ಎಂದು ಐನೆಕಿದು ಗ್ರಾಮದ ಊರ ಕಟ್ಟಿನ ದೈವ ನರ್ತಕ, ಶಿರಾಡಿ ದೈವ ಮತ್ತಿತರ ದೈವ ಕಟ್ಟುವ ಶೇಷಪ್ಪ ಪರವ ಅವರ ತಂದೆ ಶೇಷಪ್ಪ ಅಜಿಲರು ತಿಳಿಸಿದ್ದಾರೆ.