ಕೂಜಿಮಲೆಗೆ ಬಂದ ನಾಲ್ವರು ಅಪರಿಚಿತರು ನಕ್ಸಲರೇ

0

ಪೊಲೀಸ್, ಎಎನ್ಎಫ್ ವಿಚಾರಣೆಯ ವೇಳೆ ಬಹಿರಂಗ

ಮುಂದುವರಿದ ಕೂಂಬಿಂಗ್ ಕಾರ್ಯಾರಣೆ

ಶನಿವಾರ ಸಂಜೆ ಸುಳ್ಯ ಮತ್ತು ಕೊಡಗು ಗಡಿಪ್ರದೇಶವಾದ ಕೂಜಿಮಲೆಗೆ ಬಂದಿದ್ದ ನಾಲ್ವರು ಅಪರಿಚಿತರು ವಾಂಟೆಂಡ್ ಲಿಸ್ಟ್ ನಲ್ಲಿರುವ ನಕ್ಸಲರೇ ಎಂಬ ಮಾಹಿತಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಗೆ ಗೊತ್ತಾಗಿದೆ ಎಂಬ ಮಾಹಿತಿ ಲಭಿಸಿದೆ. ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಯುತ್ತಿದೆ.

ನಕ್ಸಲರು ಕೂಜಿಮಲೆಯ ಅಂಗಡಿಗೆ ಬಂದು ದಿನಸಿ ಖರೀದಿಸಿ ತೆರಳಿದ್ದಾರೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ನಿನ್ನೆ ರಾತ್ರಿ ವೇಳೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.‌ ಇಂದು ಬೆಳಿಗ್ಗೆ ಮಡಿಕೇರಿಯ ಗುಪ್ತಚರ ಎಸ್.ಐ. ನವೀನ್ ಕೋಟ್ಯಾನ್ ಮತ್ತು ಸಿಬ್ಬಂದಿಗಳು ಬಂದರು. ಕಾರ್ಕಳ ಹಾಗೂ ಭಾಗಮಂಡಲದಿಂದ ಆಗಮಿಸಿದ ನಕ್ಸಲ್ ನಿಗ್ರಹ ಪಡೆಯ ತಂಡಗಳು ಮೂರು ಭಾಗಗಳಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತು. ಸ್ವಲ್ಲ ಹೊತ್ತಿನಲ್ಲಿ ಕಾರ್ಕಳದಿಂದ ನಕ್ಸಲ್ ನಿಗ್ರಹ ಪಡೆಯ ಡಿವೈಎಸ್ಪಿ ರಾಘವೇಂದ್ರ ಆಗಮಿಸಿದರು. ಮಡಿಕೇರಿಯಿಂದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜ್ , ಮಡಿಕೇರಿ ಗ್ರಾಮಾಂತರ ಸರ್ಕಲ್ ಇನ್ ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ ಮತ್ತಿತರ ಅಧಿಕಾರಿಗಳು ಬಂದರು. ಕೇಂದ್ರ ಗುಪ್ತಚರ ಇಲಾಖೆಯವರೂ ಸ್ಥಳಕ್ಕೆ ಬಂದರು.

ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ಅಂಗಡಿ ಮಾಲಕ ರಾಮಲಿಂಗ, ಅವರ ಪುತ್ರ ರಾಮಚಂದ್ರ, ಘಟನೆಯ ಸಂದರ್ಭ ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರಾದ ರೂಬಿ, ದುರ್ಗ ಅವರಿಂದ ಮಾಹಿತಿ ಪಡೆದರು.

ಅವರು ನೀಡಿದ ಮಾಹಿತಿ ಮತ್ತು‌ ಅಧಿಕಾರಿಗಳು ತೋರಿಸಿದ ಪೊಟೋಗಳ ಆಧಾರದಲ್ಲಿ ಬಂದಿದ್ದ ಇಬ್ಬರು ಯುವತಿಯರ ಸಹಿತ ನಾಲ್ವರೂ ಕೂಡಾ ವಾಂಟೆಡ್ ಲಿಸ್ಟ್ ನಲ್ಲಿರುವ ನಕ್ಸಲೀಯರೇ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಮೂರು ಪ್ರದೇಶಗಳಿಂದ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಡ್ರೋನ್ ಮೂಲಕವೂ ಕಾರ್ಯಾಚರಣೆ ನಡೆಯುತ್ತಿದೆ.

ಮೋಸ್ಟ್ ವಾಂಟೆಂಡ್ ನಕ್ಸಲೈಟ್ ವಿಕ್ರಂ ಗೌಡ ಈ ತಂಡದಲ್ಲಿದ್ದರೇ ಎಂಬ ಮಾಹಿತಿಯನ್ನೂ ಪೊಲೀಸರು ಖಚಿತಪಡಿಸುತ್ತಿದ್ದಾರೆ.

ಈ ಭಾಗದ ಇತರ ಕಡೆ ನಕ್ಸಲ್ ಚಲನ ವಲನಗಳ ಮಾಹಿತಿಯ ಆಧಾರದಲ್ಲಿ ಈ ಘಟನೆಯ ನಿಖರ ಮಾಹಿತಿ ತಿಳಿಯಬಹುದಾಗಿದೆ ಎಂದು ಎ.ಎನ್.ಎಫ್. ಮೂಲಗಳಿಂದ ತಿಳಿದುಬಂದಿದೆ.

ಘಟನೆಯ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳ ಸಂಪರ್ಕದಲ್ಲಿರುವುದಾಗಿ ಕೊಡಗು ಎಸ್ಪಿ ರಾಮರಾಜ್ ಸುದ್ದಿಗೆ ತಿಳಿಸಿದ್ದಾರೆ.