ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಊರವರಿಂದ ಬೃಹತ್ ಶ್ರಮದಾನ

0

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿದ್ದು ಈ ಪ್ರಯುಕ್ತ ಭಾನುವಾರ ಊರವರಿಂದ ಬೃಹತ್ ಶ್ರಮದಾನ ಕಾರ್ಯಕ್ರಮ ನಡೆಯಿತು.

ಗ್ರಾಮದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳನ್ನು ವಿವಿಧ ತಂಡಗಳಾಗಿ ಮಾಡಿ ಅವರ ಮೂಲಕ ಚಪ್ಪರಕ್ಕಾಗಿ ಸಾಮಾನುಗಳ ಜೋಡಣೆ, ಸ್ವಚ್ಛತೆ, ಉರುವಲು ಸಂಗ್ರಹ ಮೊದಲಾದ ಕೆಲಸ ಕಾರ್ಯಗಳನ್ನು ಮಾಡಲಾಯಿತು. ಇದೇ ವೇಳೆ ದೇವಸ್ಥಾನಕ್ಕೆ ಸಂಬಂಧಪಟ್ಟ ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದಲ್ಲೂ ಶ್ರಮದಾನ ನಡೆಯಿತು. ಬೆಳಗ್ಗಿನಿಂದಲೇ ಪ್ರಾರಂಭಗೊಂಡ ಈ ಶ್ರಮದಾನದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು ಎಪ್ರಿಲ್ 26 ರಿಂದ ಮೊದಲ್ಗೊಂಡು ಮೇ 4 ರವರೆಗೆ ನಡೆಯಲಿದ್ದು ಈ ವೇಳೆ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.

ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಮುದ್ರಿತಗೊಂಡಿದ್ದು ಇದರ ಬಿಡುಗಡೆ ಸಮಾರಂಭ ದೇಗುಲದ ಪ್ರಾಂಗಣದಲ್ಲಿ ಮಾರ್ಚ್ 11 ರ ಸೋಮವಾರ ನಡೆಯಲಿದೆ. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಿದ್ದು ಶಾಸಕಿ ಭಾಗೀರಥಿ ಮುರುಳ್ಯ ಉಪಸ್ಥಿತರಿರಲಿದ್ದಾರೆ. ಇದೇ ವೇಳೆ ಕೋಟಿ ಲೇಖನ ಯಜ್ಞದ ಸಂಕಲ್ಪ ಕಾರ್ಯವೂ ನಡೆಯಲಿದೆ.