ಕೋವಿ ಠೇವಣಿ ಸಂದರ್ಭ ಬೆಳೆ ನಷ್ಟವಾದರೆ ಹೊಣೆ ಹೊರುವವರು ಯಾರು ?
ತಹಶೀಲ್ದಾರರಿಗೆ ಅಹವಾಲು ಸಲ್ಲಿಕೆ
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರೈತರು ತಮ್ಮ ಕೋವಿಯನ್ನು ಪೋಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕೆಂಬ ಚುನಾವಣಾ ಆಯೋಗದ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಸುಳ್ಯ ತಾಲೂಕು ಕಚೇರಿ ಎದುರು ಹಕ್ಕೊತ್ತಾಯ ಸಭೆ ನಡೆಸಿದರು.
ಸುಮಾರು ೨೦೦ಕ್ಕೂ ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ಹಾಗೂ ಕೃಷಿಕ ಎಂ.ವೆಂಕಪ್ಪ ಗೌಡರು, ನಾವು ರೈತರು. ನಮ್ಮ ಬೆಳೆ ರಕ್ಷಣೆಗಾಗಿ ನಾವು ಕೋವಿಯನ್ನು ಪಡೆದುಕೊಂಡಿದ್ದೇವೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಠೇವಣಿ ಇಡಬೇಕೆನ್ನುವ ಕ್ರಮ ಸರಿಯಲ್ಲ. ಅದರಿಂದ ವಿನಾಯಿತಿ ಕೊಡಬೇಕು ಎಂದು ಹೇಳಿದರಲ್ಲದೆ, ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಕಡಾನೆ ಸಹಿತ ಇತರ ಕಾಡು ಪ್ರಾಣಿಗಳು ತೋಟಕ್ಕೆ ಬಂದು ಕೃಷಿ ನಾಶ ಮಾಡುವ ಸಂದರ್ಭ ಅದನ್ನು ಓಡಿಸುವ ನಿಟ್ಟಿನಲ್ಲಿ ನಮಗೆ ಕೋವಿಯ ಅವಶ್ಯಕತೆ ಇದೆ. ಕೋವಿ ಠೇವಣಿ ಇಡುವ ಸಂದರ್ಭ ಬೆಳೆ ನಷ್ಟ ಆದರೆ ಅದರ ಹೊಣೆ ಹೊರುವವರು ಯಾರು. ಆ ಬಗ್ಗೆ ಅಧಿಕಾರಿಗಳು ಸ್ಪಷ್ಟ ಪಡಿಸಬೇಕು” ಎಂದು ಹೇಳಿದರು.
ಬಳಿಕ ಮಾತನಾಡಿದ ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಪಿ.ಜಗದೀಶರು, ಸಂಪಾಜೆಯಲ್ಲಿ ಕೃಷಿಕರ ತೋಟಕ್ಕೆ ನಿರಂತರ ಆನೆಗಳ ಹಾವಳಿ ಇದೆ. ಗಾಳಿಯಲ್ಲಿ ಗುಂಡು ಹೊಡೆದು ಕಾಡುಪ್ರಾಣಿಗಳನ್ನು ನಾವು ಓಡಿಸಿ ಬೆಳೆ ರಕ್ಷಣೆ ಮಾಡುವ ಸಂದರ್ಭ, ಕೋವಿ ಡೆಪಾಸಿಟ್ ಇಡಬೇಕೆನ್ನುವುದು ಸರಿಯಲ್ಲ. ರೈತರ ಮೇಲೆ ದಬ್ಬಾಳಿಕೆ ಮಾಡುವ ಅಧಿಕಾರಿಗಳ ಕ್ರಮ ಸರಿಯಲ್ಲ'. ಅಪರಾಧ ಹಿನ್ನಲೆಯಿರುವವರಿಂದ ಡೆಪಾಸಿಟ್ ಇರಿಸಲಿ. ಆದರೆ ಎಲ್ಲಾ ರೈತರು ಇಡಬೇಕೆನ್ನುವುದು ಯಾವ ನ್ಯಾಯ' ಎಂದವರು ಹೇಳಿದರು. ಕೃಷಿಕ ವಿಶ್ವನಾಥ ರಾವ್ ಕಾಂತಮಂಗಲ ಮಾತನಾಡಿ,
ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ. ಕೇರಳದಲ್ಲಿ ರಿಯಾಯಿತಿ ಇದೆ. ನಮ್ಮಲ್ಲಿ ಯಾಕಿಲ್ಲ” ಎಂದು ಪ್ರಶ್ನಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಮಾತನಾಡಿ, ನಾವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಅವರು ಕೃಷಿಕರ ಸಮಸ್ಯೆಯನ್ನು ಅರಿತು ನ್ಯಾಯ ಕೊಡಬೇಕು. ಮೊನ್ನೆ ಸಭೆಯಲ್ಲಿಯೂ ನಾವು ಕೇಳಿಕೊಂಡಾಗ ಎಸ್.ಪಿ.ಯವರು ಮಾತ್ರ ಕೋವಿ ಡೆಪಾಸಿಟ್ ನಿಂದ ವಿನಾಯಿತಿ ಕೊಡಲು ಒಪ್ಪುವುದೇ ಇಲ್ಲ ಎಂದ ಅವರು, ಕೋವಿ ಡೆಪಾಸಿಟ್ ಸಂದರ್ಭ ನಮ್ಮ ಕೃಷಿಗೆ ತೊಂದರೆಯಾದಲ್ಲಿ ಆ ಕೃಷಿ ನಷ್ಟಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಪೋಲೀಸ್ ವರಿಷ್ಠಾಧಿಕಾರಿಗಳೇ ಕಾರಣ ಎಂದು ಹೇಳಿ ಅವರ ಮೇಲೆಯೇ ಕೇಸು ಕೊಡಬೇಕಾಗಿ ಬರಬಹುದು ಎಂದು ಹೇಳಿದರು.
ಕೃಷಿಕ ಪಾರೆ ಶಂಬಯ್ಯ, ಉಮಾಶಂಕರ್ ತೊಡಿಕಾನ, ಭರತ್ ಕುಮಾರ್, ಕಾಡು ಪ್ರಾಣಿಯಿಂದ ಕೃಷಿ ನಷ್ಟದ ಕುರಿತು ಮಾತನಾಡಿದರು. ಬಳಿಕ ಹಕ್ಕೊತ್ತಾಯ ಸಭೆ ಆಗುತಿದ್ದಲ್ಲಿಗೆ ತಹಶೀಲ್ದಾರ್ ಮಂಜುನಾಥರು ಬಂದರು. ಈ ವೇಳೆ ಸೇರಿದವರು ತಮ್ಮ ಅಹವಾಲು ಸಲ್ಲಿಸಿದರು. ಬಳಿಕ ಮಾತನಾಡಿದ ತಹಶೀಲ್ದಾರರು ನೀವು ಮೊನ್ನೆಯೇ ಅಹವಾಲು ಸಲ್ಲಿಸಿದ್ದೀರಿ. ಅದನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗಿದೆ. ಇಂದು ಸಂಜೆಯೊಳಗೆ ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿ ನಿಮಗೆ ವಿಚಾರ ತಿಳಿಸುತ್ತೇವೆ ಎಂದು ಹೇಳಿದರು.
ನಮಗೆ ಕೋವಿ ಡೆಪಾಸಿಟ್ ಮಾಡಲು ಮಾ.೩೧ ಕೊನೆಯ ದಿನ ಆಗಿದ್ದರೂ ಪೋಲೀಸರು ಈಗಲೇ ಒತ್ತಡ ಹಾಕುತಿದ್ದಾರೆ. ಇದು ಸರಿಯಲ್ಲ ಎಂದು ದಾಮೋದರ ನಾರ್ಕೋಡು ಮತ್ತಿತರರು ಹೇಳಿದಾಗ, “ಮಾ.೩೧ ಕೊನೆಯ ದಿನ. ಆ ದಿನದೊಳಗೆ ಇಡಿ. ಪೋಲೀಸರು ಯಾರಿಗೂ ಒತ್ತಡ ಹಾಕದಂತೆ ನಾವು ಅವರಿಗೆ ತಿಳಿಸುತ್ತೇವೆ ಎಂದು ತಹಶೀಲ್ದಾರ್ ಹೇಳಿದರು. ಪೋಲೀಸ್ ಠಾಣೆಯಲ್ಲಿ ಕೋವಿ ಡೆಪಾಸಿಟ್ ಇಡುವ ಸಂದರ್ಭ ಹಣ ಪಡೆಯಬಾರದು. ಮತ್ತು ಡ್ಯಾಮೇಜ್ ಆಗದಂತೆ ಕೋವಿಗಳಿಗೆ ರಕ್ಷಣೆ ನೀಡಬೇಕು ಎಂದು ರೈತರು ಮನವಿ ಮಾಡಿಕೊಂಡರು.
ಪಿ.ಎಸ್.ಗಂಗಾಧರ್ ಮನವಿ ಪತ್ರವನ್ನು ಓದಿದರು. ಕೃಷಿಕ ವಿಜಯ ಕುಮಾರ್ ಎಂ.ಡಿ. ವಂದಿಸಿದರು. ದಿನೇಶ್ ಮಡಪ್ಪಾಡಿ, ನೂಜಾಲು ಪದ್ಮನಾಭ ಗೌಡ, ಪದ್ಮನಾಭ ಭಟ್ ಕನಕಮಜಲು, ರಾಕೇಶ್ ಕುಂಟಿಕಾನ, ಬಾಲಗೋಪಾಲ ಸೇರ್ಕಜೆ, ಗಂಗಾಧಧರ ಕೆ., ಎಸ್.ಬಾಲಪ್ರಕಾಶ್, ಕೃಷ್ಣಪ್ಪ ಕೆ, ನಿರಂಜನ ಕೆ, ಚಿನ್ನಪ್ಪ ಎನ್, ಜಯಶಿವ ಮಡಪ್ಪಾಡಿ, ಹರೀಶ್ಚಂದ್ರ ಕೋಡ್ತುಗುಳಿ, ಪಿ.ಚೆನ್ನಕೇಶವ, ಗೋಪಾಲಕೃಷ್ಣ ಭಟ್, ಕೇಶವ ಕೆ, ದಯಾನಂದ ಎಂ, ವೆಂಕಪ್ಪ ನಾಯ್ಕ ಕೆ, ಎಸ್. ಹೊನ್ನಪ್ಪ, ಹೆಚ್ ಮೋನಪ್ಪ ಗೌಡ, ಕೆ. ಶಂಕರ ನಾರಾಯಣ, ಎನ್, ಲಕ್ಷ್ಮೀನಾರಾಯಣ ಭಟ್, ಶಿವಪ್ರಸಾದ್ ಎನ್.ಪಿ., ಶ್ರೀಧರ ಗೌಡ ಅಡಿಗೈ, ದೇವಿಪ್ರಸಾದ್ ಆಳ್ವ, ಕೃಷ್ಣ ಭಟ್ ದೊಡ್ಡತೋಟ, ಮೋಹನ ಗುತ್ತಿಗಾರು, ಉತ್ತಪ್ಪ ಮುಂಡೋಡಿ, ಜಗದೀಶ್ ಪಿ.ಎಲ್., ಜಯಪ್ರಕಾಶ್ ಕೆ, ರಾಮ್ ಕುಮಾರ್ ಹೆಬ್ಬಾರ್, ಹೇಮಂತ್ ಮಠ, ಜಯರಾಮ ರೈ ಜಾಲ್ಸೂರು, ಕುಶಾಲಪ್ಪ ಗೌಡ ದೇವಚಳ್ಳ, ಸುಬ್ಬರಾವ್ ಪೈಲೂರು, ಗಣೇಶ್ ಕೆ, ದೇವಯ್ಯ ಗೌಡ ತೊಡಿಕಾನ, ರಕ್ಷಿತ್ ಎ.ಜೆ, ರಾಮಣ್ಣ ಪೂಜಾರಿ ಪೊಡುಂಬ, ಪರಮೇಶ್ವರ ನಾಯ್ಕ್ ಕೆಂಬಾರೆ, ಹರಿಪ್ರಸಾದ್ ಗಬಲ್ಕಜೆ, ದಿವಾಕರ ಪೈ ಮಜಿಗುಂಡಿ, ಮಾಧವ ಗೌಡ ಮಡಪ್ಪಾಡಿ, ಅಶೋಕ್ ಚೂಂತಾರು, ಲೋಲಜಾಕ್ಷ ಭೂತಕಲ್ಲು, ಕರುಣಾಕರ ಕೊಡೆಂಕಿರಿ, ಹರೀಶ್‌ಮೂರ್ಜೆ,
ಮೊದಲಾದವರು 200ಕ್ಕೂ ಅಧಿಕ ಮಂದಿ ಇದ್ದರು.