ಬಿರು ಬಿಸಿಲಿನಲ್ಲಿ ಬಸ್, ವ್ಯಾನ್ ಗಳಿಗಾಗಿ ಕಾದು ಬಸವಳಿಯುತ್ತಿರುವ ವಿದ್ಯಾರ್ಥಿಗಳು, ಪ್ರಯಾಣಿಕರು
ಮಾಧ್ಯಮಗಳ ಸತತ ಎಚ್ಚರಿಕೆಯ ಬಳಿಕವೂ ಅಧಿಕೃತರ ದಿವ್ಯ ನಿರ್ಲಕ್ಷ್ಯ
ಸೋಣಂಗೇರಿಯಲ್ಲಿ ಬಸ್ಸು ತಂಗುದಾಣ ವಿಲ್ಲದೆ ಪ್ರಯಾಣಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಸಂಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ರಸ್ತೆ ಅಭಿವೃದ್ಧಿ ಆಗುವ ಮೊದಲು ಪ್ರಯಾಣಿಕರಿಗೆ ಎರಡು ತಗುದಾಣಗಳು ಇದ್ದವು.ಆದರೆ ರಸ್ತೆ ಅಭಿವೃದ್ಧಿ ಕಾಮಗಾರಿ ಸಂದರ್ಭ ಈ ಎರಡು ತಂಗುದಾಣವನ್ನು ತೆರವುಗೊಳಿಸಲಾಗಿತ್ತು.
ಆದರೆ ಅಭಿವೃದ್ಧಿ ಕಾರ್ಯ ನಡೆದು ಸುಮಾರು ಆರು ತಿಂಗಳುಗಳೇ ಕಳೆದರೂ ತಂಗುದಾಣ ಮಾತ್ರ ಇಂದಿಗೂ ಕೂಡ ಆಗಲಿಲ್ಲ.
ಬೆಳ್ಳಾರೆ ಮತ್ತು ಗುತ್ತಿಗಾರಿನಿಂದ ಬಂದು ಸೇರುವ ಅದೇ ರೀತಿ ಸುಳ್ಯ ಹಾಗೂ ಜಾಲ್ಸೂರು ಕಡೆಯಿಂದ ಬಂದು ಸೇರುವ ಕೂಡು ರಸ್ತೆ ಇದಾಗಿದ್ದು ಇಲ್ಲಿ ಬಸ್ಸು ಮತ್ತು ಸರ್ವಿಸ್ ವ್ಯಾನ್ ಗಳಿಗಾಗಿ ನೂರಾರು ಪ್ರಯಾಣಿಕರು ಕಾಯುವ ಪ್ರದೇಶವು ಕೂಡ ಆಗಿದೆ. ಸುಳ್ಯ ಕಡೆ ಬರುವ ಪ್ರಯಾಣಿಕರಿಗೆ ಸೋಣಂಗೇರಿ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಲಯನ್ಸ್ ಸಂಸ್ಥೆಯು ನಿರ್ಮಿಸಿದ ಬಸ್ ತಂಗುದಾಣವಿತ್ತು.ಬೆಳ್ಳಾರೆ ಗುತ್ತಿಗಾರು ಕಡೆಗೆ ತೆರಳುವವರಿಗೆ ಅಲ್ಲೇ ಅಂಚೆ ಕಚೇರಿ ಇದ್ದ ಕಟ್ಟಡದಲ್ಲಿ ತಂಗುದಾಣ
ನಿರ್ಮಿಸಲಾಗಿತ್ತು.
ಪ್ರಸ್ತುತ ಸಂದರ್ಭದಲ್ಲಿ ಈ ಎರಡು ತಂಗುದಾಣವಿಲ್ಲದೆ ಪ್ರಯಾಣಿಕರು ಬಿರು ಬಿಸಿಲಿಗೆ ರಸ್ತೆ ಬದಿಯಲ್ಲಿ ನಿಂತು ಬಸ್ಸಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ವಯೋವೃದ್ಧರು, ವಿಕಲಚೇತನರ ಪಾಡಂತೂ ತುಂಬಾ ದಯನೀಯ ಸ್ಥಿತಿಯಲ್ಲಿ ಕಂಡು ಬರುತ್ತಿದೆ.
ಈ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿರುವ ಸ್ಥಳೀಯರು ‘ಸ್ಥಳೀಯರ ಕೋರಿಕೆಯ ಮೇರೆಗೆ ಜಾಲ್ಸೂರು ಪಂಚಾಯತ್ ವತಿಯಿಂದ ಕಳೆದ ಎರಡು ತಿಂಗಳ ಮೊದಲು ತಾತ್ಕಾಲಿಕವಾಗಿ ತಂಗುದಾಣ ಸ್ಥಾಪಿಸಲು ಮುಂದಾಗಿ ಕೆಲಸ ಆರಂಭಿಸಿ ಜಲ್ಲಿ ಕಲ್ಲುಗಳನ್ನು ಹೊಯ್ಗೆಯನ್ನು ತಂದು ಹಾಕಲಾಗಿತ್ತು. ಆದರೆ ಪಿಡಬ್ಲ್ಯೂಡಿ ಇಂಜಿನಿಯರ್ ರವರ ಆಕ್ಷೇಪದಿಂದ ಕೆಲಸ ಸ್ಥಗಿತಗೊಂಡಿದ್ದು ತಾತ್ಕಾಲಿಕ ತಂಗುದಾಣವು ಇಲ್ಲ ಶಾಶ್ವತ ತಂಗುದಾಣವು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಸಹಾಯಕತೆಯನ್ನು ಹಂಚಿಕೊಂಡಿದ್ದಾರೆ.
ಏನೇ ಆಗಲಿ ಸಂಬಂಧಪಟ್ಟ ಇಲಾಖೆಯವರು ಕೂಡಲೆ ಎಚ್ಚೆತ್ತು ಬಿಸಿಲಿನ ಬೇಗೆಗೆ ಕಂಗೆಡುತ್ತಿರುವ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ.