ಕುಡೆಕಲ್ಲು ದೈವಸ್ಥಾನದ ಆಡಳ್ತೆದಾರರಾಗಿ ಕಿರಿಯ ವಯಸ್ಸಿನ ಬಿಪಿನ್ ಕುಡೆಕಲ್ಲು ನೇಮಕ

0

ಕುಡೆಕಲ್ಲು ಕುಟುಂಬದ ತರವಾಡು ದೈವಸ್ಥಾನದ ಆಡಳ್ತೆದಾರರಾಗಿ ಕಿರಿಯ ವಯಸ್ಸಿನ ಬಿಪಿನ್ ಕುಡೆಕಲ್ಲು ರವರನ್ನು ಮುಂದಿನ ಅವಧಿಗೆ ಶ್ರೀ ದೈವಗಳಕಳಿಯಾಟದ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ಇತಿಹಾಸ ಮತ್ತು ಪರಂಪರೆ ಹೊಂದಿರುವ ಪ್ರತಿಷ್ಠಿತ ಕುಡೆಕಲ್ಲು ಕುಟುಂಬದಲ್ಲಿ ದೈವಸ್ಥಾನಕ್ಕೆ ಸಂಬಂಧಪಟ್ಟ ಯಾವುದೇ ವಿಚಾರಗಳು ಬಂದಾಗ ಅವುಗಳ ತೀರ್ಮಾನ ನಡೆಯುವುದು ದೈವದ ಮುಂದೆಯೇ.
ದೈವಸ್ಥಾನಕ್ಕೆ ಸಂಬಂಧಿಸಿದಂತೆ ದೈವದ ಪೂಜಾರಿ ಅಥವಾ ಆಡಳ್ತೆದಾರರನ್ನು ದೈವವೇ ಹುಡುಕಿ ಕೈ ಹಿಡಿದು ಆರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.
ಕಳೆದ ಜನವರಿ ತಿಂಗಳಲ್ಲಿ ಆಡಳ್ತೆದಾರರಾಗಿದ್ದ ವಿಶ್ವನಾಥ ಗೌಡ ಕುಡೆಕಲ್ಲು ರವರು ಆಕಸ್ಮತ್ತಾಗಿ ದೈವಾಧೀನರಾದ ಹಿನ್ನೆಲೆಯಲ್ಲಿ ಈ ವರ್ಷದ ಕಳಿಯಾಟ ಉತ್ಸವದ ಸಮಯದಲ್ಲಿ ಆಡಳ್ತೆದಾರರ ತೆರವಾಗಿತ್ತು.

ಕಳಿಯಾಟ ಸಮಯದಲ್ಲಿ ಕುಟುಂಬದ ಯಜಮಾನರು ಹಾಗೂ ಹಿರಿಯರು ಮುಂದೆ ನಿಂತು ಕಳಿಯಾಟ ಉತ್ಸವದ ಜವಬ್ದಾರಿ ನಿರ್ವಹಿಸಿದರು. ಸಂಪ್ರದಾಯದಂತೆ ಕಳಿಯಾಟದ ಮೂರನೇ ದಿನದಂದು ಆಡಳ್ತೆದಾರರ ಆಯ್ಕೆಯ ಕುರಿತು ದೈವದ ಮುಂದೆ ಪ್ರಸ್ತಾಪಿಸಿದ ಮೇರೆಗೆ ವಿಷ್ಣುಮೂರ್ತಿ ದೈವವು ಹಿಂದಿನ ಆಡಳ್ತೆದಾರ ದಿ.ವಿಶ್ವನಾಥ ಗೌಡ ರವರ ಹಿರಿಯ ಪುತ್ರ ಬಿಪಿನ್ ಕುಡೆಕಲ್ಲು ರವರನ್ನು ಕೈ ಹಿಡಿದುಕೊಂಡು ಕರೆದುಕೊಂಡು ಬಂದು ದೈವಸ್ಥಾನದ ಮುಂದೆ ನಿಲ್ಲಿಸಿ ಆಡಳ್ತೆದಾರರ ಸೇವೆ ಸಲ್ಲಿಸುವಂತೆ ದೈವವು ಆಜ್ಞಾಪಿಸಿತು.

ಕುಟುಂಬದ ಎಲ್ಲಾ ಸದಸ್ಯರು ದೈವದ ಆಯ್ಕೆಯನ್ನು ಸಮ್ಮತಿಸಿದರು. ಕುಡೆಕಲ್ಲು ಕುಟುಂಬದ ಇತಿಹಾಸದಲ್ಲಿ ಅತ್ಯಂತ ಕಿರಿಯ 40 ರ ವಯಸ್ಸಿನ ಆಡಳ್ತೆದಾರರ ಆಯ್ಕೆ ಯಾಗಿರುವುದು ಇದು ಪ್ರಥಮತವಾಗಿದೆ ಎಂದು ತಿಳಿದು ಬಂದಿದೆ. ಇವರು ಹಿಂದಿನ ಆಡಳ್ತೆದಾರರಾದ ದಿ.ದಾಸಪ್ಪ ಗೌಡ ಕುಡೆಕಲ್ಲು ರವರ ಮೊಮ್ಮಗ.

ಇವರು ಇಂಜಿನಿಯರ್ ಪದವೀಧರರಾಗಿದ್ದು ಪ್ರಸ್ತುತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಆಲೆಟ್ಟಿಯ ಮೈಂದೂರು ಎಂಬಲ್ಲಿ ತಾಯಿ ಮತ್ತು ಪತ್ನಿ , ಮಕ್ಕಳೊಂದಿಗೆ ವಾಸವಾಗಿದ್ದಾರೆ.