ನಾಳೆ ಡೆಪ್ಯುಟಿ ಸ್ಪೀಕರ್ ಸಮಿತಿಯಿಂದ ಶಾಸಕ ಡಾ ಮಂತರ್ ಗೌಡ ಸಮ್ಮುಖದಲ್ಲಿ ಪರಿವೀಕ್ಷಣೆ
ಕಳೆದ ವಿಧಾನ ಸಭಾ ಚುನಾವಣೆ ಸಂಧರ್ಭದಲ್ಲಿ ಬಹು ಸದ್ದು ಮಾಡಿದ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಡಳಿತ ಕಛೇರಿಯ ತಡೆಗೋಡೆ ಕೆಡವಲು ಕ್ಷಣಗಣನೆ ಆರಂಭಗೊಂಡಿದೆ.
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದಲ್ಲಿ ಸಮಿತಿ ಸದಸ್ಯರು ನಾಳೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಸಮ್ಮುಖದಲ್ಲಿ ಮಾ.14ರಂದು ತಡೆಗೋಡೆಯ ಪರಿಶೀಲನೆ ನಡೆಸಲಿದ್ದಾರೆ.
ಏಳು ಕೋಟಿ ವೆಚ್ಚದಲ್ಲಿ ಜರ್ಮನ್ ತಂತ್ರಜ್ಞಾನದಲ್ಲಿ ನಡೆದ ತಡೆಗೋಡೆ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ ಎಂದು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಆರೋಪ ನಡೆಸಿ ಈ ಬಗ್ಗೆ ಹೋರಾಟ ಮಾಡಿತ್ತು.
ಆ ಸಂದರ್ಭದಲ್ಲಿ ವಿಧಾನಸಭಾ ಚುನಾವಣಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ ಮಂತರ್ ಗೌಡ ಅವರು ತಮ್ಮ ಚುನಾವಣೆ ಪ್ರಚಾರದಲ್ಲಿ ಅವೈಜ್ಞಾನಿಕ ವಾಗಿರುವ ಈ ಜರ್ಮನ್ ಟೆಕ್ನಾಲಜಿಯ ತಡೆಗೋಡೆಯನ್ನು ಕೆಡವಿ ಇಂಡಿಯನ್ ಟೆಕ್ನಾಲಜಿಯ ಸುಭದ್ರ ತಡೆಗೋಡೆ ನಿರ್ಮಿಸುವುದಾಗಿ ಜನತೆಗೆ ಭರವಸೆ ನೀಡಿದ್ದರು.
ಪ್ರಸ್ತುತ ಡಾ ಮಂತರ್ ಗೌಡ ಹಾಗೂ ಎ.ಎಸ್. ಪೊನ್ನಣ್ಣನವರು ಶಾಸಕರುಗಳಾಗಿ ಆಯ್ಕೆಯಾಗಿದ್ದು,
ತಡೆಗೋಡೆ ನಿರ್ವಹಣೆ ಹೊತ್ತ ಇಂಜಿನಿಯರ್ ಅಮಾನತ್ತಿಗೆ ಒಳಗಾದರೆ, ಈ ಕಾಮಗಾರಿ ಗೆ ಸಂಭಂದಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸೂಪರಿಂಟೆಂಡೆಂಟ್ ಇಂಜಿನಿಯರ್, ಚೀಪ್ ಇಂಜಿನಿಯರ್ ವರ್ಗಾವಣೆಗೆ ಒಳಪಟ್ಟರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ರವರು ಪ್ರಥಮ ಅಧಿವೇಶನದಲ್ಲಿ ಡಿ.ಸಿ.ಕಛೇರಿ ತಡೆಗೋಡೆ ಅವೈಜ್ಞಾನಿಕವಾಗಿದ್ದು ಯಾವತ್ತಾದರೂ ಬಿದ್ದು ಅನಾಹುತ ಸಂಭವಿಸಲಿರುವುದರಿಂದ ಸುಭದ್ರ ತಡೆಗೋಡೆ ನಿರ್ಮಾಣಕ್ಕೆ ಸದನದಲ್ಲಿ ಒತ್ತಾಯಿಸಿದ್ದರು.
ಈಗ ಡಾ ಮಂತರ್ ಒತ್ತಡದಿಂದ ಸರ್ಕಾರ ನವೀನ ತಂತ್ರಜ್ಞಾನವನ್ನು ಉಪಯೋಗಿಸಿ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ.ಉಪ ವಿಧಾನ ಸಭಾ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದಲ್ಲಿ ಶಾಸಕರುಗಳಾದ ಎಸ್.ಸುರೇಶ್ ಕುಮಾರ್,ಈ ತುಕಾರಾಮ್,ಎ.ಮಂಜು,ಸುರೇಶ್ ಬಾಬು ತಂಡ ನಾಳೆ ದಿನಾಂಕ 14- 3-2024 ರಂದು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಲಿದ್ದಾರೆ.