ಸುಳ್ಯದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು

0

ಹೈಟೆಕ್ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲು ಚಿಂತನೆ

ಹಿರಿಯ ವಿದ್ಯಾರ್ಥಿಗಳ ನಿರ್ಧಾರ- ನೂತನ ಸಮಿತಿ ರಚನೆ

ಸುಳ್ಯದ ಬಹುತೇಕ ಹಿರಿಯ ಗಣ್ಯರು ವಿದ್ಯಾಭ್ಯಾಸ ಮಾಡಿರುವ ಸುಳ್ಯದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಧುನಿಕ ಸೌಲಭ್ಯಗಳಿರುವ ಹೈಟೆಕ್ ಶಾಲೆಯನ್ನಾಗಿ ಪುನರ್ ರೂಪಿಸಲು ಶಾಲಾ ಹಳೆ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಇದಕ್ಕಾಗಿ ನೂತನ ತಾತ್ಕಾಲಿಕ ಸಮಿತಿಯನ್ನು ಅವರು ರಚಿಸಿಕೊಂಡಿದ್ದಾರೆ.
ತಮ್ಮ ಯೋಚನೆ – ಯೋಜನೆಗಳನ್ನು ಹಂಚಿಕೊಳ್ಳಲು ಮಾರ್ಚ್ 13 ರಂದು ಪ್ರೆಸ್ ಕ್ಲಬ್‌ನಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿದರು.

ಅದರಲ್ಲಿ ಮಾತನಾಡಿದ ತಾತ್ಕಾಲಿಕ ಸಮಿತಿಯ ಕಾರ್ಯಾಧ್ಯಕ್ಷ ಎಂ.ಬಿ.ಸದಾಶಿವರು, “ಶತಮಾನ ಕಂಡಿರುವ ಹಾಗೂ ಹಲವಾರು ಪ್ರತಿಭೆಗಳನ್ನು ಸಮಾಜಕ್ಕೆ ನೀಡಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸರಕಾರಿ ಶಾಲೆಯನ್ನಾಗಿ ರೂಪಿಸುವ ಅಗತ್ಯವನ್ನು ನಾವು ಮನಗಂಡಿದ್ದು, ಅದಕ್ಕಾಗಿ ಶಾಲಾ ಹಳೆವಿದ್ಯಾರ್ಥಿಗಳ ತಾತ್ಕಾಲಿಕ ಸಮಿತಿಯನ್ನು ರಚಿಸಿಕೊಂಡಿದ್ದೇವೆ. ಅಭಿವೃದ್ಧಿಯ ನೀಲ ನಕಾಶೆ ಸಿದ್ಧಗೊಳಿಸಿದ್ದೇವೆ. ಆಧುನಿಕ ಮಾದರಿಯ ಶಾಲಾ ಕೊಠಡಿಗಳ ನಿರ್ಮಾಣ, ನವೀನ ಪರಿಕರಗಳು, ಬೌದ್ಧಿಕ ಕ್ರಿಯಾಶೀಲತೆಗೆ ಪೂರಕ ತಂತ್ರಜ್ಞಾನ ಅಳವಡಿಕೆ, ಕೌಶಲ್ಯ ಅಭಿವೃದ್ಧಿ, ನೈತಿಕ ಶಿಕ್ಷಣ, ಈಜುಕೊಳ, ಬಯಲು ರಂಗಮಂದಿರ, ಮಕ್ಕಳ ಉದ್ಯಾನ, ಹಣ್ಣು ತರಕಾರಿ ತೋಟ ಮುಂತಾಗಿ ನಿಜ ಅರ್ಥದಲ್ಲಿ ಮಾದರಿಯಾಗುವಂತಹ ಮಾದರಿ ಹಿರಿಯ ಪ್ರಾಥಮಿಕ ಶಾಲೆ ರೂಪಿಸುತ್ತೇವೆ. ಇದಕ್ಕಾಗಿ ಊರ ಪರವೂರ ವಿದ್ಯಾಭಿಮಾನಿಗಳನ್ನು, ಹಳೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಪ್ರೇಮಿಗಳು ಮತ್ತು ದೊಡ್ಡ ಕಂಪೆನಿಗಳನ್ನು ಸಂಪರ್ಕಿಸಲಿದ್ದೇವೆ” ಎಂದು ಹೇಳಿದರು. “ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು ತಮ್ಮ ಕಚೇರಿಯ 9035299466 ನಂಬರನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾತ್ಕಾಲಿಕ ಸಮಿತಿಯ ಸಂಚಾಲಕ ಆರ್.ಕೆ.ಭಟ್‌ರವರು ” ಸರಕಾರಿ ಶಾಲೆ ಜನರ ಆಸ್ತಿ. ಇದು ಬಡವರ ಶಾಲೆ ಎಂಬ ಭಾವನೆ ಇದೆ. ಇದು ಎಲ್ಲರ ಶಾಲೆ ಎಂಬ ಭಾವನೆ ಬರಬೇಕು. ಅದಕ್ಕಾಗಿ ಶಾಲೆಯಲ್ಲಿ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಬೇಕೆಂಬ ಸಂಕಲ್ಪ ನಮ್ಮದು. ಶಾಲೆಗೆ 4 ಎಕ್ರೆ ಭೂಮಿ ಇದೆ. ಈಗ ಇರುವ ಒಂದು ಬದಿಯ ಶಿಥಿಲ ಕಟ್ಟಡ ತೆರವುಗೊಳಿಸಿ, ಈಜುಕೊಳ, ಮಧ್ಯ ಭಾಗದಲ್ಲಿ ರಂಗಮಂದಿರ, ಇನ್ನೊಂದು ಬದಿಯಲ್ಲಿ ಸುಸಜ್ಜಿತ ಕಟ್ಟಡ ನಮ್ಮ ನೀಲನಕಾಶೆಯಲ್ಲಿದೆ. ಕನಿಷ್ಠ ಮೂರು ಕೋಟಿಯ ಯೋಜನೆ ನಮ್ಮದು” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವಿರಾಜ್ ಕಮಿಲಡ್ಕ, ಸಮಿತಿ ಖಜಾಂಚಿ ಡಾ| ಸಾಯಿಗೀತ, ಉಪಾಧ್ಯಕ್ಷ ಡಾ| ಎಸ್.ರಂಗಯ್ಯ, ಕಾರ್ಯದರ್ಶಿಗಳಾದ ಗೋಕುಲ್‌ದಾಸ್ ಮತ್ತು ರಶೀದ್ ಜಟ್ಟಿಪಳ್ಳ, ಸದಸ್ಯ ಖಲಂದರ್ ಉಪಸ್ಥಿತರಿದ್ದರು.

ನೂತನ ಸಮಿತಿ
ಶಾಲಾ ನವೀಕರಣಕ್ಕಾಗಿ ರಚಿಸಿಕೊಂಡಿರುವ ಸಮಿತಿಯ ಗೌರವ ಅಧ್ಯಕ್ಷರಾಗಿ ಡಾ| ಕೆ.ವಿ. ಚಿದಾನಂದ, ಕಾರ್ಯಾಧ್ಯಕ್ಷರಾಗಿ ಎಂ.ಬಿ.ಸದಾಶಿವ, ಉಪಾಧ್ಯಕ್ಷರುಗಳಾಗಿ ಡಾ|ಎಸ್. ರಂಗಯ್ಯ, ಅಶೋಕ ಪ್ರಭು, ರವಿರಾಜ ಕಮಿಲಡ್ಕ, ಎಂ.ಎಸ್. ಪುರುಷೋತ್ತಮ, ಶ್ರೀಮತಿ ಕಮಲಾಕ್ಷಿ, ಕಾರ್ಯದರ್ಶಿಗಳಾಗಿ ಗೋಕುಲ್‌ದಾಸ್, ಅಬ್ದುಲ್ ರಶೀದ್ ಜಟ್ಟಿಪಳ್ಳ, ಶ್ರೀಮತಿ ಸುನಂದ ಶೆಟ್ಟಿ, ಸಂಚಾಲಕರಾಗಿ ಆರ್. ಕೆ. ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಮತಿ ಸುಶ್ಮಿತಾ ಜಾಕೆ, ಶ್ರೀಮತಿ ಸುಮತಿ ನಾಯಕ್, ಖಲಂದರ್, ಎಂ.ಎಸ್.ಜಯಪ್ರಕಾಶ್, ಬಾಲಕೃಷ್ಣ, ವಿಜಯಾನಂದ ಆಯ್ಕೆಯಾಗಿದ್ದಾರೆ.