ಸುಳ್ಯದಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ

0

ಬೂತ್ ಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಗೆಲ್ಲಿಸಿ : ವಿನಯ ಕುಮಾರ್ ಸೊರಕೆ

ಕಾರ್ಯಕರ್ತರು ನಿದ್ದೆ ಬಿಟ್ಟು ಕೆಲಸ ಮಾಡಿ, ಅಭ್ಯರ್ಥಿಯನ್ನು ಗೆಲ್ಲಿಸಿ : ರಮಾನಾಥ ರೈ

ಮುಲಾಜಿಲ್ಲದೆ ಗ್ಯಾರಂಟಿ ಯೋಜನೆಯನ್ನು ಪ್ರತೀ ಮನೆಗೂ ತಿಳಿಸಿ : ಐವನ್ ಡಿಸೋಜಾ

ಈ ಬಾರಿಯ ಲೋಕಸಭಾ ಚುನಾವಣೆ ಈ ಹಿಂದೆ ನಡೆದ ಚುನಾವಣೆಗಳಿಂತ ಭಿನ್ನವಾಗಿದೆ. ಬದಲಾವಣೆಯ ಪರ್ವ ಆರಂಭಗೊಂಡಿದೆ. ಅದನ್ನು ಸಾಕಾರಗೊಳಿಸಲು ನಮ್ಮ ಕಾರ್ಯಕರ್ತರು , ನಾಯಕರು ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಬೂತ್‌ಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಪಣ ತೊಡಬೇಕು. ಈ ಹಿಂದೆ ಕಾಂಗ್ರೆಸ್ ಸರಕಾರ ಮಾಡಿದ ಸಾಧನೆ ಹಾಗೂ ಈಗ ರಾಜ್ಯದ ಕಾಂಗ್ರೆಸ್ ಸರಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಪ್ರತೀ ಮನೆ ಮನೆಗೆ ಹೋಗಿ ತಿಳಿಸುವ ಕೆಲಸ ನಾವು ಮಾಡಬೇಕು ಎಂದು ರಾಜ್ಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.


ಮಾ.೩೦ರಂದು ಸುಳ್ಯದ ಸುಳ್ಯ ಸೆಂಟರ್‌ನಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ೩೩ ವರ್ಷಗಳಿಂದ ಈ ಜಿಲ್ಲೆಯಲ್ಲಿ ಬಿಜೆಪಿ ಎಂ.ಪಿ. ಇದ್ದಾರೆ. ಅವರು ಈ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ. ಜನ ಪರವಾಗಿ ಯಾವ ಕೆಲಸ ಮಾಡಿದ್ದಾರೆ. ಸಂಕಷ್ಟದಲ್ಲಿರುವ ಅಡಿಕೆ ಕೃಷಿಕರಿಗೆ ಅನುಕೂಲವಾಗುವಂತೆ ಏನು ಮಾಡಿದ್ದಾರೆ? . ಏನೂ ಮಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಹಾಗಲ್ಲ. ನುಡಿದಂತೆ ನಡೆದ ಸರಕಾರ ಇದ್ದರೆ ಅದು ರಾಜ್ಯದ ಕಾಂಗ್ರೆಸ್ ಸರಕಾರ. ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ ಇದೇ ಬಿಜೆಪಿಗರು ಇದೆಲ್ಲ ಆಗಲು ಇದೆಯಾ. ಗ್ಯಾರಂಟಿ ಕಾರ್ಡನ್ನು ಹರಿದು ಬಿಸಾಡಿ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ೫ ಗ್ಯಾರಂಟಿಗಳನ್ನು ಕೂಡಾ ನಾವು ಜಾರಿಗೊಳಿಸಿzವೆ. ೫ ವರ್ಷದಲ್ಲಿ ಪ್ರತೀ ಕುಟುಂಬಕ್ಕೆ ೩ ಲಕ್ಷ ರೂ ಸೌಲಭ್ಯ ಸಿಗವಂತೆ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯ ಮೂಲಕ ಮಾಡಿದೆ. ಇದನ್ನು ಮನೆ ಮನೆಗೆ ತಿಳಿಸುವ ಕೆಲಸ ಕಾರ್ಯಕರ್ತರು ಮಾಡಬೇಕು” ಎಂದು ಹೇಳಿದರು.


ಚುನಾವಣಾ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ರಮಾನಾಥ ರೈಯವರು ಚುನಾವಣಾ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಇದೆ. ನಮ್ಮೆಲ್ಲ ಕಾರ್ಯಕರ್ತರು, ನಾಯಕರು ನಿದ್ದೆ ಬಿಟ್ಟು ಕೆಲಸ ಮಾಡಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ. ಅವರು ಗೆದ್ದ ಬಳಿಕ ೫ ವರ್ಷಗಳ ಕಾಲ ನಿದ್ದೆ ಬಿಟ್ಟು ಈ ಜಿಲ್ಲೆಯ ಹಿತವನ್ನು ಅವರು ಕಾಪಾಡುತ್ತಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನಪರ ಕೆಲಸವನ್ನು ಮಾಡಿದೆ. ೫ ಗ್ಯಾರಂಟಿಗಳನ್ನು ಕೊಟ್ಟಿದೆ. ಇದನ್ನು ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಒಂದೂ ಮನೆಯನ್ನು ಬಿಡದಂತೆ ಹೋಗಿ ಹೇಳಬೇಕು'' ಎಂದು ಅವರು ಹೇಳಿದರು. ಈ ಜಿಲ್ಲೆಯ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಕೆಲಸ ಮಾಡಿಲ್ಲ ಎನ್ನುವುದು ಬಿಜೆಪಿಗರಿಗೆ ಗೊತ್ತಿದೆ. ಆದ್ದರಿಂದ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಕಳೆದ ಚುನಾವಣೆಯ ಸಂದರ್ಭ ಬಿಜೆಪಿ ನೀಡಿದ ಪ್ರಣಾಳಿಕೆಯ ೫ ಶೇಕಡಾವನ್ನು ಕೂಡಾ ಈಡೇರಿಸಿಲ್ಲ ಎಂದ ಅವರು, ಆದರೆ ಕಾಂಗ್ರೆಸ್ ಸರಕಾರ ಹಾಗಲ್ಲ. ಪ್ರತೀ ಬಾರಿ ಅಧಿಕಾರಕ್ಕೆ ಬಂದಾಗಲೂ ಒಂದೊಂದು ರೀತಿಯ ಜನ ಪರ ಯೋಜನೆ ತಂದಿzವೆ. ಬ್ಯಾಂಕ್ ರಾಷ್ಟ್ರೀಕರಣ, ಋಣ ಪರಿಹಾರ ಕಾಯ್ದೆ ಸೇರಿದಂತೆ ತಮಿಳು ಪುನರ್ವಸತಿದಾರರ ಸಮಸ್ಯೆ ನಿವಾರಣೆ,. ೯೪ ಸಿ ಯೋಜನೆ, ಗ್ಯಾರಂಟಿ ಸ್ಕೀಂ ಹೀಗೆ ಹಲವು ಕಾರ್ಯಕ್ರಮ ತರಲಾಗಿದೆ. ಇದೆಲ್ಲವನ್ನು ಪ್ರತೀ ಮನೆಗೆ ತಿಳಿಸಿ ಎಂದವರು ಕೇಳಿಕೊಂಡರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ,ಲಕ್ಷಾಂತರ ಕೋಟಿ ಸಾಲ ಪಡೆದು ಅದನ್ನು ಕಟ್ಟದೇ ವಿದೇಶದಲ್ಲಿ ಹೋಗಿ ಕುಳಿತವರ ಸಾಲ ಮನ್ನಾವನ್ನು ಕೇಂದ್ರದ ಬಿಜೆಪಿ ಸರಕಾರ ಮಾಡಿದ್ದು ಬಿಟ್ಟರೆ, ಜನರಿಗೆ ಉಪಯೋಗವಾಗುವಂತ ಕೆಲಸ ಮಾಡಿಲ್ಲ. ಅದನ್ನು ಮಾಡಿರುವುದು ಗ್ಯಾರಂಟಿ ಸ್ಕೀಂ ಗಳ ಮೂಲಕ ಸಿದ್ಧರಾಮಯ್ಯರ ಸರಕಾರ. ಆದ್ದರಿಂದ ನಮ್ಮ ಸರಕಾರದ ಯೋಜನೆ ಪ್ರತೀ ಮನೆಗೆ ತಿಳಿಸುವ ಕೆಲಸ ನಾವೆಲ್ಲರೂ ಮಾಡಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಮಾತನಾಡಿ ಬಿಜೆಪಿ ನಾಯಕರು ಅಭಿವೃದ್ಧಿಗೆ ಆದ್ಯತೆ ನೀಡಿz ಇಲ್ಲ. ಅಭಿವೃದ್ಧಿ ಎಂದರೆ ಏನೆಂದೇ ಅವರಿಗೆ ಗೊತ್ತಿಲ್ಲ. ಇಲ್ಲಿಯ ಸಂಸದರಾದ ನಳಿನ್ ಕಟೀಲ್ ರವರು ಪಂಪ್ ವೆಲ್ ಕಾರ್ಯ ಮಾಡಿದ್ದು ನೋಡುವಾಗಲೇ ಗೊತ್ತಾಗುತ್ತದೆ ಅಭಿವೃದ್ಧಿಯ ಕೆಲಸವನ್ನು ಎಂದ ಅವರು, ನಮ್ಮ ಕಾರ್ಯಕರ್ತರು ಯಾವುದೇ ಮುಲಾಜಿಲ್ಲದೆ ನಮ್ಮ ಸರಕಾರದ ಯೋಜನೆಯನ್ನು ಮನೆ ಮನೆಗೆ ತಿಳಿಸುವ ಕೆಲಸ ಮಾಡಿ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಹೇಳಿದರು.


ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಮಾತನಾಡಿ, “ನನ್ನ ಮೇಲೆ ಭರವಸೆ ಇಟ್ಟು ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ಕಾರ್ಯಕರ್ತರ, ನಾಯಕರ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡುವೆ. ಸಮೃದ್ಧ ಭಾರತಕ್ಕೆ ಪೂರಕವಾಗಿ ಬಲಿಷ್ಠ ದ.ಕ. ಜಿಲ್ಲೆಯ ನಿರ್ಮಾಣವೇ ನನ್ನ ಸಂಕಲ್ಪ” ಎಂದು ಹೇಳಿದರು.


ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಹಿರಿಯರಾದ ಪಾಜಪಳ್ಳ ಇಸಾಕ್ ಸಾಹೇಬ್, ಡಾ| ರಘು ಬಿ., ವಿಧಾನಸಭಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಕೃಷ್ಣಪ್ಪ ಜಿ ವೇದಿಕೆಯಲ್ಲಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಸ್ವಾಗತಿಸಿ, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಎನ್.ಜಯಪ್ರಕಾಶ್ ರೈ ವಂದಿಸಿದರು. ಅಶೋಕ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.