ಐವರ್ನಾಡು ಸಹಕಾರಿ ಸಂಘದ ಸಿ.ಇ.ಒ ರವಿಪ್ರಸಾದ್ ಸಿ.ಕೆಯವರಿಗೆ ಸಾರ್ವಜನಿಕ ಬೀಳ್ಕೊಡುಗೆ

0

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆಯವರು ಮಾ.31 ರಂದು ಸ್ವಯಂ ನಿವೃತ್ತಿಗೊಳ್ಳಲಿದ್ದು ಅವರಿಗೆ ಸಾರ್ವಜನಿಕ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮವು ಮಾ.26 ರಂದು ಸಂಘದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ ರವರು ಮಾತನಾಡಿ ಸ್ವಯಂ ನಿವೃತ್ತಿಗೊಳ್ಳಲಿರುವ ರವಿಪ್ರಸಾದ್ ರವರು ಗ್ರಾಮದ ಎಲ್ಲಾ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.ಸಂಘದಿಂದ ದೊರೆಯುವ ಎಲ್ಲಾ ಸೌಲಭ್ಯವನ್ನು ಸಂಘದ ಸದಸ್ಯರಿಗೆ ನೀಡಿದ್ದಾರೆ.ಕೊರೊನಾ ಸಂದರ್ಭ ಮತ್ತು ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ನಿರ್ಮಾಣದ ಸಂದರ್ಭದಲ್ಲಿ ಕಠಿಣ ಶ್ರಮವಹಿಸಿ ಹಗಲಿರುಳು ದುಡಿದಿದ್ದಾರೆ.ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ.ತಾಲೂಕಿನ ಸಹಕಾರಿ ಸಂಘಗಳು ಮಾಡದ ಕೆಲವು ಜನಪರ ಕೆಲಸವನ್ನು ನಮ್ಮ ಸಹಕಾರಿ ಸಂಘ ಮಾಡಿದೆ ಇದರಿಂದ ಸಂಘದ ಸದಸ್ಯರಿಗೆ ಅನುಕೂಲವಾಗಿದೆ ಎಂದು ಹೇಳಿ ನಿವೃತ್ತಿ ಜೀವನಕ್ಕೆ ಶುಭಕೋರಿದರು.


ಸ್ವಯಂ ನಿವೃತ್ತಿ ಹೊಂದಲಿರುವ ರವಿಪ್ರಸಾದ್ ಸಿ.ಕೆ.ಯವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ,ಚಿನ್ನದ ಬ್ರಾಸ್ ಲೇಟ್ ತೊಡಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಐವರ್ನಾಡು ಗ್ರಾಮ ಪಂಚಾಯತ್,ಸಂಘದ ಸಿಬ್ಬಂದಿ ವರ್ಗ ,ಮಾಜಿ ಅಧ್ಯಕ್ಷರುಗಳು,ನಿರ್ದೇಶಕರು,ಹಾಗೂ ಗ್ರಾಮಸ್ಥರು ಅಭಿನಂದಿಸಿದರು.


ಬಳಿಕ ಮಾಜಿ ಅಧ್ಯಕ್ಷರಾದ ಚಂದ್ರಕೋಲ್ಚಾರ್,ನೂಜಾಲು ಪದ್ಮನಾಭ ಗೌಡ,ಡಾ.ಬಾಲಸುಬ್ರಹ್ಮಣ್ಯ ಭಟ್ ರವರು ನಿವೃತ್ತಿ ಜೀವನಕ್ಕೆ ಶುಭಹಾರೈಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ರವಿಪ್ರಸಾದ್ ಸಿ.ಕೆಯವರು ಮಾತನಾಡಿ ತಾನು 19 ವರ್ಷಗಳ ಕಾಲ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವೃತ್ತಿಯಿಂದ ನಿವೃತ್ತಿ ಹೊಂದಿದರು ಸಹಕಾರ ಸಂಘದ ಜೊತೆ ಸದಾ ಇರುವುದಾಗಿ ಮತ್ತು ಸಹಕಾರ ನೀಡುವುದಾಗಿ ಅವರು ಹೇಳಿದರು.

ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್ .ಮನ್ಮಥರವರಿಗೆ ಸನ್ಮಾನ

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ,ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ, ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ,ಸಂಘದ ಆಂತರಿಕ ಲೆಕ್ಕ ಪರಿಶೋಧಕ ಅನಂತಕೃಷ್ಣ ಚಾಕೋಟೆ,ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ಉಪಸ್ಥಿತರಿದ್ದರು.


ಸಂಘದ ನಿರ್ದೇಶಕರಾದ ಕುಸುಮಾಧರ ಎಂ.ಸಿ,ಮಹೇಶ್ ಜೆ,ಭವಾನಿ ಎಂ.ಸಿ,ಸರಸ್ವತಿ ಕೆ, ಕೃಷ್ಣ ಬೆಳ್ಚಪ್ಪಾಡ,ಪುರಂದರ,ಚಂದ್ರಶೇಖರ ಎ.ಎಸ್,ವಾಸುದೇವ ಬಿ.ಕೆ, ಹಾಗೂ ಸಂಘದ ಸದಸ್ಯರು,ಸಿಬ್ಬಂದಿ ವರ್ಗದವರು,ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ದೇವಕಿ ಸಿ.ಜಿ.ಪ್ರಾರ್ಥಿಸಿ,ಸಹಾಯಕ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಸ್ವಾಗತಿಸಿ, ಸಿಬ್ಬಂದಿ ಅಜಿತ್ ನಿಡುಬೆ ಕಾರ್ಯಕ್ರಮ ನಿರೂಪಿಸಿ,ನಿರ್ದೇಶಕ ಸತೀಶ್ ಎಡಮಲೆ ವಂದಿಸಿದರು.