ವಿಚಾರಣೆ ವೇಳೆ ರಾಜಸ್ಥಾನ್ ಮೂಲದವಳೆಂಬ ಮಾಹಿತಿ
ನಕ್ಸಲ್ ತಂಡದವಳಲ್ಲ: ಪೊಲೀಸರ ಸ್ಪಷ್ಟನೆ
ಕೂಜಿಮಲೆಯಲ್ಲಿ ನಿನ್ನೆ ಕಂಡು ಬಂದು ನಕ್ಸಲ್ ಮಹಿಳೆ ಎಂಬ ವದಂತಿಗೆ ಕಾರಣವಾಗಿದ್ದ ಅಪರಿಚಿತ ಮಹಿಳೆ ನಕ್ಸಲ್ ನಿಗ್ರಹ ಪಡೆಯ ಕೂಂಬಿಂಗ್ ವೇಳೆ ವಶ ವಾಗಿದ್ದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಈಕೆ ರಾಜಸ್ಥಾನ ಮೂಲದವಳೆಂಬ ಮಾಹಿತಿ ದೊರೆತಿದ್ದು, ನಕ್ಸಲ್ ತಂಡದವಳಲ್ಲ ಎಂದು ಪೋಲೀಸರು ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಪರಿಚಿತಳಾದ ಈ ಮಹಿಳೆ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದುದನ್ನು ಕೆಲವರು ನೋಡಿದ್ದರು. ಕೂಜಿಮಲೆಯಲ್ಲಿ ಹಾಗೂ ಐನೆಕಿದು ಬಳಿ ಕೆಲವು ದಿನಗಳ ಹಿಂದೆ ನಕ್ಸಲರು ಬಂದಿದ್ದ ಹಿನ್ನೆಲೆಯಲ್ಲಿ ಈಕೆ ನಕ್ಸಲ್ ತಂಡದ ಸದಸ್ಯಳಾಗಿರಬಹುದೆಂಬ ಗುಮಾನಿಯ ಆಧಾರದಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಂಡಿತ್ತು. ಈ ವೇಳೆ ಅಪರಿಚಿತ ಮಹಿಳೆಯನ್ನು ಎ.ಎನ್.ಎಫ್. ನವರು ಮತ್ತು ಕೊಡಗು ಸಶಸ್ತ್ರ ದಳದವರು ಪತ್ತೆ ಮಾಡಿದ್ದರು. ಈಕೆ ಮಾನಸಿಕ ಅಸ್ವಸ್ಥ ಮಹಿಳೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರಿಗೊಪ್ಪಿಸಲಾಗಿತ್ತು.
ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈಕೆಯನ್ನು ವಿಚಾರಣೆಗೊಳಪಡಿಸಿದಾಗ ರಾಜಸ್ಥಾನ ಮೂಲದವಳೆಂದು ಗೊತ್ತಾಗಿದೆ. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಆಶ್ರಮಕ್ಕೆ ಸೇರ್ಪಡೆಗೊಳಿಸಲಾಗುವುದೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಕೂಜಿಮಲೆ ಎಸ್ಟೇಟ್ ನಲ್ಲಿ ಕಾಣಿಸಿಕೊಂಡ ಮಹಿಳೆ ನಕ್ಸಲ್ ಎಂಬ ಸುದ್ದಿ ತಿಳಿದ ಎ ಎನ್ ಎಫ್ ತಂಡ ಮತ್ತು ಕೊಡಗು ಜಿಲ್ಲಾ ಸಶಸ್ತ್ರ ಪಡೆಯ ಸಿಬ್ಬಂದಿಗಳು ಎಸ್ಟೇಟ್ ಗೆ ಭೇಟಿ ನೀಡಿ ಪರಿಶೀಲಿಸಿ ಆಕೆಯನ್ನು ಪತ್ತೆ ಹಚ್ಚಿ ಮಡಿಕೇರಿಗೆ ಕರೆತರಲಾಗಿದೆ. ರಾತ್ರಿ 2 ಗಂಟೆ ತನಕ ನಡೆದ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ರಾಮ್ ರಾಜನ್ ರವರು ಕೂಡ ಉಪಸ್ಥಿತರಿದ್ದು ಆಕೆಯ ಸಂಪೂರ್ಣ ವಿಚಾರಣೆಗೆ ಒಳಪಡಿಸಿದ ನಂತರ ಈ ಮಹಿಳೆ ನಕ್ಸಲ್ ತಂಡಕ್ಕೆ ಸೇರಿದವರು ಅಲ್ಲ ಎಂದು ದೃಢಪಟ್ಟಿದೆ. ಕೊಡಗು ಜಿಲ್ಲಾ ಪೊಲೀಸ್ ಹಾಗೂ ಎ.ಎನ್.ಎಫ್ ತಂಡ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.