ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ -1837 ನಾಟಕ ಯೂಟ್ಯೂಬ್‌ನಲ್ಲಿ ಅನಾವರಣ

0

ಎ. 5 ರಂದು ರಂಗಮನೆಯಲ್ಲಿ ಅಮರಕ್ರಾಂತಿ ಸ್ಮರಣೆ

1837ರಲ್ಲಿ ನಡೆದ ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟಕ್ಕೆ 187 ವರ್ಷ ತುಂಬುವ ಹಾಗೂ ಸುಳ್ಯದಿಂದ ಮಂಗಳೂರುವರೆಗೆ ನಡೆಸಲಾದ ಅಮರಕ್ರಾಂತಿ ಕಾಲ್ನಡಿಗೆ ಜಾಥಾಕ್ಕೆ 26 ವರ್ಷ ತುಂಬುವ ದಿನವಾದ ಎ. 5ರಂದು ಜೀವನ್‌ರಾಂ ಸುಳ್ಯರವರ ರಂಗಮನೆಯಲ್ಲಿ ಅಮರಕ್ರಾಂತಿ ಸ್ಮರಣೆ ಕಾರ್ಯಕ್ರಮ ಹಾಗೂ ಜಾಥಾದ ಸಂದರ್ಭ ರೂಪಿಸಿ, ಪರಿಷ್ಕರಣೆ ಮಾಡಲಾದ ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ ನಾಟಕವನ್ನು ಯೂಟ್ಯೂಬ್‌ಗೆ ಅಪ್ಲೋಡ್ ಮಾಡುವ ಕಾರ್ಯಕ್ರಮ ನಡೆಯಿತು.


ಈ ಚುಟುಕು ಕಾರ್ಯಕ್ರಮದಲ್ಲಿ ಅಮರಕ್ರಾಂತಿ ಕಾಲ್ನಡಿಗೆ ಜಾಥಾದ ರೂವಾರಿ ದಿ.ಎನ್.ಎಸ್.ದೇವಿಪ್ರಸಾದ್ ಸಂಪಾಜೆಯವರ ಧರ್ಮಪತ್ನಿ ಇಂದಿರಾ ದೇವಿಪ್ರಸಾದ್‌ರವರು ಜೀವನ್‌ರಾಂ ನಿರ್ದೇಶಿಸಿ ಹತ್ತಾರು ಕಡೆ ಪ್ರದರ್ಶಿಸಲಾದ ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ -1837 ನಾಟಕದ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಅನಾವರಣಗೊಳಿಸಿದರು. ಜೀವನ್‌ರಾಂ ಸುಳ್ಯರವರು ಎನ್..ಎಸ್. ದೇವಿಪ್ರಸಾದರ ನೇತೃತ್ವದಲ್ಲಿ ಡಾ. ಶಿಶಿಲರು ಬರೆದ ಅಮರಕ್ರಾಂತಿ ನಾಟಕ ರಂಗಕ್ಕಿಳಿದ ಬಗೆಯನ್ನು ವಿವರಿಸಿದರು. ಎಂ.ಬಿ.ಸದಾಶಿವ, ಡಾ. ಪೂವಪ್ಪ ಕಣಿಯೂರು, ಹರೀಶ್ ಬಂಟ್ವಾಳ್ ಅನಿಸಿಕೆ ವ್ಯಕ್ತಪಡಿಸಿದರು.


ಗಂಗಾಧರ ಮಟ್ಟಿ, ಲಕ್ಷ್ಮೀನಾರಾಯಣ ಕಜೆಗದ್ದೆ, ಶ್ರೀಮತಿ ಲತಾ ಮಧುಸೂದನ್, ಜಯಪ್ರಕಾಶ್ ಕುಕ್ಕೆಟ್ಟಿ, ಶ್ರೀಹರಿ ಪೈಂದೋಡಿ, ರವೀಶ್ ಪಟ್ಟಂಬೈಲು ಮೊದಲಾದವರು ಉಪಸ್ಥಿತರಿದ್ದರು. ಮಮತಾ ಕಲ್ಮಕಾರು, ಆರತಿ ಪುರುಷೋತ್ತಮ, ಕೆ.ಆರ್.ಗೋಪಾಲಕೃಷ್ಣ, ಮಮತಾ ಪಡ್ಡಂಬೈಲುರವರು ದೇಶಭಕ್ತಿಗೀತೆಗಳನ್ನು ಹಾಡಿ ರಂಜಿಸಿದರು. ಪ್ರಸನ್ನ ಐವರ್ನಾಡು ವಂದಿಸಿದರು.