ಕಲ್ಲೋಣಿ ಸ್ತ್ರೀಶಕ್ತಿ ಗುಂಪಿಗೆ ರಾಜ್ಯದ ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ದ್ವಿತೀಯ ಪ್ರಶಸ್ತಿ

0

ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭ ರಾಜ್ಯದ ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳನ್ನು ಆಯ್ದು ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಕಲ್ಲೋಣಿ ಸ್ತ್ರೀಶಕ್ತಿ ಗುಂಪು ರಾಜ್ಯದ ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ದ್ವಿತೀಯ ಪ್ರಶಸ್ತಿಗೆ ಭಾಜನವಾಗಿದೆ.

ಮಾ. 12 ರಂದು ಬೆಂಗಳೂರಿನ ಕಬ್ಬನ್‌ಪಾರ್ಕ್‌ನಲ್ಲಿ ಇರುವ ಜವಾಹರ್ ಬಾಲಭವನ ಸೊಸೈಟಿಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಕಲ್ಲೋಣಿ ಸ್ತ್ರೀಶಕ್ತಿ ಗುಂಪಿಗೆ ಪ್ರಶಸ್ತಿ ಪ್ರದಾನಗೈದರು. ಗುಂಪಿನ ಪ್ರತಿನಿಧಿಗಳಾದ ಶ್ರೀಮತಿ ಸುಜಾತ ಮತ್ತು ಶ್ರೀಮತಿ ಹರಿಣಾಕ್ಷಿ, ಬೆಳ್ಳಾರೆ ವಲಯದ ಮೇಲ್ವಿಚಾರಕಿ ಶ್ರೀಮತಿ ಉಷಾ ಪ್ರಶಸ್ತಿ ಸ್ವೀಕರಿಸಿದರು. ಈ ಪ್ರಶಸ್ತಿಯು 30,000 ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಗುಂಪಿನ ನಿರ್ಮಾತೃ ಮತ್ತು ನಿರ್ವಹಣೆ ಮಾಡಿದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪಾಪಕುಮಾರಿ, ಮೇಲ್ವಿಚಾರಕಿ ಶ್ರೀಮತಿ ಉಷಾ ಇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಸುಳ್ಯ ತಾಲೂಕಿನ ಸ್ತ್ರೀ ಶಕ್ತಿ ಗುಂಪು ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನವಾಗಲು ಸಲಹೆ ಮಾರ್ಗದರ್ಶನ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಉಸ್ಮಾನ್ .ಎ., ಜಿಲ್ಲಾ ನಿರೂಪಣಾಧಿಕಾರಿಗಳಾದ ಕುಮಾರ್ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಶ್ಮಿ ಕೆ.ಎಂ. ಇವರಿಗೆ ಸುಳ್ಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.