ದಕ್ಷಿಣ ಕನ್ನಡ ಮತ್ತು ಕೊಡಗಿನ ಗಡಿಭಾಗದ ಕಾಡಿನಂಚಿನ ಗ್ರಾಮದಲ್ಲಿ ಸಶಸ್ತ್ರ ನಕ್ಸಲೀಯರು ಪ್ರತ್ಯಕ್ಷರಾಗಿದ್ದಾರೆ ನ್ನಲಾದ ಮಾಹಿತಿ ಲಭಿಸಿದೆ.
ಗಡಿ ಪ್ರದೇಶವಾಗಿರುವ ಮಡಿಕೇರಿ ತಾಲೂಕು ಕಾಲೂರು ಗ್ರಾಮದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಕಾಣಿಸಿಕೊಂಡ ತಂಡವೊಂದು ಕೂಜಿಮಲೆಯ ದಿನಸಿ ಅಂಗಡಿಯೊಂದರಿಂದ 4 ಸಾವಿರ ರೂ.ಗಳಷ್ಟು ಬೆಲೆಯ ದಿನಸಿಯನ್ನು ಖರೀದಿಸಿದ್ದರೆನ್ನಲಾಗಿದೆ. ಇವರು ನಕ್ಸಲರೇ ಆಗಿರಬಹುದೆಂಬ ಗುಮಾನಿ ಹರಡಿದ್ದು ಆತಂಕಕ್ಕೂ ಕಾರಣವಾಗಿದೆ.
8 ಜನರಿದ್ದ ಶಂಕಿತ ನಕ್ಸಲೀಯರ ತಂಡದವರು ನಗದು ನೀಡಿ ಸಾಮಗ್ರಿ ಖರೀದಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಈ ಪ್ರದೇಶ ಬರುತ್ತದೆ.
2012ರಲ್ಲಿ ಇದೇ ಕಾಲೂರು ಗ್ರಾಮದಲ್ಲಿ ನಕ್ಸಲೀಯರು ಕಾಣಿಸಿಕೊಂಡಿದ್ದರು. ಫೆಬ್ರವರಿ ತಿಂಗಳಿನಲ್ಲಿ ಇಲ್ಲಿಗೆ ಸಮೀಪದ ಸಂಪಾಜೆ ಗುಡ್ಡೆಗದ್ದೆಯಲ್ಲೂ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎಂದು ಹೇಳಲಾಗಿತ್ತು.
ಕೊಡಗಿಗೆ ಸೇರಿರುವ ಕೂಜಿಮಲೆಗೆ ಸಮೀಪದಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರು, ಕೊಲ್ಲಮೊಗರು, ಕಲ್ಮಕಾರು ಗ್ರಾಮಗಳಿವೆ. ಇಲ್ಲಿ ಬಹು ವಿಸ್ತಾರವಾದ ಕೂಜಿಮಲೆ ರಬ್ಬರ್ ಎಸ್ಟೇಟ್ ಇದೆ.
ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಕುರಿತು ನಕ್ಸಲ್ ನಿಗ್ರಹ ಪಡೆಯ ಎಸ್.ಪಿ. ಯವರನ್ನು ಸುದ್ದಿ ಸಂಪರ್ಕಿಸಿದಾಗ , ಖಚಿತಪಡಿಸಿದ್ದಾರೆ. ನಮಗೂ ಮಾಹಿತಿ ಲಭಿಸಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದ್ದು, ನಕ್ಸಲ್ ನಿಗ್ರಹ ಪಡೆ ಸಿದ್ದವಾಗಿದೆ ಎಂದಿದ್ದಾರೆ.
ಸುದ್ದಿ ಮಾಧ್ಯಮ ತಂಡ ಘಟನಾ ಸ್ಥಳಕ್ಕೆ ತೆರಳಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.