ಮಾ. 19 ರಂದು ನಿಧನರಾದ ದಿ| ರಾಜಾರಾಮ ದೇಂಗೋಡಿ ಎಲೆಮರೆಯ ಕಾಯಿಯಂತೆ ಸದ್ದಿಲ್ಲದೆ ಸಂಗೀತ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಸವ್ಯಸಾಚಿ. ಶಾಲಾದಿನಗಳಲ್ಲೇ ಸಂಗೀತದ ಹುಚ್ಚು ಮೈಗಂಟಿಸಿಕೊಂಡು ಮನೆಯವರಿಗೆ ಗೊತ್ತು ಮಾಡದೆ ಸಂಗೀತ ಸಾಧನೆಗೆ ತೊಡಗಿಸಿಕೊಂಡವರು.
ಗಿಟಾರ್, ಹಾರ್ಮೋನಿಯಂ, ಕೀಬೋರ್ಡ್, ಮೆಂಡೋಲಿನ್ ವಾದಕರಾಗಿದ್ದ ಇವರು ಕರ್ನಾಟಕದ ಅನೇಕ ಆರ್ಕೆಸ್ಟ್ರಾಗಳಲ್ಲಿ ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸಿದವರು. ಇವರೇ ಸ್ವತ: ಆರ್ಕೆಸ್ಟ್ರಾಗಳನ್ನು ಸಂಘಟಿಸುತ್ತಿದ್ದರು. ಆರಂಭದ ದಿನಗಳಲ್ಲಿ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖಾ, ಅರವಿಂದ ಸ್ಟುಡಿಯೋ ಗಿರೀಶ್ ಕಿಗ್ಗಾಲ್ ಮೊದಲಾದವರ ಜೊತೆ ಇವರು ಆರ್ಕೆಸ್ಟ್ರಾಗಳಲ್ಲಿ ಜೊತೆಯಾಗಿದ್ದರಂತೆ. ಇವರು ಸಂಗೀತ ನಿರ್ದೇಶನ ಮಾಡಿದ ಅನೇಕ ಹಾಡುಗಳು ಇಂದು ನೂರಾರು ಗಾಯಕರ ಬತ್ತಳಿಕೆಯಲ್ಲಿ ಬಂಧಿಯಾಗಿವೆ.
ನನಗೆ ರಾಜಾರಾಮರು ಹತ್ತಿರವಾದದ್ದು ರಂಗಸಂಗೀತದ ನೆಲೆಯಿಂದ. ಸುಮಾರು ಇಪ್ಪತ್ತೈದು ವರ್ಷಗಳ ಅನುಬಂಧ. ನಾನು ನಿರ್ದೇಶಿಸಿದ ರಾಜ್ಯಮಟ್ಟದ ಬಹುಮಾನ ವಿಜೇತ ನಾಟಕ 'ತಿಪ್ಪೇ ಕ್ರಾಸಿನ ಹುಡುಗಿ' ನಾಟಕಕ್ಕೆ ಕೀಬೋರ್ಡ್ ವಾದಕರಾಗಿ ಮೊದಲಿಗೆ ಆಮಂತ್ರಿಸಿದ್ದೆ. ಆಗ ಅವರಲ್ಲಿದ್ದ ಅಗಾಧ ಸಂಗೀತ ಜ್ಞಾನವನ್ನು ಮನಗಂಡು ನನ್ನ ಮುಂದಿನ ನಾಟಕಗಳಿಗೆ ರಂಗಸಂಗೀತ ನೀಡುವಂತೆ ವಿನಂತಿಸಿಕೊಂಡೆ. ಅಂತೆಯೇ ಮುಂದೆ ಉಡುಪಿ ಸುತ್ತು ಮುತ್ತಲಿನ ಹತ್ತಾರು ರಂಗ ಸಂಸ್ಥೆಗಳಿಗೆ ಇವರ ಸಂಗೀತ ಸೇವೆ ಲಭ್ಯವಾಯಿತು.
ನಾನು ನಿರ್ದೇಶಿಸಿದ ಚಿನ್ನದ ಬಂಡಿ, ಸಂಭಾವಿತರು, ಮಾರನಾಯಕ. ಕೂಡಲಸಂಗಮ, ಕಾಡಿನ ಹಕ್ಕಿ ಪೇಟೆಗೆ ಬಂತು, ಹುಲಿಯ ನೆರಳು, ತಲೆದಂಡ, ಸಾಕ್ರೆಟಿಸ್ ಮೊದಲಾದ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಅಂತೆಯೇ ಮರಣಬಲೆ, ಬೌಂಡರಿಲೈನ್ ಕಿರುಚಿತ್ರಗಳಿಗೂ ಸಂಗೀತ ನೀಡಿ ಚಿತ್ರಸಂಗೀತದಲ್ಲೂ ಸೈ ಅನ್ನಿಕೊಂಡಿದ್ದಾರೆ. ಜೊತೆಗೆ ನಮ್ಮ ನಿರ್ಮಾಣದ ಹತ್ತಾರು ಆಲ್ಬಂಗಳಿಗೆ ರಾಗಸಂಯೋಜನೆ ಮಾಡಿರುತ್ತಾರೆ.
ಹೆಸರಾಂತ ಸಂಘಟನೆಗಳಾದ ಸುಮನಸಾ ಕೊಡವೂರು, ವನಸುಮ ವೇದಿಕೆ ಕಟಪಾಡಿ, ಭೂಮಿಕಾ ಹಾರಾಡಿ, ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ, ಎಸ್.ಡಿ.ಎಂ. ಕಾಲೇಜು ಉಜಿರೆ, ರಂಗತಂಡ ಮೂಡಿಗೆರೆ, ಸಮಸ್ತರು ಹರಪನ ಹಳ್ಳಿ, ರಂಗಭಾರತಿ ಹೂವಿನ ಹಡಗಲಿ, ಸಂಗಮ ಕಲಾವಿದರು ಸುಳ್ಯ, ಕರ್ನಾಟಕ ಬಾಲವಿಕಾಸ ಅಕಾಡೆಮಿ ರಂಗಶಿಬಿರ ಮೊದಲಾದೆಡೆ ತಮ್ಮ ಸಂಗೀತ ಸಾಮರ್ಥ್ಯವನ್ನು ಪ್ರಚುರಪಡಿಸಿದ್ದಾರೆ.
ರಂಗಸಂಗೀತ ನಿರ್ದೇಶನಕ್ಕಾಗಿ ಬೈಂದೂರು, ಬೆಂಗಳೂರು, ಉಡುಪಿ, ಮುಂಬೈ ಹೀಗೆ ನಾಲ್ಕು ಬಾರಿ ರಾಜ್ಯ ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾರೆ. ಇವರು ನನ್ನ ರಚನೆಯ ಸುಮಾರು ಇಪ್ಪತ್ತು ಭಾವಗೀತೆಗಳಿಗೆ ರಾಗಸಂಯೋಜನೆ ಮಾಡಿದ್ದು ವಿವಿಧ ಸಂದರ್ಭಗಳಲ್ಲಿ ವಿವಿಧ ಗಾಯಕರಿಂದ ಹಾಡಲ್ಪಟ್ಟದೆ.
ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ಮೌನಿ. ಸಂಗೀತ ಅಂದರೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತುಬಿಡುತ್ತಿದ್ದರು. ಯಾವುದಾದರೂ ರಾಗದ ಗುಂಗಿನಲ್ಲಿ ಬಿದ್ದರೆ ನಡುರಾತ್ರಿ ಎದ್ದು ಕುಳಿತು ಕೀಬೋರ್ಡ್ನಲ್ಲಿ ಕೈಯಾಡಿಸುತ್ತಾ ಓಕೆ ಅನ್ನಿಸಿದ ಮೇಲೆ, ಕಾವ್ಯ ಇದನ್ನ ಹಾಡು ಎಂದು ಹಾಡಿಸಿ ಸಂತೃಪ್ತಿಯಿಂದ ಮತ್ತೆ ನಿದ್ದೆಗೆ ಜಾರುತ್ತಿದ್ದರು.
ಇತ್ತಿಚೆಗೆ ಅವರ ಆರೋಗ್ಯದಲ್ಲಿ ಏರುಪೇರು ಆದಮೇಲೂ ಭೇಟಿಯಾದಾಗೆಲ್ಲಾ ‘ಸುಮಾರ್ ಹಾಡೆಲ್ಲಾ ಟ್ಯೂನ್ ಮಾಡ್ಯೊಳೆ….ಎಂತ ಮಾಡ್ದು….’ ಅಂತ ನಿಟ್ಟುಸಿರು ಬಿಡ್ತಾ ಇದ್ದರು. ಅವರ ಹಳೆಯ ಕೀಬೋರ್ಡ್ ಒಂದು ರಿಪೇರಿ ಮಾಡಿಸಿ ಅಂತ ನನ್ನತ್ರ ಕೊಟ್ಟಿದ್ದರು. ಅದು ರಿಫೇರಿ ಆಗುವುದಿಲ್ಲ ಎಂದು ಗೊತ್ತಾದ ಮೇಲೆ ಒಂದು ದಿನ ಮನೆಗೆ ಹೋದಾಗ ‘ಅದು ಆದುಲೆ ಅಣ್ಣ ಅದರ ಆಯುಸ್ಸು ಮಗ್ದುಟ್ಟು’ ಎಂದು ತಮಾಷೆಗೆ ಹೇಳಿದ್ದೆ. ಅವರೂ ನಗುತ್ತಾ ‘ನನ್ನದೂ ಮುಗೀತಾ ಬಂದುಟ್ಟಲ್ಲಾ…’ ಅಂದಿದ್ದರು. ಆ ಮಾತು ಇಷ್ಟು ಬೇಗ ನಿಜ ಆಗುತ್ತೆ ಅಂತ ನಾವಂದುಕೊಂಡಿರಲಿಲ್ಲ.
– ಬಾಸುಮ ಕೊಡಗು, ರಂಗನಿರ್ದೇಶಕರು